ವಿಶೇಷ ವರದಿ

ಮುಚ್ಚುವ ಶಾಲೆಗಳಿಗೆ ಪಾಠ ಹೇಳುವ ಹಳ್ಳಿ ಸರ್ಕಾರಿ ಹೈಸ್ಕೂಲು

  • ಹರೀಶ ಮಾಂಬಾಡಿ

ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು ಮೂರುವರೆ ಕಿ.ಮೀ. ದೂರದಲ್ಲಿದೆ ಈ ಹೈಸ್ಕೂಲು ಯಾವುದರಲ್ಲೂ ಕಮ್ಮಿ ಇಲ್ಲ. ವ್ಯವಸ್ಥೆ ಕಲ್ಪಿಸಲು ಯಾವುದರಲ್ಲೂ ರಾಜಿ ಇಲ್ಲ. ಗುಣಮಟ್ಟದ ಶಿಕ್ಷಣ ಅದಕ್ಕೆ ಬೇಕಾದ ಪೂರಕ ವ್ಯವಸ್ಥೆ, ಜೊತೆಗೆ ಜಲಸಾಕ್ಷರತೆ, ಸ್ವಚ್ಛತೆಯ ಅರಿವು ಮೂಡಿಸುವಲ್ಲಿ ಈ ಶಾಲೆ ಒಂದು ಹೆಜ್ಜೆ ಮುಂದಿದೆ. ಇದ್ಯಾವುದೋ ಹೈಟೆಕ್ ಖಾಸಗಿ ಶಾಲೆಯ ಕತೆಯಲ್ಲ, ಬಂಟ್ವಾಳ ತಾಲೂಕಿನ ಹಳ್ಳಿ ಪ್ರದೇಶದಲ್ಲಿರುವ ಸರ್ಕಾರಿ ಹೈಸ್ಕೂಲಿನ ಯಶೋಗಾಥೆ.

ವಿದ್ಯಾರ್ಥಿಗಳು ಬಾರದೆ, ಸವಲತ್ತುಗಳು ದೊರಕದೆ ಹಲವು ಶಾಲೆಗಳು, ಕಾಲೇಜುಗಳು ಇಂದು ಮುಚ್ಚುತ್ತಿವೆ. ಅಂಥ ಹೊತ್ತಿನಲ್ಲಿ ಮನಸ್ಸಿದ್ದರೆ ಮಾರ್ಗ ಎಂಬ ಮಾತು ಇಲ್ಲಿ ಅಕ್ಷರಶ: ನಿಜವಾಗಿದೆ. ಇದು ಬಂಟ್ವಾಳ ತಾಲೂಕು ಶಂಭೂರಿನಲ್ಲಿರುವ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ. ಈ ಶಾಲೆ ಆರಂಭಗೊಂಡದ್ದು 2003ರಲ್ಲಿ. ಇದೀಗ 2012ರಿಂದ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಶಾಲಾ ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷರು ಹಾಗೂ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದ್ದಾರೆ.

