ವಿಶೇಷ ವರದಿ

ಇಲ್ಲಿ ಕಸ ಎಸೆಯದೆ 100 ದಿನಗಳು ದಾಟಿದವು!

ಹೇಗಿದ್ದ ಕೈಕುಂಜ ಹೇಗಾಯ್ತು ಗೊತ್ತಾ?

ಜಾಹೀರಾತು

ಠಾಕುಠೀಕಾಗಿ ಗರಿಗರಿ ಇಸ್ತ್ರಿ ಹಾಕಿದ ದಿರಿಸು ತೊಟ್ಟು ಕಾರಿನ ವಿಂಡೋ ಕೆಳಗೆ ಮಾಡಿ ರೊಯ್ಯನೆ ಕಸ ಎಸೆಯುತ್ತಿದ್ದ ಜನರೀಗ ಇಲ್ಲಿ ಕಸ ಎಸೆಯುವುದೇ ಇಲ್ಲ.

ಯಾರಿಗೆ ಯಾರು ಪ್ರೇರಣೆ ನೀಡಿದರೋ, ಬಂಟ್ವಾಳ ಪುರಸಭೆ ಸ್ವಚ್ಛ ಭಾರತ ಯೋಜನೆಯಡಿ ಬಕೆಟ್ ವಿತರಣೆ ಕಾರ್ಯಕ್ರಮವನ್ನು ಕೈಕುಂಜೆಯಲ್ಲಿ ಕೆಲ ತಿಂಗಳ ಹಿಂದೆ ಮುಂಜಾನೆ ಹಮ್ಮಿಕೊಂಡಿತ್ತು. ಇದರ ಮುನ್ನಾ ದಿನ ಕಸ ಎಸೆಯುವ ಕುಖ್ಯಾತಿ ಪಡೆದ ಜಾಗವನ್ನುಜ ಕ್ಲೀನ್ ಮಾಡಿಸಿ, ಅಲ್ಲೊಂದು ಬೋರ್ಡ್ ಹಾಕಲಾಯಿತು. ಇಲ್ಲಿ ಕಸ ಎಸೆಯಬೇಡಿ ಎಂಬ ಸೂಚನೆ ಅದರಲ್ಲಿತ್ತು.

ಜಾಹೀರಾತು

ಅಲ್ಲೇ ಬಕೆಟ್ ವಿತರಣೆ ಕಾರ್ಯಕ್ರಮ ನಡೆಯಿತು. ಮರುದಿನದಿಂದ ಪುರಸಭೆಯ ಕಸ ವಿಲೇವಾರಿ ವಾಹನಗಳು ಸರಿಯಾದ ಸಮಯಕ್ಕೆ ಬಂದು ಕಸ ಪಡೆದುಕೊಂಡು ಹೋದರೆ, ಸಾರ್ವಜನಿಕರೂ ಅದಕ್ಕೆ ಸ್ಪಂದಿಸತೊಡಗಿದರು. ಈ ದಿಢೀರ್ ಬದಲಾವಣೆಯ ಸಂದರ್ಭವೇ ಕಂಬ ನೆಟ್ಟ ಜಾಗದ ಅಕ್ಕಪಕ್ಕ ವಾಹನಗಳು ಪಾರ್ಕ್ ಮಾಡಲಾರಂಭಿಸಿದವು. ಕಸ ಎಸೆಯುವ ಕೈಗಳು ಇವನ್ನು ಕಂಡೊಡನೆ ಹಿಂದಕ್ಕೆ ಬಂದವು.

ಅಲ್ಲೇ ಮೂತ್ರವಿಸರ್ಜನೆ ಮಾಡುತ್ತಿದ್ದವರಿಗೂ ಈಗ ನಾಚಿಕೆಯಾಗುತ್ತಿದೆ. ಕಸದ ರಾಶಿ ಬೀಳುತ್ತಿರುವ ಸುಶಿಕ್ಷಿತರ ಬಡಾವಣೆ ಎಂಬ ಕುಖ್ಯಾತಿ ಪಡೆದ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಕೈಕುಂಜವೀಗ ಸ್ವಚ್ಛತೆಯ ಪಾಠ ಹೇಳುತ್ತಿದೆ. ಇಡೀ ಬಂಟ್ವಾಳ ಪೇಟೆಗೆ ಮಾದರಿಯೂ ಆಗಿದೆ. ಬಂಟ್ವಾಳದ ಮಟ್ಟಿಗೆ ಕೈಕುಂಜ ಸ್ವಚ್ಛ ಪ್ರದೇಶ.

