ವಿಟ್ಲ ಸಮೀಪದ ಮಂಗಲಪದವಿನಲ್ಲಿರುವ ಸಹಕಾರಿ ಸಂಸ್ಥೆಯೊಂದಕ್ಕೆ ಕಳ್ಳರು ನುಗ್ಗಿದ ಘಟನೆ ಹಸಿರಾಗಿರುವಂತೆಯೇ ಮತ್ತೊಂದು ಕಳವು ಕೃತ್ಯ ಬುಧವಾರ ತಡರಾತ್ರಿ ನಡೆದಿದೆ.
ಉಕ್ಕುಡದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಯ ಹಿಂಭಾಗದ ಗೋಡೆಯನ್ನು ತುಂಡರಿಸಿ ಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು ಅಡಗಿಸಿಟ್ಟ ಸುಮಾರು 10.5 ಲಕ್ಷ ಮೌಲ್ಯದ ಚಿನ್ನಾಭರಣ ಕಳವುಗೈಯಲಾಗಿದೆ. ಘಟನೆ ಉಕ್ಕುಡ ಚೆಕ್ ಪೋಸ್ಟ್ ಸಮೀಪ ಬುಧವಾರ ತಡ ರಾತ್ರಿ ನಡೆದಿದೆ.
ಉಕ್ಕುಡ ನಿವಾಸಿ ಅಬ್ಬಾಸ್ ಹಾಜಿ ಅವರ ಮನೆಯಿಂದ ಕಳ್ಳತನ ನಡೆದಿದೆ.
ಮನೆ ಮಂದಿ ಬುಧವಾರ ಸಂಜೆ ಮನೆಗೆ ಬೀಗ ಹಾಕಿ ಕುಂಬ್ರದ ಸಂಬಂಧಿಕರಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿಂದ ರಾತ್ರಿ 12.30ಕ್ಕೆ ಮನೆಗೆ ಹಿಂದಿರುಗಿದ್ದು, ಮುಂಭಾಗದ ಬಾಗಿಲು ತೆಗೆದು ಒಳಹೋಗುತ್ತಿದ್ದಂತೆ ಕೃತ್ಯ ಬೆಳಕಿಗೆ ಬಂದಿದೆ.
ಹಿಂಬದಿಯ ಬಾಗಿಲು ತೆರೆದಿತ್ತು. ಕಪಾಟುಗಳನ್ನು ಜಾಲಾಡಿದ ಕಳ್ಳರು ಚಿನ್ನಾಭರಣ ಕದ್ದೊಯ್ದದ್ದು ಗಮನಕ್ಕೆ ಬಂದಿದೆ. ಹುಡುಕಾಟ ನಡೆಸಿದ ಬಳಿಕ ರಾತ್ರಿ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಬೆಳಗ್ಗೆ ತನಿಖೆ ಆರಂಭಿಸಿದರು. ಬೆಳಗ್ಗೆ ಬಂಟ್ವಾಳ ವೃತ್ತ ನಿರೀಕ್ಷಕ ಪ್ರಕಾಶ್ ಭೇಟಿ ನೀಡಿ, ಶ್ವಾನ ದಳ ಹಾಗೂ ಬೆಳಚ್ಚು ತಜ್ಞರನ್ನು ಕರೆಸಿ ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.