ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಂಡಿಯಾನ್ ನ್ಯಾಷನಲ್ ಕಾಂಗ್ರೆಸ್ ಟ್ರೇಡ್ ಯೂನಿಯನ್ (ಇನ್‌ಟೆಕ್) ಕರ್ನಾಟಕ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದೆ.
ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಸರಕಾರದಿಂದ ಸಾಕಷ್ಟು ಸವಲತ್ತುಗಳಿದ್ದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅವು ಕಾರ್ಮಿಕರಿಗೆ ತಲುಪುತ್ತಿಲ್ಲ. ಕಾರ್ಮಿಕ ಸಂಘಟನೆಗಳು ಹಾಗೂ ನಿಗಮ ಮಂಡಳಿಗಳನ್ನು ಅಽಕಾರಿಗಳು ಅವಗಣನೆ ತೆಗೆದುಕೊಳ್ಳದೆ ಸ್ವಇಚ್ಚೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇತಂಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳು ಕಾರ್ಮಿಕರಿಗೆ ದೊರೆಯುವಂತೆ ಹಾಗೂ ಅವುಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಅಧಿಕಾರಿಗಳ ಹಾಗೂ ಕಾರ್ಮಿಕ ಸಂಘಟನೆಗಳ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಇನ್‌ಟೆಕ್ ರಾಜ್ಯ ಅಧ್ಯಕ್ಷ ರಾಕೇಶ್ ಮಲ್ಲಿ, ಉಪಾಧ್ಯಕ್ಷ ಪುಟ್ಟ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ವೆಂಕಟೇಶ್, ಎಐಟಿಯುಸಿಯ ರಾಂ ಚಂದ್ರಪ್ಪ, ಸಿಐಟಿಯುನ ವೀರಸ್ವಾಮಿ, ಟಿಯುಸಿಸಿಯ ಜಿ.ಆರ್.ಶಿವಶಂಕರ್, ಎಚ್‌ಎಂಕೆಪಿಯ ಕಾಲಪ್ಪ, ಎನ್‌ಸಿಎಲ್‌ನ ಎನ್.ಪಿ.ಸ್ವಾಮಿ, ಸಾಮಣ್ಣ ರೆಡ್ಡಿ ಸಹಿತ ಮೊದಲಾದವರು ಉಪಸ್ಥಿತರಿದ್ದರು.