ಇಂದಿನ ವಿಶೇಷ

ಬಂಟ್ವಾಳನ್ಯೂಸ್ – ಎರಡನೇ ವರ್ಷದ ಮೊದಲ ದಿನ

  • ಹರೀಶ ಮಾಂಬಾಡಿ, ಸಂಪಾದಕ

ಕ್ಯಾಲೆಂಡರ್ ಹಾಳೆ 2017, ನವೆಂಬರ್ 10 ತೋರಿಸುತ್ತಿದೆ.

ವರ್ಷದ ಹಿಂದೆ ಇದೇ ದಿನ ಬಂಟ್ವಾಳನ್ಯೂಸ್ ಸುದ್ದಿಗಳನ್ನು ನೀಡಲು ಆರಂಭಿಸಿತ್ತು. ಪ್ರತಿದಿನ ಏನಿದೆ ಇದರಲ್ಲಿ ಎಂದು ನೀವು ಇಣುಕಿ ನೋಡದೇ ಇದ್ದರೆ ನಾನು ಇದನ್ನು ಬರೆಯುತ್ತಲೇ ಇರಲಿಲ್ಲ. ಪ್ರತಿದಿನ ವೃತ್ತಪತ್ರಿಕೆಗಳ ಹಾಳೆ ತಿರುವಿ ಹಾಕುತ್ತಿದ್ದ, ಟಿ.ವಿ. ನೋಡುತ್ತಿದ್ದ ಬಂಟ್ವಾಳದವರು ಮೊಬೈಲ್ ಕ್ಲಿಕ್ ಮಾಡಿ ಏನಿದೆ ಸುದ್ದಿ ಎಂದು ನೋಡುವಂತೆ ಮಾಡಿದ ಮೊದಲ ವೆಬ್ ಪತ್ರಿಕೆ ನಿಮ್ಮ ಬಂಟ್ವಾಳನ್ಯೂಸ್ ಎಂಬುದು ಈಗ ಇತಿಹಾಸ. ನಿಮ್ಮ ಮುಂದಿರುವುದು ಒಂದು ಪ್ರಯತ್ನ. ಇದೀಗ ಎರಡನೇ ಸಂವತ್ಸರಕ್ಕೆ ಕಾಲಿಡುತ್ತಿದೆ. ಅಂದೂ ಹೇಳಿದ್ದೆ, ಇಂದೂ ಹೇಳುತ್ತೇನೆ. ಬಂಟ್ವಾಳನ್ಯೂಸ್ ಸುತ್ತಮುತ್ತಲಿನ ಆಯ್ದ ಪ್ರಮುಖವೆನಿಸಿದ ವಿಚಾರಗಳು, ಸುದ್ದಿ ಹಾಗೂ ಲೇಖನಗಳನ್ನಷ್ಟೇ ಒದಗಿಸುತ್ತದೆ. ಬ್ರೇಕಿಂಗ್ ನ್ಯೂಸ್ ನ ಆತುರ ನಮಗಿಲ್ಲ. ಯಾವ ಪ್ರಚೋದನಕಾರಿ ವಿಚಾರ, ಭಾಷಣ, ವೈಯಕ್ತಿಕ ಆರೋಪ, ಪ್ರತ್ಯಾರೋಪ ಬಂಟ್ವಾಳನ್ಯೂಸ್ ವೇದಿಕೆಯಾಗುವುದಿಲ್ಲ. ಸಮಾಜದ ಸ್ವಾಸ್ಥ್ಯ ಕಾಪಾಡುವುದಷ್ಟೇ ನಮ್ಮ ಆಶಯ. 2016, ನ.10ರಿಂದಲೂ ಇದನ್ನು ಅನುಸರಿಸಿಕೊಂಡು ಬಂದಿದ್ದು, ಇದು ಮುಂದುವರಿಯಲಿದೆ. ಓದುಗರು ಈ ಅಂಶವನ್ನು ಗುರುತಿಸಿದ್ದಾರೆ ಎಂಬುದಕ್ಕೆ 4,50,000ಕ್ಕೂ ಅಧಿಕ ಮಂದಿ ವೀಕ್ಷಕರೇ ಸಾಕ್ಷಿ. ಎಲ್ಲ ಓದುಗರಿಗೂ, ಜಾಹೀರಾತುದಾರರಿಗೂ, ಸ್ನೇಹಿತರಿಗೂ, ಮಾರ್ಗದರ್ಶಕರಿಗೂ ಮನದಾಳದ ಕೃತಜ್ಞತೆ.

ಸುದ್ದಿಮಾಧ್ಯಮವೊಂದು ಬಂಟ್ವಾಳದಲ್ಲಿ ಉಗಮವಾಗುವುದು ಹೊಸತಲ್ಲ. ಸ್ಥಳೀಯ ಸುದ್ದಿಗಳನ್ನು ನೀಡುವ ಪಾಕ್ಷಿಕ, ವಾರಪತ್ರಿಕೆಗಳು ಇಲ್ಲಿದ್ದಾಗ ಅವುಗಳಿಗೆ ಪೂರಕವಾಗಿ ವೆಬ್ ಪತ್ರಿಕೆಯೊಂದನ್ನು ಆರಂಭಿಸುವ ಚಿಂತನೆ ನಡೆಸಿದಾಗ ನನಗೆ ಸಾಥ್ ನೀಡಿದವರು ಬಂಟ್ವಾಳ, ವಿಟ್ಲದ ಮಾಧ್ಯಮ ಮಿತ್ರರು. ಬಂಟ್ವಾಳ ತಾಲೂಕಿನ ಆಯ್ದ ಪ್ರಮುಖ ಸುದ್ದಿಗಳೊಂದಿಗೆ ವೈವಿಧ್ಯಮಯ ಲೇಖನಗಳನ್ನು ಒದಗಿಸುವ ಯೋಚನೆ ಮೂಡಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ಹಿರಿ, ಕಿರಿಯ ಸ್ನೇಹಿತರು.

ಹದಿನೇಳು ವರ್ಷಗಳ ಸುದ್ದಿಮಾಧ್ಯಮದ ಹಿನ್ನೆಲೆಯಷ್ಟೇ ಇದ್ದ ನಾನೂ ಪತ್ರಿಕೆ ಆರಂಭಿಸಬಹುದೇ, ಇಂಥ ಯೋಚನೆ ನನ್ನಂಥವನೂ ಮಾಡಬಹುದೇ ಎಂಬ ಆಲೋಚನೆಗಳೂ ಆ ಕ್ಷಣದಲ್ಲಿ ಸುಳಿದಾಡಿದವು.  ಪೂರ್ಣಪ್ರಮಾಣದ ಪತ್ರಕರ್ತರು ತಾವೇ ಸ್ವತ: ಪತ್ರಿಕೆಗಳನ್ನು ಆರಂಭಿಸಿ, ಕೈಸುಟ್ಟುಕೊಂಡ ದೃಷ್ಟಾಂತಗಳೆಲ್ಲವನ್ನೂ ಓದಿದ್ದ ನನ್ನ ಬಳಿ ಹಿತೈಷಿಗಳು ಇದೆಲ್ಲ ನಮ್ಮಂಥವರಿಗಲ್ಲ, ನೀನು ಬಂಡವಾಳ ಎಲ್ಲಿಂದ ಹೂಡುತ್ತೀಯ, ನಿನಗೆ ಇದೆಲ್ಲ ಆದೀತೋ ಮಾರಾಯ ಎಂದು ಲಘುವಾಗಿ ಬಯ್ದು ಎಚ್ಚರಿಕೆಯನ್ನೂ ನೀಡಿದ್ದರು.  ಎಲ್ಲ ಪತ್ರಕರ್ತರ ಒಳಮನಸ್ಸಿನಲ್ಲೂ ಸ್ವಂತ ಪತ್ರಿಕೆ ಮಾಡುವ ಸಣ್ಣ ಆಸೆ ಇದ್ದೇ ಇರುತ್ತದೆ. ಬಂಟ್ವಾಳವನ್ನೇ ಕಾರ್ಯಕ್ಷೇತ್ರವಾಗಿಸಿ, ಹೊಸ ಪ್ರಯೋಗ ಮಾಡೋಣ, ಹೇಗಿದ್ದರೂ ಪ್ರಿಂಟಿಂಗ್ ಖರ್ಚಿಲ್ಲವಲ್ಲ ಎಂಬ ಧೈರ್ಯದಲ್ಲಿ ವೆಬ್ ಪತ್ರಿಕೆ ಮಾಡಲು ಹೊರಟೆ.

ಮನೆಯವರ ಪ್ರೋತ್ಸಾಹ, ಪುತ್ತೂರಿನ ಸ್ನೇಹಿತರಾದ ಶಿವಪ್ರಸಾದ್ ಭಟ್, ಆದಿತ್ಯ ಕಲ್ಲೂರಾಯ ಅವರ ಬೆಂಬಲದೊಂದಿಗೆ ಅಂದವಾದ ಡಿಸೈನ್ ಮಾಡಿಕೊಟ್ಟವರು thewebpeople.in ಬಳಗ. ಸಣ್ಣಪುಟ್ಟ ಖರ್ಚು ಹೂಡಿ, ಲ್ಯಾಪ್ ಟಾಪ್ ಒಂದನ್ನು ಖರೀದಿಸಿ, ಜಿಯೋ ಇಂಟರ್ ನೆಟ್ ಸೌಲಭ್ಯದೊಂದಿಗೆ ಧೈರ್ಯದಿಂದ ಬಂಟ್ವಾಳನ್ಯೂಸ್ ಆರಂಭಿಸಿದಾಗ ಅದಕ್ಕೆ ಚಾಲನೆ ನೀಡಿ ಆಶೀರ್ವದಿಸಿದವರು ನನ್ನ ಹೆತ್ತವರಾದ ಗೋಪಾಲಕೃಷ್ನ ಭಟ್ ಮತ್ತು ಮನೋರಮಾ. ಸಾಥ್ ನೀಡಿದ್ದು ನನ್ನ ಪತ್ನಿ ಪ್ರತಿಮಾ.

ಲ್ಯಾಪ್ ಟಾಪ್ ಹಿಡಿದುಕೊಂಡು ಬಂಟ್ವಾಳ ಪ್ರೆಸ್ ಕ್ಲಬ್ ಗೆ ಬಂದು ಸುದ್ದಿ ಒದಗಿಸಲು ಆರಂಭಿಸಿದಾಗ, ನನ್ನ ಖುಷಿಯಲ್ಲಿ ಭಾಗೀದಾರರಾದವರು ಹಿರಿಯ ಪತ್ರಕರ್ತ ವೆಂಕಟೇಶ ಬಂಟ್ವಾಳ, ವಿಟ್ಲದ ಪತ್ರಕರ್ತ ಬಂಧುಗಳಾದ ಉದಯಶಂಕರ ನೀರ್ಪಾಜೆ, ನಿಶಾಂತ್ ಬಿಲ್ಲಂಪದವು, ಮಹಮ್ಮದ್ ಆಲಿ ಮತ್ತು ವಿಷ್ಣುಗುಪ್ತ ಪುಣಚ, ಬಂಟ್ವಾಳದ ಒಡನಾಡಿಗಳಾದ ಹಿರಿಯ ಪತ್ರಕರ್ತರಾದ ರಾಜಾ ಬಂಟ್ವಾಳ, ಜಯಾನಂದ ಪೆರಾಜೆ, ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ, ಸಂದೀಪ್ ಸಾಲ್ಯಾನ್, ರತ್ನದೇವ್ ಪುಂಜಾಲಕಟ್ಟೆ, ಕಿಶೋರ್ ಪೆರಾಜೆ, ಇಮ್ತಿಯಾಜ್ ಶಾ. ಫಾರೂಕ್ ಬಂಟ್ವಾಳ, ಪಿ.ಎಂ.ಅಶ್ರಫ್, ಲತೀಫ್ ನೇರಳಕಟ್ಟೆ, ಚಂದ್ರಪ್ರಕಾಶ್ ಕಲ್ಮಲೆ, ಮೋಹನ ಕೆ. ಶ್ರೀಯಾನ್, ವಾಮನ್ ಮತ್ತು ಗೋಪಾಲ ಅಂಚನ್ ಸಹಿತ ಬಂಟ್ವಾಳ, ವಿಟ್ಲ ಪರಿಸರದ ಎಲ್ಲ ಪತ್ರಕರ್ತರ ಪ್ರೀತಿ, ವಿಶ್ವಾಸ, ಬೆಂಬಲ, ಸಲಹೆ ಸೂಚನೆಗಳು ದೊರಕಿದವು.

ಅದಾಗಲೇ ಬಂಟ್ವಾಳದಲ್ಲಿ ಪತ್ರಿಕೆಗಳನ್ನು ನಡೆಸುತ್ತಿದ್ದ ಸ್ನೇಹಿತರಾದ ವಿಶ್ವನಾಥ ಬಂಟ್ವಾಳ ಮತ್ತು ಪ್ರಶಾಂತ್ ಪುಂಜಾಲಕಟ್ಟೆ ಪತ್ರಿಕೋದ್ಯಮದ ಹೊಸತನಕ್ಕೆ ಮೆಚ್ಚುಗೆ ಸೂಚಿಸಿ ಮುಕ್ತಮನಸ್ಸಿನ ಬೆಂಬಲ ನೀಡುವುದರೊಂದಿಗೆ ಮಾರ್ಗದರ್ಶನ ನೀಡಿದರು.

ದಿನಪತ್ರಿಕೆಗಳಲ್ಲಿ ಅಂಕಣ ಬರೆಯುತ್ತಿದ್ದ ಲೇಖಕಿ ಅನಿತಾ ನರೇಶ್ ಮಂಚಿ, ತುಳು ಲಿಪಿಯ ಕುರಿತು ಆಳವಾದ ಅಧ್ಯಯನ ನಡೆಸಿದ್ದ ಬಿ.ತಮ್ಮಯ್ಯ, ವೈದ್ಯ ಡಾ. ರವಿಶಂಕರ್, ಲೇಖಕ ಡಾ.ಅಜಕ್ಕಳ ಗಿರೀಶ ಭಟ್ಟ ಮತ್ತು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ, ರಂಗಕರ್ಮಿ ಮೌನೇಶ ವಿಶ್ವಕರ್ಮ ಅಂಕಣಗಳನ್ನು ನೀಡಲು ಒಪ್ಪಿಕೊಂಡರು. ಹೀಗೆ ಲೇಖಕರ ಪುಟ್ಟ ತಂಡ ಸಿದ್ಧಗೊಂಡಿತು. ಬಳಕೆದಾರರ ವೇದಿಕೆಯ ಸುಂದರ ರಾವ್, ಪ್ರೊ.ರಮಾದೇವಿ, ರಾಜಮಣಿ ರಾಮಕುಂಜ ಸಹಿತ ಹಲವು ಹಿರಿಯರು ಬೆನ್ನು ತಟ್ಟಿದರು. ಲ್ಯಾಪ್ ಟಾಪ್ ರೆಡಿಯಾಗಿತ್ತು.

ಹೀಗೆ ನವೆಂಬರ್ 10, 2016ರಂದು ಬಂಟ್ವಾಳ ತಾಲೂಕಿನದ್ದೇ ಸುದ್ದಿಗಳನ್ನು ಪ್ರತಿದಿನ ನೀಡುವ ಮೊತ್ತ ಮೊದಲ ವೆಬ್ ಸೈಟ್ ಬಂಟ್ವಾಳನ್ಯೂಸ್ ಯಾವುದೇ ಸದ್ದುಗದ್ದಲವಿಲ್ಲದೆ ಓದುಗರ ಬೆರಳತುದಿಯಲ್ಲಿ ಕಾಣಿಸಲಾರಂಭಿಸಿತು.

ಹಾಕಿದ ಬಂಡವಾಳಕ್ಕೆ ಮೋಸವಾಗದಂತೆ ಜಾಹೀರಾತುಗಳು ದೊರಕಿದ ಕಾರಣ ವೆಬ್ ಮುನ್ನಡೆಸಲು ಧೈರ್ಯವೂ ಬಂತು.