2004-04ರಲ್ಲಿ ಸ್ಥಳೀಯರೂ ಆದ ರಾಜಕಾರಣಿ ಬೊಂಡಾಲ ಜಗನ್ನಾಥ ಶೆಟ್ಟಿ ಸರಕಾರದ ಮತ್ತು ಇಲಾಖೆಯ ಅನುಮತಿ ಪಡೆದು ಶಾಲೆಯನ್ನು ಆರಂಭಿಸುವಲ್ಲಿ ಸಫಲರಾದರು. ಸರಕಾರದಿಂದ ನಾನಾ ಅನುದಾನಗಳೂ ಲಭಿಸಿದವು. ಹೈಸ್ಕೂಲಿ ಭಿನ್ನವಾಗಿರಬೇಕು ಎಂಬ ಆಶಯದಿಂದ ಅವರು ಇಲಾಖಾ ನಿಯಮಾನುಸಾರ ಶಾಲೆಯನ್ನು ದತ್ತು ಸ್ವೀಕರಿಸಿದರು. ೨೦೧೨ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟ ಬಳಿಕ ಅವರ ಸಹೋದರ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಮೂಲಕ ಶಾಲಾಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ತೀರ ಬqತನದಲ್ಲಿರುವ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ವಿದ್ಯಾಭ್ಯಾಸದ ಎಲ್ಲಾ  ಖರ್ಚನ್ನು ಭರಿಸುತ್ತಿದ್ದಾರೆ. ಸಚಿವ ರಮಾನಾಥ ರೈ ಅವರ ಮಾರ್ಗದರ್ಶನ, ಸೂಚನೆ, ಊರವರ ಪ್ರೋತ್ಸಾಹದಂತೆ ಶಾಲೆಯನ್ನು ದತ್ತು ತೆಗೆದುಕೊಳ್ಳಲಾಗಿದೆ. ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆಯಿಲ್ಲದಂತೆ ಅಭಿವೃದ್ಧಿ ಹೊಂದಬೇಕು, ನಮ್ಮ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ನೆಲೆಯಲ್ಲಿ ದತ್ತು ತೆಗೆದುಕೊಳ್ಳಲಾಗಿದೆ ಎನ್ನುತ್ತಾರೆ ಸಚ್ಚಿದಾನಂದ ಶೆಟ್ಟಿ ಬೊಂಡಾಲ.

ಏನೆಲ್ಲ ಇದೆ:

ಸರಕಾರಿ ಯೋಜನೆಗಳಾದ ಬಿಸಿಯೂಟ, ಸ್ವಚ್ಛತಾ ಕಾರ್ಯಕ್ರಮಗಳು ಜಾರಿಗೊಳ್ಳುವ ಮೊದಲೇ ಶಾಲೆಯಲ್ಲಿ ಈ ಸೌಲಭ್ಯಗಳು ಇದ್ದವು. ಈ ಶಾಲೆಯಲ್ಲಿ ಹೊಸ ತಂತ್ರಜ್ಞಾನದ ಸ್ವಚ್ಛತಾ ಯಂತ್ರಗಳನ್ನು ಅಳವಡಿಸಲಾಗಿದೆ. ಅಕ್ಷರ ದಾಸೋಹ ಯೋಜನೆಯಡಿ ಅನ್ನ ಬೇಯಿಸಲು ಸ್ಟೀಮ್ ಅಳವಡಿಸಲಾಗಿದೆ. ಅಡುಗೆಯವರು ಸ್ವಚ್ಛತೆಯನ್ನು ಕಾಪಾಡಲು ಶಿರ, ಕೈಗಳಿಗೆ ಕವಚವನ್ನು ಹಾಕುತ್ತಾರೆ. ಶಾಲಾ ಕಂಪ್ಯೂಟರ್ ಕೊಠಡಿ ಖಾಸಗಿ ಶಾಲೆಗಳಂತೆ ಹವಾನಿಯಂತ್ರಿತವಾಗಿದೆ. ತರಗತಿ ಕೊಠಡಿಗೆ ಇಂಟರ್‌ಕಾಮ್ ವ್ಯವಸ್ಥೆ ಇದೆ. ಇಡೀ ಶಾಲೆ ಭದ್ರತಾ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸಭಾಂಗಣ, ಶೌಚಾಲಯವೆಲ್ಲವೂ ಟೈಲ್ಸ್ ಅಳವಡಿಸಿ ನಳನಳಿಸುತ್ತಿವೆ. ವಿದ್ಯಾರ್ಥಿಗಳ ಊಟಕ್ಕೆ ಉಚಿತ ತಟ್ಟೆ, ಲೋಟವಲ್ಲದೆ ವಿಶಾಲವಾದ ಭೋಜನಶಾಲೆಯೂ ನಿರ್ಮಾಣಗೊಂಡಿದೆ.