ಜಾಹೀರಾತು

ಈ ಬದಲಾವಣೆಯಾಗಿ ಕೆಲವೇ ತಿಂಗಳುಗಳು ಆದವು. ಇಲ್ಲೊಂದು ನಾಗರಿಕ ಸಮಿತಿ ಇದೆ. ಯುವಕರ ಸಂಘವೂ ಇದೆ. ಆದರೆ ಯಾರ ಮನವಿಗೂ ಬಗ್ಗದೆ, ಜಗ್ಗದೆ ಕೈಕುಂಜೆ ಪೂರ್ವ ಬಡಾವಣೆಗೆ ತಿರುಗುವ ರೈಲ್ವೆ ಸ್ಟೇಶನ್ ಗೆ ತೆರಳುವ ಜಾಗದಲ್ಲಿ ಬಿ.ಸಿ.ರೋಡಿನ ನಾನಾ ಪ್ರದೇಶಗಳಿಂದ ಬಂದು ಕಸ ಎಸೆಯುವವರು ಇದ್ದರು.

ಹೊರಗಿನಿಂದ ಬಂದು ಕಸ ಎಸೆದರೂ ಸುಶಿಕ್ಷಿತರೇ ಹೆಚ್ಚಾಗಿ ವಾಸಿಸುವ ಈ ಬಡಾವಣೆಯ ಜನರ ಮೇಲೆಯೇ ಆಪಾದನೆಗಳು ಬಂದವು. ಕಣ್ಣೆದುರೇ ಕಸ ಎಸೆಯುವವರನ್ನು ಸ್ಥಳೀಯ ಕೈಕುಂಜ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಕರಜೋಡಿಸಿ, ಎಸೆಯಬೇಡಿ ಎಂದು ವಿನಂತಿಸಿದ್ದೂ ಉಂಟು. ಆ ಸಂದರ್ಭ ಬೇರೆ ಎಲ್ಲಿ ಎಸೆಯಲಿ, ಕಸ ಪಡೆಯುವ ವಾಹನಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂಬ ಉತ್ತರಗಳೂ ಲಭಿಸುತ್ತಿದ್ದವು. ಒನ್ ಫೈನ್ ಡೇ ಇವೆಲ್ಲದಕ್ಕೂ ಫುಲ್ ಸ್ಟಾಪ್ ಹಾಕಲಾಯಿತು. ಜನರ ಇಚ್ಛಾಶಕ್ತಿಯೇ ಇದಕ್ಕೆ ಪ್ರೇರಣೆ ಎನ್ನುತ್ತಾರೆ ಸ್ಥಳೀಯ ಪುರಸಭಾ ಸದಸ್ಯೆ ಸುಗುಣ ಕಿಣಿ.

ಕಸ ನೋಡಿಯೇ ನಾಯಿಗಳು ಬರುತ್ತವೆ:

ಜಾಹೀರಾತು

ಮೊಡಂಕಾಪು, ಲಯನ್ಸ್ ಸೇವಾ ಮಂದಿರ, ಬಂಟ್ವಾಳ ಪೇಟೆಯ ನಾನಾ ಭಾಗಗಳು ಹೀಗೆ ಪುರಸಭೆ ವ್ಯಾಪ್ತಿಯ ಹಲವೆಡೆ ನಾಯಿ ಕಾಟ ಜೋರಾಗಿದೆ. ಇದಕ್ಕೆ ಮೂಲ ಕಾರಣ ಕಂಡಕಂಡಲ್ಲಿ ಕಸದ ರಾಶಿ. ಹಾಗಾದರೆ ಕಸ ವಿಲೇವಾರಿ ವಾಹನಗಳು ಮನೆ ಬಾಗಿಲಿಗೆ ಬರುವುದಿಲ್ಲವೇ ಅಥವಾ ಜನರೇ ಕೊಡುವುದಿಲ್ಲವೇ, ಈ ನಿಟ್ಟಿನಲ್ಲಿ ಪುರಸಭೆ ಸೀರಿಯಸ್ ಆಗಿ ಕೆಲಸ ಮಾಡಬೇಕು.

