ಸಜೀಪನಡು ಗ್ರಾಮದ ಕಂಚಿನಡ್ಕಪದವಿನ ಘನತ್ಯಾಜ್ಯ ಘಟಕಕ್ಕೆ ಸೋಷಿಯಲ್ ಡೆಮಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರಾರಂಭದಿಂದಲೂ ವಿರೋಧಿಸುತ್ತಾ ಬಂದಿದೆ. ಈಗಲೂ ಇದಕ್ಕೆ ವಿರೋಧವಿದೆ. ಈ ವಿಚಾರದಲ್ಲಿ ಜಿಲ್ಲಾಡಳಿತದ ಕೆಲವೊಂದು ಸೂಚನೆಗೆ ಅನುಗುಣವಾಗಿ ಷರತ್ತುಗಳನ್ನು ಪರಮಾರ್ಶಿಸಿ ಒಪ್ಪುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಸಜೀಪನಡು ಗ್ರಾಮ ಪಂಚಾಯತ್ ಅಧ್ಯಕ್ಷ ಸಜೀಪ ಮುಹಮ್ಮದ್ ನಾಸೀರ್ ಸ್ಪಷ್ಟಪಡಿಸಿದ್ದಾರೆ.
ಕಂಚಿನಡ್ಕಪದವಿನ ಘನತ್ಯಾಜ್ಯ ಘಟಕದ ಬಗ್ಗೆ ಸ್ಪಷ್ಟೀಕರಣ ಸಭೆಯಲ್ಲಿ ಅವರು ಮಾತನಾಡಿ, ಈ ವಿಷಯದ ಬಗ್ಗೆ ಕಾಂಗ್ರೆಸ್ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವುದು ಸಮಂಜಸವಲ್ಲ. ಆ ಪ್ರದೇಶದಲ್ಲಿ ವಾಸಿಸುವ ಬಡಜನರನ್ನು ರಾಜಕೀಯ ದಾಳವಾಗಿ ಬಳಸಿ ಅವರನ್ನು ಗ್ರಾಮ ಪಂಚಾಯತ್ ವಿರುದ್ಧ ಎತ್ತಿಕಟ್ಟಿರುವುದು ಶೋಭೆಯಲ್ಲ ಎಂದರು.
ಕಂಚಿನಡ್ಕಪದವಿನಲ್ಲಿ ನಿರ್ಮಾಣ ಹಂತದಲ್ಲಿರುವ ಬಂಟ್ವಾಳ ಪುರಸಭೆಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಂಬಂಧಿಸಿ ಇಬ್ಬರು ಸಚಿವರ ನಡುವಿನ ಗುದ್ದಾಟದಿಂದ ಗ್ರಾಮಸ್ಥರು ಅತಂತ್ರರಾಗುವಂತಾಗಿದೆ. ಕಾಂಗ್ರೆಸ್ ನವರು ತಾಕತ್ತಿದ್ದರೆ ಪುರಸಭೆಯ ಮುಂದೆ ಪ್ರತಿಭಟನೆ ಮಾಡಲಿ ಎಂದು ಸವಾಲು ಹಾಕಿದರು.
ಪುರಸಭೆಯ ಕಸ ವಿಲೇವಾರಿ ದೃಷ್ಟಿಯಿಂದ ಮಹತ್ವದ್ದಾಗಿದೆ. ತ್ಯಾಜ್ಯ ಶುದ್ಧೀಕರಣ ಘಟಕ ನಿರ್ಮಾಣ ಕುರಿತು ಸ್ಪಷ್ಟವಾದ ನಿರ್ಧಾರವನ್ನು ಆಡಳಿತ ಕೈಗೊಳ್ಳಬೇಕು. ಈ ಬಗ್ಗೆ ಸಚಿವದ್ವಯರನ್ನು ಒಟ್ಟಿಗೆ ಕೂರಿಸಿ ಸ್ಥಳೀಯ ಪಂಚಾಯತ್ ಮತ್ತು ಪುರಸಭೆ ಕೂಡಾ ಜಂಟಿ ಸಭೆ ನಡೆಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ತ್ಯಾಜ್ಯ ಶುದ್ಧೀಕರಣ ಘಟಕವನ್ನು ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ನಿರ್ಮಿಸಲು ಪುರಸಭೆ ಬದ್ಧವಾಗಿದೆ. ಜಿಲ್ಲಾಧಿಕಾರಿ ಸೂಚನೆಯಂತೆ ಈಗಾಗಲೇ ಸ್ಥಳೀಯರಿಗೆ ಇರಾ ಪಂಚಾಯತ್ನ ವ್ಯಾಪ್ತಿಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಕೆಲವರಿಗೆ ನೋಟಿಸನ್ನು ಜಾರಿ ಮಾಡಲಾದ ಕುರಿತು ಹೇಳಲಾಗುತ್ತಿದೆ ಆದರೆ ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಗೆ ಯಾವುದೇ ನಿಖರವಾದ ಮಾಹಿತಿ ಪುರಸಭೆ ನೀಡಿಲ್ಲ ಎಂದು ಅವರು ಆರೋಪಿಸಿದರು.
ಗ್ರಾಪಂ ಅಧ್ಯಕ್ಷ ಪುರಸಭೆಯಿಂದ ಹಣ ಪಡೆದು ಇಲ್ಲಿನ ಗ್ರಾಮಸ್ಥರನ್ನು ಒಕ್ಕೆಲೆಬ್ಬಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಇದು ಖಂಡನೀಯ. ಘನತ್ಯಾಜ್ಯ ವಿಚಾರದ ಬಗ್ಗೆ ಜಿಲ್ಲಾಡಳಿತದ ಆದೇಶದ ಮೇರೆಗೆ ಪಿಡಿಒ ಅವರೇ ಖುದ್ದಾಗಿ ಈ ಕ್ರಮವನ್ನು ಕೈಗೊಂಡಿದ್ದಾರೆ. ಇದಕ್ಕೂ ಗ್ರಾಪಂಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಪಕ್ಷದ ನಾಯಕರುಗಳಾದ ಶಾಹುಲ್ ಎಸ್.ಎಚ್, ಅಬ್ಬಾಸ್ ಕಿನ್ಯ, ಹಾರಿಸ್ ಮಲಾರ್, ಎಸ್.ಎನ್ ಅಬ್ದುಲ್ ರಹಿಮಾನ್, ಅಬ್ದುಲ್ ರಶೀದ್, ಇಕ್ಬಾಲ್ ಬೈಲಗುತ್ತು ಉಪಸ್ಥಿತರಿದ್ದರು. ಮಾಲಿಕ್ ಕೊಳಕೆ ಕಾರ್ಯಕ್ರಮ ನಿರೂಪಿಸಿದರು.