ಶಾಲಾ ಮಕ್ಕಳಿಗೆ ಐಡಿ ಕಾರ್ಡ್ ಇದೆ. ಇಲ್ಲಿರುವ ಗೌರವ ಶಿಕ್ಷಕರೋರ್ವರಿಗೆ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೌರವಧನ ನೀಡಲಾಗುತ್ತಿದೆ. ಜಲಮರುಪೂರಣ ವ್ಯವಸ್ಥೆಯನ್ನೂ ಶಾಲೆ ಅಳವಡಿಸಿಕೊಂಡಿದೆ. ನೀರು ವೇಸ್ಟ್ ಆಗಲು ಬಿಡದೆ ಅದನ್ನು ರೀಚಾರ್ಜ್ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ಜಲಪಾಠ, ಸ್ವಚ್ಛತಾ ಪಾಠ ನಿತ್ಯವೂ ಆಗುತ್ತದೆ. ಶಾಲಾ ಮಕ್ಕಳೇ ಕೈತೋಟವನ್ನು ಮಾಡಿ ಸ್ವಾವಲಂಬಿ ಜೀವನಕ್ಕೆ ಮುಂದಡಿ ಇಟ್ಟಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಮಿಂಚಿದ ಶಾಲೆ:

ಚಿತ್ರಕಲೆ, ಭರತನಾಟ್ಯ, ನಾಟಕ, ಯಕ್ಷಗಾನ ತರಬೇತಿಗಳನ್ನು ಮಕ್ಕಳಿಗೆ ಉಚಿತವಾಗಿ ಶಾಲಾಭಿವೃದ್ಧಿ ಸಮಿತಿ ನೀಡುತ್ತಾ ಪ್ರದರ್ಶನದ ಪ್ರಾಯೋಜಕತ್ವವನ್ನು ವಹಿಸುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ದಾಖಲಾತಿಯೂ ಹೆಚ್ಚಾಗಿದೆ. ಅನೇಕ ಸ್ಪರ್ಧೆಗಳಲ್ಲಿ, ಕ್ರೀಡಾಕೂಟಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಶಿಕ್ಷಕರ ನೇತೃತ್ವದಲ್ಲಿ ಭಾಗವಹಿಸುತ್ತಿದ್ದು, ತಾಲೂಕು, ಜಿಲ್ಲಾ ಮಟ್ಟ ಹಾಗೂ ವಿಭಾಗ ಮಟ್ಟಗಳಲ್ಲಿ  ಬಹುಮಾನಗಳನ್ನು ಬಾಚಿಕೊಂಡಿದ್ದಾರೆ.

ಮರುನಾಮಕರಣ:

ಹತ್ತು ವರ್ಷಗಳಲ್ಲಿ   ನಿರೀಕ್ಷೆಗೂ ಮೀರಿ ಬೆಳೆದು ನಿಂತ ಶಾಲೆಯ ಸರ್ವಾಂಗೀಣ ಅಭಿವೃದ್ಧಿಯನ್ನು ಅವಲೋಕನ ಮಾಡಿದ  ಇಲಾಖೆಯು ಶಾಲೆಗೆ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಎಂಬ ಹೆಸರನ್ನು ೨೦೧೩ರಲ್ಲಿ ನಡೆದ ಶಾಲಾ ದಶಮಾನೋತ್ಸವ ಸಂದರ್ಭದಲ್ಲಿ  ನಾಮಕರಣ ಮಾಡಿತ್ತು.

