ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ಅವರು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ, ಕಳ್ಳಿಗೆ-ನೆತ್ರಕೆರೆಯಲ್ಲಿ ನಡೆದ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆ ಸಾಮಾಜಿಕ ಸಾಮರಸ್ಯ, ನಂಬಿಕೆ, ಸೇವಾ ಮನೋಭಾವ, ಶಿಸ್ತು ಮತ್ತು ಸಂಯಮ, ಕ್ರಿಯಾಶೀಲ ಬದುಕು ಇವು ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪ್ರೇರಣೆ ನೀಡುತ್ತದೆ. ನಾವೆಲ್ಲರೂ ಒಂದೇ ಎನ್ನುವ ಮನೋಭಾವ ಬೆಳೆಸುವ ಜತೆ ಕೀಳಾರಿಮೆಯನ್ನು ಹೋಗಲಾಡಿಸುತ್ತದೆ. ನಂಬಿಕೆ, ವಿಶ್ವಾಸ ಏಕತೆಯ ಭಾವನೆಗಳು ಹೇಳಿಕೊಟ್ಟು ಬರುವುದಿಲ್ಲ. ಪ್ರೀತಿ ವಿಶ್ವಾಸದಿಂದ ಇಡೀ ಜಗತ್ತನ್ನು ಗಲ್ಲಬಹುದು. ಜಾತಿ-ಧರ್ಮ, ಮೇಲು-ಕೀಳು ಎನ್ನುವ ಭೇದಭಾವವಿಲ್ಲದೆ ಎಲ್ಲರೂ ಒಂದೇ ಸೂರಿನಡಿಯಲ್ಲಿ ಒಟ್ಟಾಗಿ ಜೀವಿಸುವ ಭಾವೈಕ್ಯತೆಯ ಗುಣವನ್ನು ಬೆಳೆಸುವುದಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಜಿ.ಪಂ. ಸದಸ್ಯ ತುಂಬೆ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, ಭಾವನಾತ್ಮಕ ಸಂಬಂಧ, ಪ್ರೀತಿಯ ಬೆಸುಗೆ, ಅಗಲಿಕೆಯ ನೋವು ಇವೆಲ್ಲಾದರ ಜತೆ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವುದಕ್ಕೆ ಎನ್‌ಎಸ್‌ಎಸ್ ಉತ್ತಮ ವೇದಿಕೆ ಎಂದರು.
ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಕೇವಲ ಮಣ್ಣು ಹೋರುವ ಕೆಲಸ ಮಾತ್ರವಲ್ಲ ಅದು ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಗೆ ಉತ್ತೇಜನ ನೀಡುತ್ತದೆ. ವಿದ್ಯಾರ್ಥಿಯಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ವೇದಿಕೆಯನ್ನು ಒದಗಿಸಿಕೊಡುತ್ತದೆ. ದೇಹ ಮನಸ್ಸು ಸ್ವಚ್ಚತೆ ವ್ಯಕ್ತಿಯ ಮಾನಸಿಕ ಸ್ಥೈರ್ಯ ತುಂಬಿ ಹೊಂದಾಣಿಕೆ ಮನೋಭಾವವನ್ನು ಬೆಳೆಸುತ್ತದೆ. ನಾಯಕತ್ವದ ಗುಣ, ಏಕತೆ, ರಾಷ್ಟ್ರೀಯ ಭಾವೈಕ್ಯತೆ ಮುಂತಾದ ಜೀವನ ಮೌಲ್ಯಗಳು ರಾಷ್ಟ್ರೀಯ ಸೇವಾ ಯೋಜನೆಯಂತಹ ಶಿಬಿರದಲ್ಲಿ ಪಾಲ್ಗೊಂಡವರಲ್ಲಿ ಹೆಚ್ಚಾಗಿ ಇರುತ್ತದೆ ಎಂದು ಹೇಳಿದರು.
ಎಸ್.ವಿ.ಎಸ್. ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಯಾವುದೇ ಭೇದಭಾವವಿಲ್ಲದೆ ಒಂದೇ ಮನಸ್ಸಿನಿಂದ ಭಾಗವಹಿಸಿ ಶಿಬಿರದಲ್ಲಿ ಸಿಗುವ ಉನ್ನತ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ನಾಯಕರಾಗುವುದಕ್ಕೆ ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾ.ಪಂ. ಸದಸ್ಯ ಶಿವಪ್ರಸಾದ್ ಕನಪಾಡಿ, ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಬಿ. ಸುರೇಶ್ ಭಂಡಾರಿ ಅರ್ಬಿ, ನವೋದಯ ಮಿತ್ರ ಕಲಾ ವೃಂದದ ಸಂಚಾಲಕ ದಾಮೋದರ್ ನೆತ್ರಕೆರೆ, ಬಂಟ್ವಾಳ ವಿಜಯಾ ಬ್ಯಾಂಕ್ ಮ್ಯಾನೇಜರ್ ಬೇಬಿ ಕುಂದರ್, ಪ್ರಗತಿಪರ ಕೃಷಿಕ ಜ್ಯೋತೀಂದ್ರ ಪ್ರಸಾದ್ ಶೆಟ್ಟಿ ಮುಂಡಾಜೆಗುತ್ತು, ಬಿ.ಸಿ.ರೋಡಿನ ನ್ಯಾಯವಾದಿ ರಮೇಶ್ ಉಪಾಧ್ಯಾಯ ನೆತ್ರಕೆರೆ, ನೇತ್ರಾವತಿ ಮಾತೃ ಮಂಡಳಿ ಸಂಚಾಲಕ ಲಲಿತಾ ಸುಂದರ್, ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ, ಕಳ್ಳಿಗೆ-ನೆತ್ರಕೆರೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಭಾಸ್ಕರ ಎನ್, ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ, ಕಳ್ಳಿಗೆ-ನೆತ್ರಕೆರೆಯ ಸಹಶಿಕ್ಷಕಿ ಲೀನಾ ಡಿ’ಸೋಜ, ಎನ್.ಎಸ್.ಎಸ್. ಘಟಕ ನಾಯಕರಾದ ಭರತ್ ಮತ್ತು ಅನುಜ್ಞಾ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಸಹಶಿಬಿರಾಧಿಕಾರಿ ನಮಿತಾ ಬಿ. ಎಲ್, ದೀಪಿಕಾಪ್ರಿಯಾ, ವಿಜೇತ ನಾಯಕ್, ದಿವ್ಯಲಕ್ಷ್ಮಿ , ಪ್ರವೀಣ ಮತ್ತು ಕವಿತಾ ಮತ್ತಿತರರು ಸಹಕರಿಸಿದರು.
ಎನ್.ಎಸ್.ಎಸ್. ಶಿಬಿರಾರ್ಥಿಗಳು ಪ್ರಾರ್ಥಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾಧಿಕಾರಿ ಚೇತನ್ ಮುಂಡಾಜೆ ಸ್ವಾಗತಿಸಿ, ಸಹಶಿಬಿರಾಧಿಕಾರಿ ಪ್ರದೀಪ್ ಪೂಜಾರಿ ವಂದಿಸಿದರು. ಸಹಶಿಬಿರಾಧಿಕಾರಿ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.