ಅಂಕಣ: ಗಿರಿಲಹರಿ
ರೈತರ ಕಷ್ಟಗಳು, ಕೃಷಿ ಉತ್ಪನ್ನಗಳಿಗೆ ಯುಕ್ತ ಬೆಲೆ ಸಿಗದಿರುವುದು, ಆರ್ಥಿಕ ಸಂಕಷ್ಟ ಹೀಗೆ ವಿವಿಧ ಕಾರಣಗಳಿಂದಾಗಿ ಹಿರಿಯರಿಂದ ಬಂದ ಸಾಕಷ್ಟು ಕೃಷಿಭೂಮಿಯಿರುವ ಯುವಕರು ಕೂಡ ಕೃಷಿ ಬಗ್ಗೆ ಅನಾದರ ತೋರಿಸಿ ನಗರದ ಕಡೆ ಮುಖ ಮಾಡಿರುವುದನ್ನು ಕಾಣುತ್ತಿದ್ದೇವೆ. ಈ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ, ಬರೆಯುತ್ತಿದ್ದಾರೆ. ಕೃಷಿಯ ಕಡೆಗೆ ಯುವ ಜನರು ಆಕರ್ಷಿತರಾಗುವಂತೆ ಮಾಡುವುದು ಹೇಗೆ ಎಂಬ ಬಗ್ಗೆಯೂ ಸಾಕಷ್ಟು ಮಂದಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.
ಈ ಪರಿಸ್ಥಿತಿಗೆ ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣವೇ ಕಾರಣ ಎಂಬ ಅಧ್ಯಯನಪೂರ್ಣ ವಿಶ್ಲೇಷಣೆಗಳೂ ಬೇಕಾದಷ್ಟಿವೆ. ಸರಕಾರವು ಕೃಷಿಕರ ಸಾಲ ಮನ್ನಾ ಮಾಡಬೇಕು, ಯೋಗ್ಯ ಬೆಲೆ ನಿಗದಿ ಮಾಡಬೇಕು ಎಂಬಿತ್ಯಾದಿ ಸಲಹೆಗಳು ಹೇಗೂ ಇದ್ದದ್ದೇ. ಆದರೆ ಇಂಥ ತಾತ್ಕಾಲಿಕ ಕ್ರಮಗಳು ಒಮ್ಮೆಗೆ ಕೃಷಿಕರ ಮನಸ್ಸಿಗೆ ಸಮಾಧಾನ ತರಬಹುದೇ ಹೊರತು ಇದರಿಂದ ಕೃಷಿ ಕ್ಷೇತ್ರದ ಸಮಸ್ಯೆಗಳು ಪೂರ್ತಿ ಪರಿಹಾರವಾಗುವುದು ಸಾಧ್ಯವಿಲ್ಲ.
ಆರ್ಥಿಕ ಚಟುವಟಿಕೆಗಳೆಲ್ಲ ಮಾರುಕಟ್ಟೆಯ ಶಕ್ತಿಗಳಿಂದ ನಿಯಂತ್ರಿತವಾಗಿರುವಾಗ ಕೃಷಿಯು ಅದರಿಂದ ಹೊರಗೆ ನಿಲ್ಲುವುದು ಹೇಗೆ ಎಂಬುದೇ ದೊಡ್ಡ ಪ್ರಶ್ನೆ. ಈಗ ಆಹಾರ ಧಾನ್ಯಗಳ ವಿಚಾರವನ್ನೇ ಪರಿಗಣಿಸಿ. ನಮ್ಮ ದೇಶದಲ್ಲಿ ಆಹಾರ ಧಾನ್ಯಗಳನ್ನು ಉತ್ಪಾದಿಸುವವರ ಸಂಖ್ಯೆಗಿಂತ ಅದನ್ನು ಸೇವಿಸುವವರ ಸಂಖ್ಯೆ ತುಂಬಾ ದೊಡ್ಡದು. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಇಂದು ಕೃಷಿ ಉತ್ಪನ್ನಗಳ ಮಾರಾಟದ ಮೂಲಕ ಹೊಟ್ಟೆ ಹೊರೆಯುವವರ ಸಂಖ್ಯೆಗಿಂತ ಇತರ ಆದಾಯ ಮೂಲಗಳನ್ನು ಅವಲಂಬಿಸಿರುವವರೇ ಹೆಚ್ಚು. ಇನ್ನು ನಗರ ಪ್ರದೇಶಗಳ ಬಗ್ಗೆ ಕೇಳುವುದೇ ಬೇಡ. ಆಹಾರ ಉತ್ಪಾದಿಸುವವರಿಗಿಂತ ಸೇವಿಸುವವರ ಅಥವಾ ಕೊಳ್ಳುವವರ ಸಂಖ್ಯೆ ದೊಡ್ಡದು ಅಂದೆ.