2015-16 ನೆಯ ಸಾಲಿನಲ್ಲಿ ಶಾಲಾ ನಾಟಕ ತಂಡವು ’ವಿಜ್ಞಾನ ನಾಟಕ’ ಸ್ಫರ್ಧೆಯಲ್ಲಿ ವಿಭಾಗ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದೆ. ಎಂ.ಹೆಚ್.ಆರ್.ಡಿ ವತಿಯಿಂದ ನಡೆದ ’ಕಲಾ ಉತ್ಸವ’ದ ನಾಟಕ ಸ್ಫರ್ಧೆಯಲ್ಲಿ ೧೦ನೆಯ ತರಗತಿ ಕನ್ನಡ ಪಠ್ಯಾಧಾರಿತ ’ಹಲಗಲಿಯ ಬೇಡರು’ ನಾಟಕ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ನವದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಫರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ತೀರ್ಪುಗಾರರ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಪ್ರತಿಭಾಕಾರಂಜಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶಾಲಾ ತಂಡ ರಾಜ್ಯ ಮಟ್ಟದಲ್ಲಿ ನಾಟಕ ಪ್ರದರ್ಶನ ನೀಡಲು ಸಜ್ಜಾಗಿದೆ.

ಶಾಲೆಯನ್ನು ದತ್ತು ತೆಗೆದುಕೊಂಡ ಬಳಿಕ ಹಲವು ಅಭಿವೃದ್ಧಿ ಕೆಲಸಗಳು ನಡೆದದ್ದು ಸಂತಸ ತಂದಿದೆ. ಇದಕ್ಕೆ ಎಲ್ಲರ ಪ್ರೋತ್ಸಾಹವೂ ಇದೆ. ಶಾಲಾ ಮಕ್ಕಳಿಗೆ ಬೆಳಗ್ಗಿನ ಉಪಾಹಾರ ನೀಡುವ ಯೋಜನೆಯೂ ಭವಿಷ್ಯದಲ್ಲಿದೆ. ವಿದ್ಯುತ್ ವಿಚಾರದಲ್ಲೂ ಸ್ವಾವಲಂಬಿಯಾಗಲು ಶಾಲೆಯಲ್ಲಿ ಸೋಲಾರ್ ಅಳವಡಿಸುವ ಆಲೋಚನೆ ನಮಗಿದೆ ಎನ್ನುತ್ತಾರೆ ಬೊಂಡಾಲ ಸಚ್ಚಿದಾನಂದ ಶೆಟ್ಟಿ

ಜಲಾಂದೋಲನ, ಸ್ವಚ್ಛತೆ ಹಾಗೂ ಕಲಿಕಾ ವಿಚಾರದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಮುಂದಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಶಾಲಾಭಿವೃದ್ಧಿ ಸಮಿತಿ ಹಾಗೂ ಶಾಲೆಯನ್ನು ದತ್ತು ತೆಗೆದುಕೊಂಡಿರುವ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಸಹಕಾರದಿಂದ ಇದು ಸಾಧ್ಯವಾಗಿದೆ ಎನ್ನುತ್ತಾರೆ ಪ್ರಭಾರ ಮುಖ್ಯ ಶಿಕ್ಷಕ ಕಮಲಾಕ್ಷ.

ಆಗಿನ ಶಾಸಕರು ಈಗಿನ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾರ್ಗದರ್ಶನದಂತೆ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷನಾಗಿ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ನಿಂದ ದತ್ತು ತೆಗೆದುಕೊಂಡು, ಎಲ್ಲರ ಪ್ರೋತ್ಸಾಹದಿಂದ ವೈಯಕ್ತಿಕ ದೇಣಿಗೆಯನ್ನು ನೀಡುವ ಮೂಲಕ ಶಾಲೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಜಗನ್ನಾಥ ಶೆಟ್ಟಿ ಕನಸಿನಂತೆ ಶಾಲೆ ನಿರ್ಮಾಣವಾಗಿದ್ದು, ಅದನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು ನಮ್ಮ ಧ್ಯೇಯ. ಶಿಕ್ಷಕರ ಪ್ರಯತ್ನ ಶ್ಲಾಘನೀಯ ಎನ್ನುತ್ತಾರೆ ಸಚ್ಚಿದಾನಂದ ಶೆಟ್ಟಿ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts