ಕೇಂದ್ರ ಸರಕಾರದ ವೈಫಲ್ಯವನ್ನು ಖಂಡಿಸಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಭಾರತ ನರಳುತ್ತಿದೆ ಜಾಗೃತಿ ಅಭಿಯಾನದ ಅಂಗವಾಗಿ ಡಿ. 6ರಂದು ಬಿ.ಸಿ.ರೋಡಿನಲ್ಲಿ ಎಲ್‌ಸಿಡಿ ಮೂಲಕ ಬೀದಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ಬಂಟ್ವಾಳ ಕ್ಷೇತ್ರದ ಯುವ ಕಾಂಗ್ರೆಸ್ ಉಸ್ತುವಾರಿ ಮಹೇಶ್ ನಾಯ್ಕ್ ತಿಳಿಸಿದ್ದಾರೆ.
ಶನಿವಾರ ಬಿ.ಸಿ.ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. 9ರಂದು ಮಂಗಳೂರಿನಲ್ಲಿ ಈ ಜನಜಾಗೃತಿ ಅಭಿಯಾನ ಸಮಾಪನಗೊಳ್ಳಲಿದೆ ಎಂದರು.
ಅಂದು ಸಂಜೆ ಕರಾವಳಿ ಉತ್ಸವ ಮೈದಾನದಿಂದ ಬೃಹತ್ ಪಂಜಿನ ಮೆರವಣಿಗೆಯು ಹೊರಟು ಬಲ್ಮಠ ಮೈದಾನದಲ್ಲಿ ಸಂಪನ್ನಗೊಳ್ಳಲಿದೆ. ಈ ಮೆರವಣಿಗೆಯಲ್ಲಿ ಬಂಟ್ವಾಳ ಕ್ಷೇತ್ರದಿಂದ ಒಂದು ಸಾವಿರ ಮಂದಿ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸುವರು. ಅಲ್ಲದೆ, ಯುವ ಕಾಂಗ್ರೆಸ್‌ನ ರಾಜ್ಯ, ಜಿಲ್ಲಾ ನಾಯಕರು, ಪಕ್ಷದ ಮುಖಂಡರು, ಜಿಲ್ಲಾ ಉಸ್ತುವಾರಿ ಸಚಿವರು, ಕಾಂಗ್ರೆಸ್ ಶಾಸಕರು ಭಾಗವಹಿಸಲಿದ್ದಾರೆ ಎಂದರು.
ಹಲವಾರು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ, ಚುನಾವಣೆ ಪೂರ್ವದಲ್ಲಿ ಕೊಟ್ಟಿರುವ ಯಾವ ಭರವಸೆಯನ್ನು ಈಡೇರಿಸಿಲ್ಲ. ಜಿಎಸ್‌ಟಿ ಜಾರಿಯಿಂದ ದೇಶದ ಉದ್ಯಮ ವಲಯ ತಲ್ಲಣಗೊಂಡಿದೆ. ಅಡುಗೆ ಅನಿಲ, ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯಿಂದ ಬಡ ವರ್ಗದ ಜನತೆ ಸಂಕಷ್ಟಕ್ಕೊಳಗಾಗಿದ್ದಾರೆ ಎಂದ ಅವರು, ಇದೀಗ ಚುನಾವಣೆಯ ದೃಷ್ಠಿಯನ್ನಿಟ್ಟು ಕೆಲ ವಸ್ತುಗಳ ತೆರಿಗೆ ಇಳಿಸುವ ಮೂಲಕ ಜನಸಾಮಾನ್ಯರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಬ್ಲಾಕ್ ಅಧ್ಯಕ್ಷರಾದ ಮಾಯಿಲಪ್ಪ ಸಾಲಿಯಾನ್, ಅಬ್ಬಾಸ್ ಅಲಿ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಲ್ಲಿಕಾಶೆಟ್ಟಿ, ಜಯಂತಿ ಪೂಜಾರಿ, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಉಸ್ಮಾನ್, ಸಿದ್ದಿಕ್ ಗುಡ್ಡೆಯಂಗಡಿ, ಮಧುಸೂಧನ್ ಶೆಣೈ, ಅಲ್ವಿನ್, ನೌಫಲ್ ಕನ್ಯಾನ, ಸುರೇಶ್ ಪೂಜಾರಿ ಮೊದಲಾದವರಿದ್ದರು. ಇದೇ ವೇಳೆ “ಭಾರತ ನರಳುತ್ತಿದೆ” ಎಂಬ ಲಾಂಛನವುಳ್ಳ ಪೊಸ್ಟರ್ ಅನಾವರಣಗೊಳಿಸಲಾಯಿತು.