ಹೀಗೆನ್ನುವ ಬದಲು, ಆಹಾರ ಉತ್ಪಾದಿಸುವ ಮತದಾರರಿಗಿಂತ ಆಹಾರ ವಸ್ತುಗಳನ್ನು ಸೇವಿಸುವ ಅಥವಾ ಖರೀದಿಸುವ ಮತದಾರರ ಸಂಖ್ಯೆ ತುಂಬ ದೊಡ್ಡದು ಅಂತ ಹೇಳಿದರೆ ಅಲ್ಲಿಗೆ ಎಲ್ಲವೂ ಸ್ಪಷ್ಟವಾಗುತ್ತದೆ. ಯಾವ ಸರಕಾರವಾದರೂ ಯಾರಿಗೆ ಹೆಚ್ಚು ಗಮನ ನೀಡುತ್ತದೆ, ಯಾರನ್ನು ನೋಯಿಸಲು ತಯಾರಿಲ್ಲ ಎನ್ನುವುದನ್ನು ಊಹಿಸುವುದು ಕಷ್ಟವಲ್ಲ. ಕೊನೇ ಪಕ್ಷ ರೈತರ ಹಿತ ಕಾಪಾಡುತ್ತೇವೆ, ನಾವು ರೈತಪರ, ಜೈಕಿಸಾನ್ ಎಂದೆಲ್ಲ ಸರಕಾರಗಳು ಮತ್ತು ರಾಜಕೀಯ ಪಕ್ಷಗಳು ಬಾಯಿ ಮಾತಿಗಾದರೂ ಹೇಳುತ್ತಿವೆ ಅಂತಾದರೆ ಅದಕ್ಕೆ ಕಾರಣ, ರೈತರಲ್ಲದ ಜನರಿಗೆ ಕೂಡ ಅನ್ನ ಕೊಡುವವರ ಬಗ್ಗೆ ಒಂದು ಕೃತಜ್ಞತಾ ಭಾವ ಅಥವಾ ಸೆಳೆತ ಇನ್ನೂ ಉಳಿದಿದೆ ಮತ್ತು ನಾವಿನ್ನೂ ಪೂರ್ತಿ ವ್ಯಾವಹಾರಿಕ ಅಥವಾ ವೈಚಾರಿಕರಾಗಿಲ್ಲ ಅನ್ನುವುದೇ ಆಗಿದೆ. ಇಂದಿಗೂ ಮುಂದುವರಿದವರ, ದಲಿತೇತರರ, ರೈತರಲ್ಲದವರ, ಪುರುಷರ ಮತಗಳು ಸಿಗಬೇಕಾದರೂ ಕೂಡ ರಾಜಕೀಯ ಪಕ್ಷಗಳು ಅಥವಾ ಸರಕಾರಗಳು ತಾವು ಹಿಂದುಳಿದವರ, ದಲಿತರ, ರೈತರ, ಮಹಿಳೆಯರ ಪರಎಂದು ಹೇಳಿಕೊಳ್ಳುವುದು ಅಗತ್ಯ. ಒಟ್ಟಿನಲ್ಲಿರೈತರ ಬಗ್ಗೆ ನಿಜವಾದ ಕಾಳಜಿಯನ್ನು ಸರಕಾರಗಳು ಹೊಂದಿರುತ್ತವೆಎನ್ನುವುದು ಕಷ್ಟ.
