ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುಕೂಟದ ಆಶ್ರಯದಲ್ಲಿ ಡಿಸೆಂಬರ್ 10 ರಂದು ಬಿ. ಸಿ ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರಥಮ ತುಳು ಸಾಹಿತ್ಯ ಸಮ್ಮೇಳನವನ್ನು ನಡೆಸಲು ತೀರ್ಮಾನಿಸಲಾಗಿದೆ.
ಬಿ. ಸಿ ರೋಡಿನ ಶ್ರೀ ರಕ್ತೇಶ್ವರಿ ದೇವಿ ಸಭಾಂಗಣದಲ್ಲಿ ತುಳು ಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು.
ಅಕಾಡೆಮಿಯ ನಡೆ ಜನರ ಕಡೆಗೆ ಎಂಬ ಅಭಿಯಾನದ ಭಾಗವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಪ್ರಥಮವಾಗಿ ಬಂಟ್ವಾಳ ತಾಲೂಕಿನಲ್ಲಿ ತುಳು ಸಾಹಿತ್ಯ ಸಮ್ಮೇಳನವನ್ನು ತುಳು ಕೂಟದ ಸಹಭಾಗಿತ್ವದೊಂದಿಗೆ, ಎಲ್ಲಾ ತುಳು ಬಾಂಧವರ ಸಹಕಾರದೊಂದಿಗೆ ನಡೆಸಲು ಉದ್ದೇಶಿಸಿದೆ. ಇದನ್ನು ಮಾದರಿಯಾಗಿ ಸಂಘಟಿಸುವಲ್ಲಿ ನಾವೆಲ್ಲರೂ ವಿಶೇಶ ಮುತುವರ್ಜಿ ವಹಿಸಬೇಕಾಗಿದೆ ಎಂದು ಸುದರ್ಶನ್ ಜೈನ್ ಹೇಳಿದರು. ತುಳುಕೂಟದ ಪ್ರಧಾನ ಕಾರ್ಯದರ್ಶಿ ಡಿ. ಎಂ. ಕುಲಾಲ್ ಮಾತನಾಡಿ ತಾಲೂಕಿನಲ್ಲಿರುವ ಎಲ್ಲಾ ಪರ ಸಂಘಟಕರು, ಸಾಹಿತಿಗಳು, ಬರಹಗಾರರು ಹಾಗೂ ಜಾನಪದ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಲ್ಲಿ ಅವಕಾಶ ನೀಡುವಂತೆ ಸಮ್ಮೇಳನ ರೂಪುಗೊಳ್ಳ ಬೇಕಾಗಿದೆ ಎಂದರು.
ಸಮ್ಮೇಳನದಲ್ಲಿ ಮೆರವಣಿಗೆ, ವಸ್ತು ಪ್ರದರ್ಶನ, ಕವಿಗೋಷ್ಥಿ, ಚರ್ಚಾ ಕೂಟ ಹಾಗೂ ಸ್ಪರ್ಧೆಗಳನ್ನು ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಗೋಪಾಲ ಅಂಚನ್, ವಿಜಯ ಶೆಟ್ಟಿ ಸಾಲೆತ್ತೂರು, ಸುಧಾ ನಾಗೇಶ್, ಬ್ಯಾರಿ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ಎಂ. ಅಬ್ಬಾಸ್ ಆಲಿ, ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಕೆ. ಮೋಹನ್ ರಾವ್, ತುಳುಕೂಟದ ಪ್ರಮುಖರಾದ ಕೈಯ್ಯೂರು ನಾರಾಯಣ ಭಟ್, ಬಿ. ಕೆ. ಇದಿನಬ್ಬ, ದೇವಿಪ್ರಸಾದ್ ಶೆಟ್ಟಿ ಪಾಲ್ತಾಜೆ, ಮಹಾಬಲ ರೈ ಬರ್ಕೆ ಗುತ್ತು, ಮಂಜು ವಿಟ್ಲ, ಮೋಹನ್ದಾಸ್ ಕೊಟ್ಟಾರಿ, ಮಚ್ಚೇಂದ್ರ ಸಾಲ್ಯಾನ್, ರಮೇಶ್ ಶೆಟ್ಟಿ ಮಲಲೋಡಿ, ಟಿ. ಶೇಷಪ್ಪ ಮಾಸ್ಟರ್, ಸೀತಾರಾಮ ಶೆಟ್ಟಿ ಕಾಂತಾಡಿ, ಗಂಗಾಧರ ಭಟ್ ಕೊಳಕೆ, ರಮಾ ಎಸ್. ಭಂಡಾರಿ, ದಾಮೋದರ ಮಾಸ್ಟರ್ ಏರ್ಯ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು. ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್ ಸ್ವಾಗತಿಸಿದರು. ರಂಗ ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಸಿ ಪೆರ್ನೆ ವಂದಿಸಿದರು.