Categories: ವಾಸ್ತವ

ಕ್ಲೀನ್ ಮನಸ್ಸು, ಸ್ವಚ್ಛ ಭಾರತ

  • ಹರೀಶ ಮಾಂಬಾಡಿ

www.bantwalnews.com

‘ಸಾರ್…..ದಯವಿಟ್ಟು ಅಲ್ಲಿ ಎಸೀಬೇಡಿ’

ಜಾಹೀರಾತು

ಹೀಗನ್ನುತ್ತಿದ್ದಂತೆ ಅವರು ಕೇಳಿದವನನ್ನು ದುರುದುರು ಎಂದು ನೋಡಿದರು. ಕಣ್ಣು ದೊಡ್ಡದಾಯಿತು. ಮುಖ ದಪ್ಪಗಾಯಿತು. ಮೊದಲೇ ವ್ಯಗ್ರರಾಗಿದ್ದವರು ಮರು ಪ್ರಶ್ನಿಸಿದರು.

ಹಾಗಾದರೆ ನಾನು ಎಲ್ಲಿ ಎಸೀಬೇಕು’

ಜಾಹೀರಾತು

ಚೆಂಡು ಕೇಳಿದವನ ಅಂಗಣಕ್ಕೆ ಬಂದು ಬಿತ್ತು!. ತೀರ್ಪು ಕೇಳಿದ ವ್ಯಕ್ತಿಯೇ ಕೊಡುವಂತೆ ಆತನನ್ನು ನೋಡಿದರು. ಅವರ ಉರುಟು ಮುಖದಲ್ಲೊಂದು ನಗುವಿನ ಸಣ್ಣ ಮಿಂಚು ಸುಳಿಯಿತು. ಅದು ವ್ಯಂಗ್ಯವೋ, ನೀನೇನು ಮಾಡುವೆ ಎಂಬ ಸವಾಲೋ ಗೊತ್ತಾಗಲಿಲ್ಲ.

‘ನೀವು ಅಲ್ಲಿ ಯಾಕೆ ಎಸಿಯೋದು? ಹಾಗೆ ನೀವು ಎಸೆದು ಹೋದ ಮರುಕ್ಷಣವೇ ಅಲ್ಲಿ ನಾಯಿಗಳು ದಾಳಿ ಇಡುತ್ತವೆ. ಅವು ಅದನ್ನು ಕಚ್ಚಿಕೊಂಡು ಸೀದಾ ನಡು ಮಾರ್ಗಕ್ಕೆ ಬರುತ್ತವೆ. ಅಷ್ಟರೊಳಗೆ ನೀವು ಎಸೆದ ಗಂಟು ಬಿಚ್ಚಿಕೊಳ್ಳುತ್ತದೆ. ಅದರೊಳಗೆ ನೀವು ಏನೇನನ್ನೆಲ್ಲ ಹುದುಗಿಸಿ ಇಟ್ಟಿದ್ದೀರೋ ಅವೆಲ್ಲವೂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬೀಳುತ್ತದೆ. ಅದು ನೋಡಲು ಚೆನ್ನಾಗಿರುತ್ತಾ ಸಾರ್’

ಹೀಗೆ ಅವರನ್ನು ಕೇಳಿದಾತ ಪಟ್ಟು ಬಿಡಲಿಲ್ಲ.

ಜಾಹೀರಾತು

ಅವರು ತುಂಬಾ ಗಂಭೀರವಾಗಿಯೇ ಯೋಚಿಸಿದರು. ಮತ್ತೆ ಪ್ರಶ್ನಿಸಿದರು.

‘ಹಾಗಾದರೆ ನಾನು ಎಲ್ಲಿ ಎಸೀಬೇಕು’

ಮತ್ತೆ ಅದೇ ದಾರಿಗೆ ಬಂದರು ಅನ್ನಿಸಿತು. ನಾನು ಇಷ್ಟು ಮಾತನಾಡಿದ್ದೂ ವೇಸ್ಟ್ ಆಯಿತಲ್ಲ, ಅಲ್ಲ, ಇಷ್ಟೊಂದು ಜನ, ಅದೇ ಮಾರ್ಗದಲ್ಲಿ ಸುತ್ತಾಡುತ್ತಿದ್ದರಲ್ಲಾ ಅವರ್ಯಾರೂ ಇದು ತಮ್ಮ ಉಸಾಬರಿಯೇ ಅಲ್ಲ ಎಂದು ಹೋಗುತ್ತಿದ್ದಾಗ, ನನ್ನದು ಅಧಿಕ ಪ್ರಸಂಗವಾಯಿತೋ ಎಂದೆಲ್ಲ ಕೇಳಿದಾತನಿಗೆ ಅನ್ನಿಸತೊಡಗಿತು. ಆದರೂ ಸಮಾಧಾನದಿಂದಲೇ ಆ ವ್ಯಕ್ತಿಗೆ ಹೇಳಿದರು.

ಜಾಹೀರಾತು

‘ಸಾರ್ ನೀವು ಎಲ್ಲಿ ಎಸೀಬೇಕು ಅನ್ನೋದು ನಿಮ್ಮ ಪ್ರಾಬ್ಲಮ್ಮು. ಸಮಸ್ಯೆಯಾದರೆ ಕಾರ್ಪೊರೇಶನ್ನು, ಮುನ್ಸಿಪಾಲಿಟಿ, ಪಂಚಾಯತ್ತು ಇತ್ಯಾದಿಗಳೆಲ್ಲಾ ಇವೆ. ಆದರೆ ಇದು ಪಬ್ಲಿಕ್ಕು ಜಾಗ. ಇಲ್ಲೆಲ್ಲಾ ನಿಮ್ಮದನ್ನ ಎಸ್ಯೋದು ಸರಿ ಕಾಣ್ಸಲ್ಲ. ಹಾಗೆ ಎಸೀಬಾರದು ಎಂಬ ಕಾನೂನೂ ಇದೆ.’

ಅವರೂ ಯೋಚಿಸತೊಡಗಿದರು. ಪ್ರತ್ಯುತ್ತರವೋ, ವಾದ ಸರಣಿಗೋ ಸಜ್ಜಾಗುತ್ತಿದ್ದಾರೆ ಎಂದೆನಿಸತೊಡಗಿತು.

ನವದೆಹಲಿ, ಬೆಂಗಳೂರು, ಮಂಬಯಿ….ಹೀಗೆ ಯಾವುದೇ ಮಹಾನಗರವನ್ನು ತೆಗೆದುಕೊಳ್ಳಿ. ಇಂಥದ್ದೊಂದು ಘಟನೆ ನಡೆಯುತ್ತಲೇ ಇರುತ್ತದೆ. ಇದಕ್ಕೆ ಮಹಾನಗರವೇ ಬೇಕು ಎಂದೇನೂ ಇಲ್ಲ, ಕೆಲವೊಂದು ಮುನ್ಸಿಪಾಲಿಟಿ, ನಗರ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇಂಥದ್ದೊಂದು ಮಾತುಕತೆಗಳು ನಡೆಯುತ್ತವೆ.

ಜಾಹೀರಾತು

ಮಹಾನಗರವೊಂದರ ಫಳಫಳ ಹೊಳೆಯುವ ರಸ್ತೆಗೆ ತಾಗಿಕೊಂಡೇ ಇರುವ ಜಾಗದಲ್ಲಿ ಸಾರ್ವಜನಿಕರೋ, ಇನ್ಯಾರೊ ಗೊತ್ತಿಲ್ಲ, ಪ್ರತಿ ದಿನ ಕಸದ ರಾಶಿ ಗುಪ್ಪೆಯಾಗುತ್ತದೆ. ಮಧ್ಯಾಹ್ನದ ವೇಳೆಗೆಲ್ಲಾ ಅದು ನಡು ಮಾರ್ಗದಲ್ಲಿರುತ್ತದೆ. ಅದನ್ನು ಎತ್ತಿ ಪಕ್ಕಕ್ಕಿಟ್ಟರೂ ನಾಯಿಗಳು ಮತ್ತೆ ಅದೇ ಜಾಗಕ್ಕೆ ಎಳೆದು ತರುತ್ತವೆ. ಸ್ಥಳೀಯ ಸಂಸ್ಥೆಗೆ ಈ ಬಗ್ಗೆ ದೂರು ನೀಡಿದರೆ, ಒಮ್ಮೆಗೆ ಅದರ ವಿಲೇವಾರಿ ಮಾಡುತ್ತಾರೆ. ಮತ್ತೆ ಅದೇ ಪರಿಸ್ಥಿತಿ. ಹಾಗಾದರೆ ಅಲ್ಲಿ ಕಸ ಎಸೆಯುವವರು ಯಾರು?