ಇಂಥಲ್ಲಿ ಕೆಲವರು ಅತ್ಯಂತ ಅವಾಸ್ತವಿಕವಾಗಿ ರೈತರಿಗೆ ಹೆಚ್ಚು ಬೆಲೆ ಸಿಗಬೇಕು, ಗ್ರಾಹಕನಿಗೆ ಹೊರೆಯಾಗಬಾರದು, ಗ್ರಾಹಕನಿಗೆ ಹೊರೆಯಾಗಲು ಮಧ್ಯವರ್ತಿಗಳೇ ಕಾರಣ ಅಂತೆಲ್ಲ ಹೇಳುವುದುಂಟು.
ಅದು ಪೂರ್ತಿ ಸತ್ಯವಲ್ಲ. ಇಂದಿನ ಮಾಹಿತಿ ಯುಗದಲ್ಲಿ, ಯಾರು ಬೇಕಾದರೂ ಮಧ್ಯವರ್ತಿಯಾಗಿ ವ್ಯಾಪಾರಕ್ಕಿಳಿಯಲು ಅವಕಾಶವಿರುವಲ್ಲಿ, ರೈತನಿಗೆ ಒಳ್ಳೆಯ ಬೆಲೆ ಸಿಗಬೇಕಾದರೆ ಗ್ರಾಹಕನಿಗೆ ಅದರ ಹೊರೆಯನ್ನು ವರ್ಗಾಯಿಸದೆ ಇರಲು ಸಾಧ್ಯವಿಲ್ಲ. ಆಹಾರ ಧಾನ್ಯಗಳ ಬೆಲೆಯೇರಿಕೆ ಅನ್ನುವುದು ಎಷ್ಟು ದೊಡ್ಡ ನೇತ್ಯಾತ್ಮಕ ಸುದ್ದಿಯಾಗುತ್ತದೆಯೆಂದು ಬೇರೆ ಹೇಳಬೇಕಿಲ್ಲ.
ಅಷ್ಟೆಲ್ಲ ಯಾಕೆ? ಕುಡಿಯುವ ನೀರಿನ ಬಾಟಲಿಯ ಬೆಲೆಗಿಂತ ಬಹಳ ಹೆಚ್ಚೇನೂ ಬೆಲೆಯಿಲ್ಲದ ಒಂದು ಲೀಟರು ಹಾಲಿಗೆ ಎರಡು ರೂಪಾಯಿ ಏರಿದರೆ ಪತ್ರಿಕೆಗಳಲ್ಲಿ ಕಾಣುವ ಹಾಹಾಕಾರ ನೋಡಿಯೇ ಇರುತ್ತೀರಿ.
ಈ ಹಿಂದೆಯೇ ನಾನು ಅಲ್ಲಿ ಇಲ್ಲಿ ಅಲ್ಪಸ್ವಲ್ಪ ಬರೆದಿರುವ ಮೇಲಿನ ವಿಚಾರಗಳೆಲ್ಲ ಈಗ ಮತ್ತೆ ನೆನಪಾಗಲು ಕಾರಣ ನನಗೆ ಗುರು ಸಮಾನರಾದ ಒಬ್ಬರನ್ನು ಮೊನ್ನೆ ಭೇಟಿಯಾಗಿ ಒಂದಷ್ಟು ಹೊತ್ತು ಮಾತನಾಡಲು ಅವಕಾಶ ಸಿಕ್ಕಿದ್ದು.
