ಅ.29ರಂದು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಧರ್ಮಸ್ಥಳಕ್ಕೆ ಆಗಮಿಸಿ ಅಲ್ಲಿಂದ ಉಜಿರೆಗೆ ತೆರಳಿ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಬಳಿಕ ಅಲ್ಲಿಂದ ಧರ್ಮಸ್ಥಳಕ್ಕೆ ಬಂದು ವಾಪಸಾಗುವ ಕಾರ್ಯಕ್ರಮ ಇರುವುದರಿಂದ ಗಣ್ಯರ ಆಗಮನ ಮತ್ತು ಭದ್ರತೆಯ ಹಿತದೃಷ್ಠಿಯಿಂದ ಭಾನುವಾರ ರಂದು ಬೆಳಿಗ್ಗೆ 8 ಗಂಟೆಯಿಂದ ಅಪರಾಹ್ನ 2 ಗಂಟೆಯ ವರೇಗೆ ವಾಹನಗಳ ಸಂಚಾರದಲ್ಲಿ ಈ ಕೆಳಗಿನ ಬದಲಾವಣೆಯನ್ನು ಮಾಡಲಾಗಿದೆ.
ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬರುವ ಎಲ್ಲಾ ವಾಹನಗಳು ಮಂಗಳೂರು –ಬಿ.ಸಿ.ರೋಡು-ಉಪ್ಪಿನಂಗಡಿ-ನೆಲ್ಯಾಡಿ – ಪೆರಿಯಶಾಂತಿ-ಕೊಕ್ಕಡ-ನಿಡ್ಲೆ ಮಾರ್ಗವಾಗಿ ಧರ್ಮಸ್ಥಳಕ್ಕೆ ಬರುವುದು.
ಧರ್ಮಸ್ಥಳದಿಂದ ಮಂಗಳೂರು ಕಡೆಗೆ ಹೋಗುವ ಎಲ್ಲಾ ವಾಹನಗಳು ಧರ್ಮಸ್ಥಳ- ನಿಡ್ಲೆ-ಕೊಕ್ಕಡ-ಪೆರಿಯಶಾಂತಿ-ನೆಲ್ಯಾಡಿ- ಉಪ್ಪಿನಂಗಡಿ ಮಾರ್ಗವಾಗಿ ಮಂಗಳೂರಿಗೆ ತೆರಳುವುದು. ಧರ್ಮಸ್ಥಳದಿಂದ ಉಜಿರೆ-ಚಾರ್ಮಾಡಿ–ಚಿಕ್ಕಮಗಳೂರು ಕಡೆಗೆ ಹೋಗುವ ವಾಹನಗಳು ಧರ್ಮಸ್ಥಳ–ಪುದುವೆಟ್ಟು ಕ್ರಾಸ್- ಕಕ್ಕಿಂಜೆ- ಚಾರ್ಮಾಡಿ ಮಾರ್ಗವಾಗಿ ತೆರಳುವುದು.
ಚಿಕ್ಕಮಗಳೂರು ಕಡೆಯಿಂದ ದರ್ಮಸ್ಥಳಕ್ಕೆ ಬರುವ ವಾಹನಗಳು ಮೂಡಿಗೆರೆ- ಚಾರ್ಮಾಡಿ-ಕಕ್ಕಿಂಜೆ- ಪುದುವೆಟ್ಟು ಕ್ರಾಸ್ ಮಾರ್ಗವಾಗಿ ಧರ್ಮಸ್ಥಳಕ್ಕೆ ಬರುವುದು. ಧರ್ಮಸ್ಥಳದಿಂದ ಉಜಿರೆಗೆ ಹೋಗುವ ಎಲ್ಲಾ ವಾಹನಗಳು ಧರ್ಮಸ್ಥಳ –ಪುದುವೆಟ್ಟು ಕ್ರಾಸ್- ಕಕ್ಕಿಂಜೆ ಮಾರ್ಗವಾಗಿ ಉಜಿರೆಗೆ ತೆರಳುವುದು.
ಕಾರ್ಕಳ, ಮೂಡಬಿದಿರೆ, ವೇಣೂರು ಕಡೆಗಳಿಂದ ಧರ್ಮಸ್ಥಳಕ್ಕೆ ಬರುವ ವಾಹನಗಳು ಗುರುವಾಯನಕೆರೆ-ಉಪ್ಪಿನಂಗಡಿ-ನೆಲ್ಯಾಡಿ-ಕೊಕ್ಕಡ ಮಾರ್ಗವಾಗಿ ಧರ್ಮಸ್ಥಳಕ್ಕೆ ಬರುವುದು. ಧರ್ಮಸ್ಧಳ, ಉಜಿರೆ ಪರಿಸರದಲ್ಲಿ ಮತ್ತು ಧರ್ಮಸ್ಧಳ ಉಜಿರೆ ರಸ್ತೆಯಲ್ಲಿ ಅ.29ರಂದು ಬೆಳಿಗ್ಗೆಯಿಂದ ರಸ್ತೆಯ ಎರಡು ಬದಿಯಲ್ಲಿ ಯಾವುದೇ ವಾಹನಗಳನ್ನು ಪಾರ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಯಾವುದಾದರೂ ವಾಹನಗಳನ್ನು ರಸ್ತೆ ಬದಿಯಲ್ಲಿ ಪಾಕ್ ಮಾಡಿರುವುದು ಕಂಡು ಬಂದಲ್ಲಿ ಸದ್ರಿ ವಾಹನಗಳನ್ನು ಟೋಯಿಂಗ್ ವಾಹನದ ಮೂಲಕ ಬೇರೆ ಸ್ಧಳಗಳಿಗೆ ಸ್ಧಳಾಂತರಿಸಲಾಗುವುದು.
ಸಾರ್ವಜನಿಕರಿಗೆ ವಾಹನ ಪಾರ್ಕಿಂಗ್ ವ್ಯವಸ್ಧೆಯನ್ನು ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಧಾನದ ಬಳಿ ಮತ್ತು ವಿ.ಐ.ಪಿ. ಪಾಸ್ ಹೊಂದಿರುವ ವಾಹನಗಳಿಗೆ ಬೆಳಾಲು ಕ್ರಾಸ್ ಬಳಿ ಪಾರ್ಕಿಂಗ್ ವ್ಯವಸ್ಧೆಯನ್ನು ಕಲ್ಪಿಸಲಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.