ಕಾರಣಿಕದ ಸಾನಿಧ್ಯವನ್ನು ಹೊಂದಿ ನಂಬಿದ ಭಕ್ತರ ಇಷ್ಟಾರ್ಥ ನೆರವೇರಿಸುವ ಆರಾಧ್ಯ ಕ್ಷೇತ್ರ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ.
ಮಾಗಣೆಯ ಏಳು ಗ್ರಾಮಗಳಾದ ಅಜ್ಜಿಬೆಟ್ಟು, ಇರ್ವತ್ತೂರುಪದವು, ಪಿಲಾತಬೆಟ್ಟು, ಮೂಡುಪಡುಕೋಡಿ, ಪಿಲಿಮೊಗರು, ಕೊಡಂಬೆಟ್ಟು, ಮತ್ತು ಚೆನ್ನೈತ್ತೋಡಿಯ ಜನರಿಗೆ ಈ ದೇವಸ್ಥಾನ ಪ್ರಾಮುಖ್ಯ.
ಈ ಕ್ಷೇತ್ರವು ಅಜಿಲ ಸೀಮೆಯ ಪಟ್ಟ ದೇಗುಲವಾಗಿದ್ದು ತುಳುನಾಡನ್ನು ಆಳಿದ ಮಯೂರ ವರ್ಮನ ಕಾಲದ್ದಾಗಿದ್ದು , ಋಷಿವರ್ಯರಿಂದ ಇಲ್ಲಿನ ಮೂಲ ಬಿಂಬವನ್ನು ಪ್ರತಿಪ್ಠಾಪಿಸಲಾಗಿದೆ ಎಂಬ ಇತಿಹಾಸವಿದ್ದು ಈಚೆಗೆ ಕ್ಷೇತ್ರದಲ್ಲಿ ಇರಿಸಲಾದ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಬಂದಂತೆ ಕ್ಷೇತ್ರದ ಜೀರ್ಣೋದ್ದಾರ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಮುಂದಿನ ಮಾರ್ಚ್ ತಿಂಗಳಲ್ಲಿ ಕ್ಷೇತ್ರದ ವಾರ್ಷಿಕ ಜಾತ್ರಾಮಹೋತ್ಸವ ಮುಗಿದಾಕ್ಷಣ ಜೀರ್ಣೋದ್ದಾರ ಕಾಮಗಾರಿಯನ್ನು ಕೈಗೆತ್ತಿಕೂಳ್ಳಲಾಗುವುದು.
ಎಲ್ಲಿದೆ ದೇವಳ:
ಬಂಟ್ವಾಳ ತಾಲೂಕಿನ ವಾಮದ ಪದವು ಸಮೀಪದ ಅಜ್ಜಿಬೆಟ್ಟು ಪದವು ಎಂಬಲ್ಲಿದೆ ಶ್ರೀ ದುರ್ಗಾಪರಮೆಶ್ವರಿ ದೇವಸ್ಥಾನ. ವಿಶಾಲವಾದ ಜಾಗ, ನಿರ್ಮಲ ವಾತಾವರಣ, ಸ್ವಚ್ಛ ಪರಿಸರ, ಪ್ರಶಾಂತ ಸನ್ನಿವೇಶ ಈ ಜಾಗದ ಹೈಲೈಟ್.
ಈ ಪ್ರದೇಶಕ್ಕೆ ಬರುವ ಭಕ್ತರು ದೇವರ ಸನ್ನಿಧಿಯ ಸೌಭಾಗ್ಯದೊಂದಿಗೆ ಮನ:ಶಾಂತಿಯನ್ನೂ ಪಡೆಯುವ ಆಹ್ಲಾದಕರ ವಾತಾವರಣದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಬಹುದು.
19ರಂದು ಶಿಲಾಪೂಜೆ:
ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಗ್ರಾಮಸ್ಥರು ಸಂಕಲ್ಪ ತೊಟ್ಟಿದ್ದಾರೆ. ಈ ಪ್ರಯುಕ್ತ ನ. 19ರಂದು ಶ್ರೀ ಕ್ಷೇತ್ರದಲ್ಲಿ ಶಿಲಾ ಪೂಜಾ ಸಮಾರಂಭವು ನಡೆಯಲಿದೆ.