ನನಗೆ ದೂರದ ನೆಂಟರೂ ಆದ ಅವರು ಯಾವಾಗಾದರೊಮ್ಮೆ ಇನ್ನಾವುದೋ ನೆಂಟರ ಮನೆಯಲ್ಲಿ ಯಾವುದಾದರೂ ಕಾರ್ಯಕ್ರಮವಿದ್ದಾಗ ಸಿಗುವುದುಂಟು. ಲೋಕದ ಎಲ್ಲರೂ ಹೇಳುವುದಕ್ಕಿಂತ ಭಿನ್ನವಾದ ಆಲೋಚನೆಗಳನ್ನು ಅವರು ನನ್ನಲ್ಲಿ ಹೇಳುವುದುಂಟು. ಅವರ ಹೆಸರನ್ನು ಉಲ್ಲೇಖಿಸಿ ಹೇಳಲು ನನಗೆ ಅನುಮತಿಯಿಲ್ಲವಾದ್ದರಿಂದ ಹೇಳುತ್ತಿಲ್ಲ. ಅವರು ಕೃಷಿಕರೇ. ಹಾಗಂತ ಪ್ರಗತಿಪರ ಕೃಷಿಕರು ಎಂಬ ವಿಶೇಷಣವನ್ನು ಅವರ ಬಗ್ಗೆ ಉಪಯೋಗಿಸಲಾಗದು. ಯಾಕೆಂದರೆ ಇದ್ದ ಜಾಗದಲ್ಲೆಲ್ಲ ಒಂದಲ್ಲ ಒಂದು ಬೆಳೆ ತೆಗೆದು ಅಥವಾ ಮಿಶ್ರಬೆಳೆ ಬೆಳೆಸಿ, ಅದರಲ್ಲೂ ರಬ್ಬರು ಇತ್ಯಾದಿ ವಾಣಿಜ್ಯ ಬೆಳೆ ಬೆಳೆಸಿ ಕೃಷಿಯನ್ನು ಲಾಭದಾಯಕಗೊಳಿಸುವ ಕೆಲಸದಲ್ಲಿ ಅವರಿನ್ನೂ ತೊಡಗಿಲ್ಲ. ಇರಲಿ. ಮೊನ್ನೆ ಮಾತಿನ ಮಧ್ಯೆ ಕೃಷಿ ಕ್ಷೇತ್ರದ ಇಕ್ಕಟ್ಟು ಬಿಕ್ಕಟ್ಟುಗಳ ವಿಚಾರವೂ ಬಂತು.
ಗಣಕ ತಂತ್ರಜ್ಞಾನ ಕ್ಷೇತ್ರದಂಥ ಕಡೆಗಳಲ್ಲಿ ಉದ್ಯೋಗದಲ್ಲಿದ್ದು ಒಳ್ಳೆಯ ಆದಾಯವಿರುವ ಕೆಲವು ಯುವಕರು ಕೃಷಿಯಲ್ಲಿ ಆಸಕ್ತಿ ತೋರಿಸಲು ಆರಂಭಿಸಿರುವುದು ಮತ್ತು ವಾರಾಂತ್ಯ ಅಥವಾ ಬಿಡುವಿನ ವೇಳೆಯಲ್ಲಿ ತಾವು ಖರೀದಿಸಿದ ಜಮೀನಿಗೆ ಹೋಗಿ ಕೃಷಿಯಲ್ಲಿ ತೊಡಗುವುದು ಒಂದು ಒಳ್ಳೆಯ ಬೆಳವಣಿಗೆ ಎಂದೇನೋ ನಾನು ಹೇಳಿದೆ. ಅವರು ಒಪ್ಪಲಿಲ್ಲ.
ಕೃಷಿಯನ್ನು ಹೀಗೆ ಹವ್ಯಾಸವಾಗಿ ತೆಗೆದುಕೊಳ್ಳುವವರಿಂದ ನಿಜವಾದ ಕೃಷಿಕರಿಗೆ ಕಷ್ಟವೇ ಅಂದರು. ಯಾಕೆ ಂದು ಕೇಳಿದೆ. ಅವರು ಹೇಳುವಂತೆ ಒಳ್ಳೆಯ ಕೃಷಿಯೇತರ ಆದಾಯವಿರುವ ಈ ಮಂದಿಗೆ ಕೃಷಿ ಜೀವನ್ಮರಣದ ಪ್ರಶ್ನೆಯಲ್ಲ. ಕೇಳಿದ ಕೂಲಿ ನೀಡಲು ಅವರು ತಯಾರು. ಉತ್ಪನ್ನದ ಬೆಲೆಯ ಬಗ್ಗೆಯೂ ಅವರು ತಲೆಕೆಡಿಸಿಕೊಳ್ಳಬೇಕಿಲ್ಲ. ಇದರಿಂದ ಕೃಷಿಯನ್ನೇ ಅವಲಂಬಿಸಿದವರ ಸ್ಥಿತಿ ಮತ್ತಷ್ಟು ಹದಗೆಡುತ್ತದೆ ಅಂದರು. ಆಯಿತು, ಕೃಷಿ ಕೂಲಿ ಕಾರ್ಮಿಕರಿಗಾದರೂ ಅನುಕೂಲವಾಗುತ್ತದಲ್ಲ ಅಂದೆ ನಾನು.
ಅದು ತತ್ಕಾಲದ್ದು, ಒಟ್ಟಾರೆ ಕ್ಷೇತ್ರ ಸುಸ್ಥಿರವಾಗಲು ಏನೂ ಉಪಯೋಗವಿಲ್ಲ ಅಂದರು. ಏನೋ ಇರಬಹುದು ಅನಿಸಲಾರಂಭಿಸಿತು. ಇದರಿಂದಾಗಿ ಕೊನೇ ಪಕ್ಷ ಕೃಷಿ ಕೆಲಸಕ್ಕೆ ಒಂದು ನಮೂನೆಯ ಘನತೆಯಾದರೂ ಬಂದೀತಲ್ಲವೇ ಎಂದೆ. ಏನೂ ಇಲ್ಲ; ಶ್ರೀಮಂತ ಹರಿದ ಜೀನ್ಸ್ ಹಾಕಿದರೆ ಫ್ಯಾಶನ್. ಬಡವ ಹಾಕಿದರೆ? ಇದೂ ಹಾಗೆಯೇ ಅಂದರು. ಹಾಗಲ್ಲ, ಹಳ್ಳಿಯಲ್ಲಿರುವ ಯುವಕರಿಗೆ ಕೃಷಿಯಲ್ಲಿ ತೊಡಗಲು ಪ್ರೇರಣೆಯಾಗಲಿಕ್ಕಿಲ್ಲವೇ ಅಂತಂದೆ. ಇಲ್ಲ, ಇದರಿಂದ ಇದೇ ರೀತಿ ನಗರದಲ್ಲಿರುವ ದುಡ್ಡಿನವರಿಗೆ ಪ್ರೇರಣೆಯಾಗುತ್ತದೆ ಹೊರತು ಹಳ್ಳಿಯಲ್ಲಿ ಕೃಷಿಯ ಕಷ್ಟಗಳನ್ನೇ ಕಾಣುವವರಿಗೆ ಪ್ರೇರಣೆಯಾದದ್ದು ನನಗೆ ಕಾಣುವುದಿಲ್ಲ ಅಂದರು.
ಅದೇನೋ ಇದ್ದೀತು; ಆದರೆ, ದೊಡ್ಡ ಸಂಬಳದ ಐಟಿ ಇತ್ಯಾದಿ ಉದ್ಯೋಗ ಬಿಟ್ಟು ಹಳ್ಳಿಗೆ ಹಿಂದಿರುಗಿ ಕೃಷಿಯಲ್ಲಿ ತೊಡಗಿದವರ ಬಗ್ಗೆ ಆದರೂ ನಿಮಗೆ ಖುಷಿಯಿರಬಹುದು ಎಂದೆ.