ಈ ಅವಧಿಯಲ್ಲಿ ಪ್ರಸಿದ್ಧ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ಅವರ ಪ್ರಕಟಿತ ಕೃತಿ ಲೇಖನಮಾಲೆಯಾಗಿ ಪ್ರಕಟಗೊಂಡಿತು. ಛಾಯಾಂಕಣ, ವ್ಯಂಗ್ಯನೋಟ ಕಾಲಂಗಳು ಆರಂಭಗೊಂಡವು. ಪ್ರತಿದಿನ  ಯಕ್ಷಗಾನದ ಸುದ್ದಿ ಕೊಡುವ ವಿಫಲ ಯತ್ನವೂ ಆಯಿತು. ನನ್ನ ಇತಿ ಮಿತಿಗಳಲ್ಲಿ ಒಂದು ವರ್ಷದಲ್ಲಿ ನೂರಾರು ಸುದ್ದಿಗಳು ಪ್ರಕಟಗೊಂಡವು.

ಬಂಟ್ವಾಳನ್ಯೂಸ್ ವರದಿಯೊಂದರಿಂದಲೇ ಯಾವುದಾದರೂ ದೊಡ್ಡ ಕ್ರಾಂತಿಯಾಗುತ್ತದೆ ಎಂಬ ಭ್ರಮೆ ನನಗಿಲ್ಲ. ಆದರೆ ಬಿ.ಸಿ.ರೋಡಿನ ಸರ್ವೀಸ್ ರಸ್ತೆಯ ಕುರಿತು ಸತತ ಸರಣಿ ವರದಿಗಳು ಓದುಗರ ಗಮನ ಸೆಳೆದದ್ದಂತೂ ಹೌದು. ಕೆಲವು ದಿನಗಳಲ್ಲಿ ಸುದ್ದಿಯನ್ನೇ ಹಾಕಲಿಲ್ಲ. ಆದರೂ ಓದುಗರು ವೆಬ್ ಕಡೆಗೆ ಒಮ್ಮೆ ಕಣ್ಣು ಹಾಯಿಸಿದ್ದಾರೆ. ಕಲ್ಲಡ್ಕ ಘಟನೆ ಬಳಿಕದ ಸುದ್ದಿಯಲ್ಲಿ ಬಂಟ್ವಾಳನ್ಯೂಸ್ ಸಂಯಮ ತೋರಿದೆ ಎಂದು ಹೇಳಿದ ಓದುಗರಿದ್ದಾರೆ. ನೀವು ಇಂಥ ರಾಜಕಾರಣಿಯ ಸುದ್ದಿ ಜಾಸ್ತಿ ಹಾಕಿ ಎಂದು ಹೇಳುವ ಆಯಾ ಪಕ್ಷಗಳ ಬೆಂಬಲಿಗರೂ ಇದ್ದಾರೆ. ಅತಿಯಾದ ನಿರೀಕ್ಷೆಯನ್ನಿಟ್ಟವರೂ ಇದ್ದಾರೆ. ಕೆಲವರಿಗೆ ನಿರಾಸೆಯೂ ಆಗಿದ್ದುಂಟು. ಏನೋ ಭಾರೀ ಬ್ರೇಕಿಂಗ್ ನ್ಯೂಸ್ ಬರುತ್ತದೆ ಎಂದು ಕಾದವರೂ ಇದ್ದಾರೆ. ಆದರೆ ಬಂಟ್ವಾಳನ್ಯೂಸ್ ತನ್ನ ಪಾಡಿಗೆ ಮುಂದುವರಿದಿದೆ.

ಈಗ ನಿಮ್ಮ ಮುಂದಿರುವುದು ಒಂದು ಪ್ರಯೋಗವಷ್ಟೇ. ಇದು ಹಲವರಿಗೆ ಹೊಸತನ್ನು ಮಾಡಲು ಪ್ರೇರೇಪಣೆಯನ್ನು ನೀಡಿದೆ. ಇವಿಷ್ಟು ಈ ಹೊತ್ತಿನ ವಿಚಾರ.

ಇನ್ನು ಮತ್ತಷ್ಟು ಹೊಸತನಗಳೊಂದಿಗೆ ಬಂಟ್ವಾಳನ್ಯೂಸ್ ಮೂಡಿಬರಲಿದೆ. ಇಲ್ಲೇ ಭೇಟಿಯಾಗೋಣ

 

  • ಹರೀಶ ಮಾಂಬಾಡಿ, ಸಂಪಾದಕ

 

 

 

 

 

 

 

 

 

 

 

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts