ಅಂತರಂಗದಲ್ಲಿ ಆನಂದವನ್ನು ಅನುಭವಿಸುವುದಕ್ಕೆ ಸಿದ್ಧತೆ ಬೇಕು. ಜೀವನದ ಉದ್ಧಾರಕ್ಕೆ ಆನಂದ ರಸ ಅವಶ್ಯಕ. ಇದನ್ನು ಅನುಭವಿಸುವುದನ್ನೇ ಆನಂದ ಪರಂಪರೆ ಎಂದರು. ಅಜ್ಞಾನದ ಕತ್ತಲನ್ನು ನಿವಾರಿಸಿ ಸುಜ್ಞಾನದ ಕಣ್ಣನ್ನು ಅರಳಿಸುವ ಕೆಲಸ ಗುರುಚರಿತ್ರೆ ಮಾಡುತ್ತದೆ. ಮನಸ್ಸಿನ ಪರಿವರ್ತನೆಯನ್ನೂ ಪ್ರವಚನದ ಮೂಲಕ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಸೂರ್ಯನನ್ನೇ ಗುರುವಾಗಿ ಸ್ವೀಕರಿಸಿದ ಶ್ರೀಗುರುದತ್ತಾತ್ರೇಯರು ಧರ್ಮಸೂತ್ರದಲ್ಲಿ ಜೀವನ ಸಾಗಿಸುವ ವಿಧಾನವನ್ನು ಬೋಧಿಸಿದರು. ಜಗತ್ತಿನ ಸಕಲ ಜೀವರಾಶಿಗಳಿಗೆ ಜೀವ ತುಂಬಿಸುವ ಸೂರ್ಯ ಸಮುದ್ರದ ಉಪ್ಪು ನೀರನ್ನೇ ಸಿಹಿಯಾಗಿಸಿ ಮಳೆಯ ರೂಪದಲ್ಲಿ ಇಳೆಗೆ ತಂಪೆರೆಯುವನು. ಹಾಗೆಯೇ ಪ್ರತಿಯೊಂದರಲ್ಲಿಯೂ ನಾವು ಕಲಿಯುವವಂತಹದ್ದು ಬಹಳಷ್ಟಿದೆ. ಗುರುತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಅರ್ಥಪೂರ್ಣವಾಗಿಸಿಕೊಂಡಾಗ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬಹುದು” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ದತ್ತಜಯಂತಿಯ ಸುಸಂದರ್ಭ ಆಯೋಜಿಸಿದ್ದ ಶ್ರೀ ಗುರುಚರಿತ್ರೆ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮಲಾರು ಜಯರಾಮ ರೈ ಶ್ರೀ ಗುರುಚರಿತ್ರೆ ಪ್ರವಚನಗೈದರು.