ಈ ವಿಚಾರವನ್ನು ದೇವಳದ ಜೀರ್ಣೋದ್ಧಾರ ಸಮಿತಿ ಮುಂಬ ಸಮಿತಿ ಅಧ್ಯಕ್ಷ ಅಶೋಕ್ ಪಕ್ಕಳ ಅವರು ದೇವಸ್ಥಾನದ ವಠಾರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಂದು ಬೆಳಿಗ್ಗೆ ಪಾಂಗಲ್ಪಾಪಡಿಯಿಂದ ಶಿಲೆಯನ್ನು ಮೆರವಣಿಗೆಯ ಮೂಲಕ ಶ್ರೀ ಕ್ಷೇತ್ರಕ್ಕೆ ತರಲಾಗುವುದು ಎಂದು ಹೇಳಿದರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಲಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾ ಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಆಳದಂಗಡಿ ಅರಮನೆ ತಿಮ್ಮಣ್ಣ ರಸರಾದ ಡಾ| ಪದ್ಮಪ್ರಸಾದ್ ಅಜಿಲರು, ರಾಜ್ಯ ವಸತಿ ಸಚಿವ ಎಂ. ಕೃಷ್ಣಪ್ಪ ಸಹಿತ ಹಲವಾರು ಗಣ್ಯರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಮಾಗಣೆಯ ಏಳು ಗ್ರಾಮಗಳಾದ ಶ್ರೀದೇವಿ ತನ್ನ ಪರಿವಾರ ದೈವಗಳ ಸಹಿತ ಅತ್ಯಂತ ಕಾರಣಿಕದ ಸಾನ್ನಿಧ್ಯವನ್ನು ಹೊಂದಿ ನಂಬಿದ ಭಕ್ತರ ಇಷ್ಠಾರ್ಥಗಳನ್ನು ನೆರವೇರಿಸುವ ಆರಾಧ್ಯ ಕ್ಷೇತ್ರವೆಂದು ಪ್ರತೀತಿ ಹೊಂದಿದೆ. ಇಲ್ಲಿನ ತೀರ್ಥ ಮಂಟಪ, ಇಪ್ಪತ್ತೇಳು ಅಡಿ ಚಚ್ಚೌಕದ ತೀರ್ಥ ಮಂಟಪವಿರುವ ದ.ಕ. ಜಿಲ್ಲೆಯ ಏಕೈಕ ದೇವಸ್ಥಾನವೆಂಬ ವಿಶೇಷತೆ ಹೊಂದಿದೆ. 16 ಗುತ್ತಿನ ಮನೆತನದವರಿಗೆ ಸಂಬಂಧಿಸಿದ 16 ಕಂಬಗಳು ಈ ತೀರ್ಥ ಮಂಟಪದಲ್ಲಿದೆ.
ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ದೇಗುಲದ ಜೀರ್ಣೋದ್ಧಾರ ಕಾರ್ಯವನ್ನು ನಡೆಸಲು ದ್ದೇಶಿಸಲಾಗಿದೆ ಪ್ರಥಮ ಹಂತದಲ್ಲಿ ಎರಡಂತಸ್ತಿನ ಶಿಲಾಮಯದೊಂದಿಗೆ ತಾಮ್ರ ಹೊದಿಕೆಯ ಗರ್ಭಗುಡಿ, ತೀರ್ಥಮಂಟಪ, ಶ್ರೀ ಮಹಾಗಣಪತಿ ಗುಡಿ, ಶ್ರೀ ಶಾಸ್ತಾರ ಗುಡಿ ಪುನರ್ ನಿರ್ಮಾಣಗೊಳ್ಳಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ದಾರ ಸಮಿತಿಯ ಗೌರವಾದ್ಯಕ್ಷರಾದ ಬಾಬು ಪೂಜಾರಿ ಕೌಡೋಡಿಗುತ್ತು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಅಧ್ಯಕ್ಷ ಕೆ. ವಸಂತ ಶೆಟ್ಟಿ ಕೇದಗೆ, ಪ್ರ.ಕಾರ್ಯದರ್ಶಿ ಯೋಗೀಶ್ ಕಲಸಡ್ಕ ಅಜ್ಜಿಬೆಟ್ಟು, ಭೋಜರಾಜ ಶೆಟ್ಟಿ ಕೊರಗಟ್ಟೆ,ಬೆಂಗಳೂರು ಸಮಿತಿಯ ಪ್ರಭಾಕರ ಶೆಟ್ಟಿ, ಮೋಹನ್ದಾಸ್ ಶೆಟ್ಟಿ ಬೆಂಗಳೂರು, ಸಲಹೆಗಾರ ಎಚ್ಕೆ ನಯನಾಡು ಮೊದಲಾದವರು ಉಪಸ್ಥಿತರಿದ್ದರು.