ಮಿಲಿಯಗಟ್ಟಲೆ ರುಪಾಯಿ ಸುರಿದು ಕೊಂಡ ಕಾರಿನ ಕಿಟಕಿಯನ್ನು ಸ್ವಲ್ಪವೇ ಸರಿಸಿ ಮೂಗು ಮುಚ್ಚಿ ಅಲ್ಲಿಂದಲೇ ಡಿಸ್ಕಸ್ ತ್ರೋ ಮಾಡಿದಂತೆ ರೊಯ್ಯನೆ ಎಸೆಯುವ ಹೈಫೈ ಮಂದಿ. ಬೆಳ್ಳಂಬೆಳಗ್ಗೆ ತಮ್ಮ ನಾಯಿಯನ್ನೂ ಒಂದು ದೊಡ್ಡ ಕಟ್ಟನ್ನೂ ಹೊತ್ತುಕೊಂಡು ವ್ಯಾಯಾಮ ಮಾಡುತ್ತಾ ಒಂದು ಕೈಯಲ್ಲಿ ರಪ್ಪನೆ ಎಸೆಯುವ ಬೂಟುಗಾಲಿನ ಮಂದಿ ಎಲ್ಲೋ ಮಾಂಸದಡುಗೆ, ವ್ಯವಹಾರ ಮಾಡಿ, ಅದರ ತ್ಯಾಜ್ಯವನ್ನೆಲ್ಲಾ ದೊಡ್ಡ ಬಾಸ್ಕೆಟ್ಟಿನಲ್ಲಿ ತುಂಬಿ ಕತ್ತಲಾಗುತ್ತಿದ್ದಂತೆ ಯಾರೂ ನೋಡೋದಿಲ್ಲ ಎಂದು ಖಚಿತಗೊಂಡ ಮೇಲೆ ತಮ್ಮ ಕೆಲಸದವರನ್ನು ಕಳಿಸಿ ಎಸೆಯುವಂತೆ ಮಾಡುವ ಮಂದಿ. ಹೀಗೆ ಕಸ ಎಸೆಯುವವರಿಗೆ ಅದೇ ಜಾಗ ಬೇಕು. ಒಂದು ಕಟ್ಟು ಕಸ ಕಂಡರೆ ಅವರು ಮತ್ತಷ್ಟು ಕಾನ್ಫಿಡೆಂಟಾಗಿರುತ್ತಾರೆ. ಅವರನ್ನು ಏನಾದರೂ ಪ್ರಶ್ನಿಸಿದರೋ ಅವರು ಎಸೆದಿದ್ದಾರಲ್ಲ, ನಿಮ್ಮದೇನು ಕಿರಿಕಿರಿ ಎಂಬ ಪೆದಂಬು ಉತ್ತರ ರೆಡಿಯಾಗಿರುತ್ತದೆ.

ಅಂಥದ್ದೇ ಒಂದು ಕೆಟಗರಿಗೆ ಸೇರಿದ ಕಸ ಎಸೆಯುವ ವ್ಯಕ್ತಿಗೂ ಎಸೆಯಬಾರದೆಂದವರಿಗೂ ನಡೆಯುವ ಸಂಭಾಷಣೆಯ ಮುಂದಿನ ಭಾಗಕ್ಕೆ ಹೋಗೋಣ.

ಜಾಹೀರಾತು

‘ಹಾಗಾದರೆ ನಾನು ಎಲ್ಲಿ ಎಸೀಬೇಕು’ ಎನ್ನುತ್ತಲೇ ಹುಬ್ಬು ಹಾರಿಸಿ ಕೇಳಿದವನನ್ನು ನೋಡುತ್ತಾ ವಿಜೃಂಭಿಸಿದ ವ್ಯಕ್ತಿ ಹೀಗಂದರು.

‘ನೋಡಿ ಇವ್ರೇ,, ನಾನು ಎಜುಕೇಟೆಡ್. ದೊಡ್ಡ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದೋನು. ಇದೇ ಊರಲ್ಲಿ ಮೂವತ್ತು ವರ್ಷಗಳಿಂದ ಇದ್ದೋನು. ನನಗೂ ಕಸ ಇಲ್ಲಿ ಎಸೀಬಾರದು ಎಂಬ ಪರಿಜ್ಞಾನ ಇದೆ. ನನಗೂ ಊರು ಚಂದವಾಗಿರಬೇಕು ಎಂಬ ಪರಿಜ್ಞಾನ ಇದೆ. ನಿಮಗೆ ಮಾತ್ರ ಅಲ್ಲ, ಹಾಗಿದ್ದರೂ ನಾನು ಇಲ್ಲಿ ಕಸ ಎಸೀತೇನೆ ಯಾಕೆ ಗೊತ್ತಾ? ನಾಲ್ಕೈದು ದಿನಗಳಿಂದ ಕಾರ್ಪೊರೇಶನ್ ವಾಹನ ನಮ್ಮ ಮನೇ ಕಸ ಕೊಂಡೇ ಹೋಗಲಿಲ್ಲ’

ಹೀಗಂದಾಗ ಕೇಳಿದಾತ ಮತ್ತೆ ಪ್ರಶ್ನಿಸಿದರು.

ಜಾಹೀರಾತು

‘ಸ್ವಾಮೀ, ಕಸ ಎತ್ತುವ ವಾಹನ ಬಂದಿತ್ತಲ್ಲ, ನೀವು ಕಸ ಇಟ್ಟಿರದಿದ್ದರೆ ಅವರೇನ ಮಾಡೋದು’

ಮತ್ತೆ ಉತ್ತರಿಸಿದರು ಆಸಾಮಿ. ‘ನೋಡಿ ಸ್ವಾಮಿ, ನಾನು ಗಾಡಿಯ ಪಕ್ಕ ಹೋಗಿ ಕಸ ಕೊಡೋದಿಲ್ಲ, ಅವರು ನನ್ನ ಮನೇ ಬಾಗಿಲಿಗೆ ಬರಬೇಕು, ಅಣ್ಣಾ ಕಸ ಇದ್ದರೆ ಕೊಡಿ ಎಂದು ನನ್ನನ್ನು ಕೇಳಬೇಕು, ನಾವೇನು ದುಡ್ಡು ಕೊಡುದಿಲ್ವಾ? ಹಾಗಿದ್ದಾಗ ನಾನು ಕಸ ಕೊಡ್ತೇನೆ, ಇಲ್ಲದಿದ್ದರೆ ಬಿಸಾಡುತ್ತೇನೆ’

ಇಂಥ ಮನುಷ್ಯರೊಂದಿಗೆ ಇಷ್ಟು ಹೊತ್ತು ಮಾತನಾಡಿದ್ದಕ್ಕೆ ಪ್ರಶ್ನೆ ಕೇಳಿದಾತ ಜುಗುಪ್ಸೆಪಟ್ಟರು. ಮುಂದಿನ ವಿಲೇವಾರಿಗೆ ಕಾರ್ಪೊರೇಶನ್ ಕಡೆ ಹೆಜ್ಜೆಯಿಟ್ಟರು.

ಜಾಹೀರಾತು

ಬೆಂಗಳೂರು ಎಂಬ ಮಹಾಶಹರದಲ್ಲಿ ನಾಲ್ಕೂವರೆ ಸಾವಿರ ಟನ್ ಕಸ ಪ್ರತಿದಿನ ಉದ್ಭವವಾಗುತ್ತದೆ. ಇನ್ನು ಹುಬ್ಬಳ್ಳಿ, ಮಂಗಳೂರುಗಳಲ್ಲೂ ಅದರ ಅರ್ಧದಷ್ಟಾದರೂ ತ್ಯಾಜ್ಯ ಇದ್ದೇ ಇರಬೇಕು. ಇವನ್ನೆಲ್ಲ ವಿಲೇವಾರಿ ಮಾಡೋದು ಸಣ್ಣ ಕೆಲಸವೇನೂ ಅಲ್ಲ. ಎರಡು ಬಕೆಟುಗಳು, ಅದರಲ್ಲಿ ಕಸ ತುಂಬಿಸಿ ಕೊಡೋದು ದೊಡ್ಡ ಕೆಲಸವಾ? ಪ್ರತಿಯೊಬ್ಬ ನಾಗರಿಕನಿಗೂ ಅವನದ್ದೇ ಆದ ಕರ್ತವ್ಯಪ್ರಜ್ಞೆ ಇದೆ. ಇನ್ನೊಬ್ಬ ಮಾಡಲಿ ಎಂದು ಕಾಯುವುದು ಸರಿಯಲ್ಲ. ಹೀಗಾಗಿಯೇ ಅದೆಷ್ಟೋ ಸಮಸ್ಯೆಗಳು ಇತ್ಯರ್ಥವಾಗದೆ ಹಾಗೇ ಉಳಿದಿವೆ. ಇಲ್ಲವಾದರೆ ಮೇಲೆ ಉಲ್ಲೇಖಿಸಿದ ಮನುಷ್ಯ, ಬೀದಿ ಬದಿಯಲ್ಲಿ ಕಸ ಎಸೆಯುವ ಬದಲು ತನ್ನ ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟ ಕಾರ್ಪೊರೇಶನ್ ಅಧಿಕಾರಿಗಳನ್ನು ಸಂಪರ್ಕಿಸಿದ್ದರೂ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು. ಅಲ್ಲೀವರೆಗೆ ಹೋಗಲು ಅವರಿಗೆ ಸಮಯವೇ ಸಿಗೋದಿಲ್ಲ.

ಆಡಳಿತವೂ ಅಷ್ಟೇ ದಂಡ ವಿಧಿಸುವುದನ್ನು ಕಟ್ಟುನಿಟ್ಟಾಗಿ ಪಾಲಿಸುವುದಿಲ್ಲ. ಕಸ ವಿಲೇವಾರಿಗೆ ಸಹಕರಿಸಿ ಎಂದು ನಾಗರಿಕರಿಗೆ ತಿಳಿಸುತ್ತವೆ. ಆದರೆ ನಾಗರಿಕರು ಸಿದ್ಧವಾಗಿದ್ದರೂ ಆಡಳಿತ ನಿಸ್ತೇಜವಾಗಿರುತ್ತದೆ. ಮತ್ತೆ ಬೀದಿಬದಿಯಲ್ಲಿ ಕಸ ಪ್ರತ್ಯಕ್ಷವಾಗುತ್ತದೆ.

ಯಾವುದೋ ಒಂದು ದಿನ ಬೀದಿ ಗುಡಿಸಿದರೆ ಸ್ವಚ್ಛ ಭಾರತ ಪರಿಕಲ್ಪನೆ ಸಾಕಾರವಾಗುವುದಿಲ್ಲ. ಅದೊಂದು ಆರಂಭವಷ್ಟಷ್ಟೇ. ಸ್ವಚ್ಛ ಭಾರತ ಪರಿಕಲ್ಪನೆಗೆ ಮೊತ್ತಮೊದಲನೆಯದಾಗಿ ಬೇಕಾದದ್ದು ಸ್ವಚ್ಛ ಮನಸ್ಸಿನ ಪರಿಕಲ್ಪನೆ. ಎಲ್ಲವನ್ನೂ ಆಡಳಿತವೇ ಮಾಡಬೇಕು ಎಂದು ನಿರೀಕ್ಷಿಸೋದೂ ತಪ್ಪು. ವಿದೇಶಗಳಲ್ಲಿ ತೆರಳುವಾಗ ಅತಿ ಶಿಸ್ತಿನಿಂದ ಕೂಡಿರುವ ನಾವು ಅದ್ಹೇಗೆ ಭಾರತಕ್ಕೆ ಬಂದಾಗ ಅಶಿಸ್ತಿನ ವರ್ತನೆ ತೋರುತ್ತೇವೆ?

ಜಾಹೀರಾತು

ಇದು ರಸ್ತೆ ಬದಿ ಕಸ ಎಸೆಯುವುದಕ್ಕಷ್ಟೇ ಸೀಮಿತವಾದದ್ದಲ್ಲ. ಎಲ್ಲೆಂದರಲ್ಲಿ ಉಗುಳುವುದು, ಪ್ರವಾಸಿ ತಾಣಗಳಲ್ಲಿ ಎಸೆಯೋ ಪ್ರವೃತ್ತಿಯನ್ನು ಬದಲಾಯಿಸಬೇಕಾಗಿದೆ.

ಬೀದಿ ಬದಿ, ರಸ್ತೆ ಪಕ್ಕ ಕಸ ಎಸೆಯುವ ಮನಸ್ಸುಗಳೂ ಇಂದು ಸ್ವಚ್ಛಗೊಳ್ಳುವ ಅಗತ್ಯವಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.