ಅದಕ್ಕೂಅವರು ಹೆಚ್ಚು ಉತ್ಸಾಹ ತೋರಿದಂತೆ ಕಾಣಲಿಲ್ಲ. ಇಲ್ಲ ಇಲ್ಲ. ನಮಗಾದರೆ ಕೃಷಿ ಮಾತ್ರ ಗೊತ್ತಿರುವುದು. ಬೇರೆ ರೀತಿಯಲ್ಲಿ ಒಳ್ಳೆ ಆದಾಯ ಪಡೆಯಬಲ್ಲವರು ಕೃಷಿಗೆ ಬಂದರೆ ನಮಗೆ ಅನವಶ್ಯಕ ಕಾಂಪಿಟಿಶನ್ ಅಲ್ಲವೇ ಅಂತ ಸಣ್ಣಗೆ ಗೊಣಗಿದರು. ಅವರ ತಜ್ಞ ಕ್ಷೇತ್ರ ಏನಿದೆ ಆ ಕ್ಷೇತ್ರದ ಅವರ ಮಾನವ ಸಂಪನ್ಮೂಲ ಅಷ್ಟರ ಮಟ್ಟಿಗೆ ವ್ಯರ್ಥ ಆದಂತಲ್ಲವೇ ಎಂದೂ ಕೇಳಿದರು. ನೀವು ಹೇಳೋದು ಸರಿ ಇರಬಹುದು, ಆದರೂ ಅದೆಲ ಅವರವರ ಸ್ವಾತಂತ್ರ್ಯ ಅಲ್ಲವೇ ಎಂದೆ. ಅದು ನಿಜ, ನಾನು ಈಗ ನಿನ್ನಲ್ಲಿ ಹೇಳುವುದು ಅಷ್ಟೆ. ಹಾಗೆ ಕೃಷಿ ಮಾಡುವವರಿಗೆ ನಾನು ಹೇಳಲಿಕ್ಕೂ ಹೋಗುವುದಿಲ್ಲ. ನಾನೇನು ನಿನ್ನ ಹಾಗೆ ಲೋಕವನ್ನು ತಿದ್ದಲು ಹೇಳುತ್ತಿರುವುದಲ್ಲ ಎಂದರು.
ನಿನ್ನ ಹಾಗೆ ಅಂದದ್ದು ನನಗೆ ಸ್ವಲ್ಪ ನಾಟಿತು. ಇಲ್ಲ ಇಲ್ಲ ನನಗೂ ಲೋಕದ ಡೊಂಕು ತಿದ್ದುವ ಮಹತ್ವಾಕಾಂಕ್ಷೆಯೇನೂ ಇಲ್ಲ ಎಂದೇನೋ ಹೇಳಲು ತೊಡಗಿದೆ. ಮತ್ಯಾಕೆ ನೀನು ಪುಸ್ತಕ ಲೇಖನ ಎಲ್ಲ ಬರೆಯುವುದು ಅಂತ ಅವರು ಕೇಳುವಾಗ, ಹೌದು ಯಾಕೆ ಅಂತ ನನ್ನನ್ನು ನಾನೇ ಕೇಳಿಕೊಳ್ಳುವಂತಾಯಿತು. ಪುಣ್ಯಕ್ಕೆ ಅಷ್ಟಾಗುವಾಗ ಕೊಳೆರೋಗ ಇದ್ದೋ ಭಾವಾ ಅಂತ ಕೇಳುತ್ತಾ ಮತ್ತಾರೋ ಹಿರಿಯರು ಎಡೆಯಲ್ಲಿ ಬಂದು ಬಾಯಿ ಹಾಕಿ ಅವರನ್ನು ಕೇಳಿದ್ದರಿಂದ ಆ ಕ್ಷಣಕ್ಕೆ ಬಚಾವಾದೆ. ಬಚಾವಾದೆ ಅಂತ ಮಾತಿಗೆ ಹೇಳಿದೆ. ನಿಜವಾಗಿ ಅವರೆದುರು ಸೋಲಲು ನನಗೆ ಯಾವುದೇ ಮುಜುಗರವಿಲ್ಲ. ಅಮ್ಮನೆದುರು ಜಾರಿಯೋ ಎಡವಿಯೋ ಬಿದ್ದರೆ ಮಗುವಿಗೆ ಅವಮಾನವಾಗುವುದಿಲ್ಲವಂತೆ. ಹಾಗೆ. ಮತ್ತೆ ಮುಂದುವರಿದ ನಮ್ಮ ಮಾತಿನ ಬಗ್ಗೆ ಇನ್ಯಾವಾಗಲಾದರೂ ಅನುಕೂಲವಾದಾಗ ಹೇಳುವೆ.