• ಡಾ.ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

 

ನಮ್ಮ ದೇಹವು  70 ಶೇಕಡಾ ನೀರಿನಿಂದ ಕೂಡಿದೆ. ಆದುದರಿಂದ ದೇಹದ ಸಮತೋಲನವನ್ನು ಕಾಪಾಡಲು ನೀರು ಅತೀ ಮುಖ್ಯ. ಪ್ರತಿಯೊಬ್ಬರೂ ಸಾಧಾರಣ 1 ರಿಂದ 2 ಲೀಟರಿನಷ್ಟು ನೀರನ್ನು ಪ್ರತಿನಿತ್ಯ ಸೇವಿಸಬೇಕು.ಇದರಿಂದ ಹಲವಾರು ವ್ಯಾಧಿಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.

ತಣ್ಣೀರನ್ನು ಸೇವಿಸುವ ಮೊದಲು ಅದರ ಶುದ್ಧತೆ ಹಾಗು ಮೂಲವನ್ನು ತಿಳಿಯುವುದು ಉತ್ತಮ. ಕಲುಷಿತ ಹಾಗು ಕ್ರಿಮಿಯುಕ್ತ ನೀರನ್ನು  ಕುಡಿದರೆ ನಾನಾ ತರದ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ.

ಜಾಹೀರಾತು

ಆಭ್ಯಂತರ ಉಪಯೋಗಗಳು-

  1. ಬಿಸಿಲಿನಲ್ಲಿ ಕೆಲಸ ಮಾಡಿ ಮನೆಗೆ ಬಂದಾಗ ನೀರನ್ನು ಕುಡಿದರೆ ಬಾಯಾರಿಕೆ ನೀಗುವುದರ ಜೊತೆಗೆ ಆಯಾಸ ಕಡಿಮೆಯಾಗುತ್ತದೆ ಮತ್ತು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ.
  2. ಊಟ ಮಾಡುವಾಗ ಮಧ್ಯದಲ್ಲಿ ಅವಾಗಾವಾಗ ನೀರನ್ನು ಕುಡಿಯಬೇಕು. ಇದರಿಂದ ಆಹಾರದ ಜೀರ್ಣ ಸರಿಯಾಗಿ ಆಗುತ್ತದೆ. ಊಟದ ಅಂತ್ಯದಲ್ಲಿ ನೀರು ಕುಡಿಯಬಾರದು.ಇದು ವಿಷಕ್ಕೆ ಸಮಾನ.
  3. ನಿಯಮಿತವಾಗಿ ನೀರನ್ನು ಕುಡಿಯುವುದರಿಂದ ಚರ್ಮದ ಕಾಂತಿ ಅಧಿಕವಾಗುತ್ತದೆ ಮತ್ತು ಚರ್ಮ ಸುಕ್ಕು ಕಟ್ಟುವುದನ್ನು ತಡೆಗಟ್ಟುತ್ತದೆ.
  4. ನೀರಿನ ಸರಿಯಾದ ಬಳಕೆಯಿಂದ ನಿದ್ರಾಹೀನತೆಯನ್ನು ಹೋಗಲಾಡಿಸಬಹುದು.
  5. ಭೇದಿಯ ಸಮಸ್ಯೆ ಇದ್ದಾಗ ಶರೀರದಲ್ಲಿ ನೀರಿನ ಸಮತೋಲನವನ್ನು ಕಾಪಾಡಲು ಯಥೇಷ್ಟವಾಗಿ ನೀರನ್ನು ಕುಡಿಯಬೇಕು.
  6. ಎಸಿಡಿಟಿಯಿಂದಾಗಿ ಹೊಟ್ಟೆ ಹಾಗು ಎದೆಯಲ್ಲಿ ಉರಿ ಇದ್ದಾಗ ನೀರನ್ನು ಯಥೇಷ್ಟವಾಗಿ ಕುಡಿಯಬೇಕು.
  7. ನೀರನ್ನು ಕುಡಿಯುವುದರಿಂದ ಮೂತ್ರಕೋಶದಲ್ಲಿ ಕಲ್ಲು ಉತ್ಪತ್ತಿ ಆಗುವುದನ್ನು ತಡೆಗಟ್ಟಬಹುದು ಮತ್ತು ಕಲ್ಲು ಇದ್ದಲ್ಲಿ ಹೋಗಲಾಡಿಸಬಹುದು.
  8. ಉರಿ ಮೂತ್ರದ ಸಂದರ್ಭದಲ್ಲಿ ಬಹುವಾಗಿ ನೀರನ್ನು ಕುಡಿಯಬೇಕು.
  9. ಮುಟ್ಟಿನ ಸಮಯದಲ್ಲಿ ನೀರನ್ನು ಧಾರಾಳವಾಗಿ ಕುಡಿದರೆ ಹೊಟ್ಟೆನೋವು,ಸೊಂಟ ನೋವು ಹಾಗು ಕೈ ಕಾಲು ಸೆಳೆತ ಕಡಿಮೆಯಾಗುತ್ತದೆ.
  10. ಮೂಗು ಕಟ್ಟುವುದು, ಯಾವಾಗಲೂ ಶೀತ ಆಗುವುದು ಇದ್ದಲ್ಲಿ ಒಂದು ಮೂಗಿಗೆ ನೀರು ಹಾಕಿ ಇನ್ನೊಂದರಲ್ಲಿ ತೆಗೆಯಬೇಕು (ಜಲ ನೇತಿ )
  11. ಪ್ರತಿದಿನ ಬೆಳಗ್ಗೆ ನೀರನ್ನು ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
  12. ವಯಸ್ಸಾದವರಲ್ಲಿ ಮಲಬದ್ಧತೆ ಇದ್ದಲ್ಲಿ ನೀರನ್ನು ಪೈಪಿನಲ್ಲಿ  ಗುದದ್ವಾರದ ಮೂಲಕ ಕರುಳಿಗೆ ಬಿಡಬೇಕು (ವಾಟರ್ ಎನಿಮಾ )
  13. ನೀರನ್ನು ಸೇವಿಸುವುದರಿಂದ ಅತಿಯಾದ ಬೊಜ್ಜು ನಿವಾರಣೆಯಾಗುತ್ತದೆ ಮತ್ತು ಶರೀರದ ತೂಕವನ್ನು ಸಮತೋಲನದಲ್ಲಿ ಇಡುತ್ತದೆ.
  14. ನೀರು ದೇಹದ ಮಾಂಸಖಂಡಗಳು ದೃಢವಾಗಿರಲು ಸಹಕರಿಸುತ್ತದೆ ಮತ್ತು ಅವುಗಳ ಸೆಳೆತ ಹಾಗು ನೋವನ್ನು ನಿವಾರಿಸುತ್ತದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.