ಕೈಕುಂಜೆಯಲ್ಲಿ ಈ ಹಿಂದೆ ಇದೇ ಜಾಗದಲ್ಲಿ ಕಸದ ರಾಶಿ ಇದ್ದಾಗ ನಾಯಿಗಳ ಕಾಟವೂ ಜಾಸ್ತಿ ಇತ್ತು. ಈಗ ಕಡಿಮೆಯಾಗಿದೆ.

ಸ್ವಚ್ಛತೆಗೆ ಸಹಕರಿಸಿ:

ಜಾಹೀರಾತು

ಆಡಳಿತ ಕಟ್ಟುನಿಟ್ಟಾಗಿದ್ದರೆ, ಜನರೂ ಸ್ಪಂದಿಸುತ್ತಾರೆ ಎಂಬುದಕ್ಕೆ ಕೈಕುಂಜ ಪರಿಸರವೇ ಮಾದರಿ. ಕೆಲ ದಿನಗಳ ಹಿಂದೆಯಷ್ಟೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್ ನೇತೃತ್ವದಲ್ಲಿ ಬಂಟ್ವಾಳವಿಡೀ ಪರಿಶೀಲನೆ ನಡೆಸಿ ಕಸ ಎಸೆಯುವ ವ್ಯವಸ್ಥೆ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿತ್ತು. ಅದೀಗ ಎಷ್ಟು ಪಾಲನೆಯಾಗಲು ಸಾಧ್ಯ ಎಂಬುದರ ಪರಾಮರ್ಶೆಯೂ ನಡೆಯಬೇಕಿದೆ. ಬಿ.ಸಿ.ರೋಡ್ ಬಸ್ ನಿಲ್ದಾಣ ಹಿಂಭಾಗವನ್ನೇ ನೋಡಿ, ಇಲ್ಲಿ ಕಸ ಎಸೆಯಬಾರದು ಎಂದು ಬೋರ್ಡ್ ಹಾಕಿದರೂ, ಸಿಸಿ ಟಿವಿ ಕ್ಯಾಮರಾ ಇದೆ ಎಂದರೂ ಕ್ಯಾರೆನ್ನದೆ ಕಸದ ಕಟ್ಟು ಇಟ್ಟು ಹೋಗುವ ಎಜುಕೇಟೆಡ್ ಜನರ ಮನಪರಿವರ್ತನೆ ಆಗಬೇಕಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತೀಚೆಗೆ ನಡೆಸಿದ ಪರಿಶೀಲನೆ ಜನರಲ್ಲಿ ಹೊಸ ಭರವಸೆಯನ್ನಂತೂ ಮೂಡಿಸಿದೆ. ಇನ್ನು ಮುಂದಿನ ಹೆಜ್ಜೆಗೆ ಬಂಟ್ವಾಳದ ಜನತೆ, ಪುರಸಭೆ ಜತೆಜತೆಯಾಗಿ ಸಾಗಬೇಕಿದೆ.

ಕಸಪೊರಕೆ ಹಿಡಿದುಕೊಂಡು ಎಲ್ಲರೂ ಒಂದೇ ಜಾಗದಲ್ಲಿ ಗುಡಿಸಿ, ಮರುದಿನ ಪತ್ರಿಕೆಗಳಲ್ಲಿ ಫೊಟೋ ಪ್ರಕಟವಾದರೆ ಸ್ವಚ್ಛತೆ ಸಾಕಾರವಾಗುವುದಿಲ್ಲ. ಇದೊಂದು ನಿರಂತರ ಪ್ರಕ್ರಿಯೆ. ನಿಜವಾದ ಕಾಳಜಿ ಇರುವವರನ್ನು ಒಗ್ಗೂಡಿಸಿ ಮುನ್ನಡೆಯಬೇಕಾದದ್ದು ಜನರ ಆರೋಗ್ಯದ ದೃಷ್ಟಿಯಿಂದ ತುರ್ತು ಅಗತ್ಯ. ಬಂಟ್ವಾಳನ್ಯೂಸ್ ಸ್ವಚ್ಛ ಬಂಟ್ವಾಳ ಕಲ್ಪನೆಗೆ ಸದಾ ಪ್ರೋತ್ಸಾಹ ನೀಡುತ್ತದೆ. ನೀವೂ ನೀಡುತ್ತೀರಲ್ವ?

 

ಜಾಹೀರಾತು

 

 

 

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.