ಕವರ್ ಸ್ಟೋರಿ

ನದಿ ತೀರದ ವಿಹಾರಕ್ಕೊಂದು ಸುಂದರ ಪಾರ್ಕ್

ಬಂಟ್ವಾಳ ಐಬಿ ಬಳಿ ತಲೆ ಎತ್ತಿ ನಿಂತಿದೆ ಟ್ರೀಪಾರ್ಕ್ ಚಿತ್ರ: ಕಿಶೋರ್ ಪೆರಾಜೆ

  • ಹರೀಶ ಮಾಂಬಾಡಿ

www.bantwalnews.com

ಪಕ್ಕದಲ್ಲೇ ನೇತ್ರಾವತಿ, ಅಲ್ಲೇ ನಡುಗಡ್ಡೆಯಲ್ಲಿ ಹಲವು ಹಕ್ಕಿಗಳ ಆವಾಸ. ಫೊಟೋಗ್ರಫಿ ಮಾಡುವವರು, ತಣ್ಣನೆಯ ವಾತಾವರಣ ಆಸ್ವಾದಿಸುವವರು, ಬೆಳಗ್ಗಿನ ಸೌಂದರ್ಯ ಸೇವಿಸುವವರಿಗೆ ಇದು ಆಪ್ಯಾಯಮಾನ. ಬಂಟ್ವಾಳ ಪ್ರವಾಸಿ ಬಂಗ್ಲೆ ಪಕ್ಕದಲ್ಲೇ ನಿರ್ಮಾಣವಾಗಿದೆ ಮರಗಳ ಉದ್ಯಾನವನ.

ಕಲ್ಲಡ್ಕ ಸಮೀಪ ವೀರಕಂಭದಲ್ಲಿ ಅರಣ್ಯ ಇಲಾಖೆ ಸಿರಿಚಂದನವನ ನಿರ್ಮಿಸಿ ಗಮನ ಸೆಳೆದಿದ್ದ ಅರಣ್ಯ ಇಲಾಖೆ ಬಂಟ್ವಾಳ ನೇತ್ರಾವತಿ ಕಿನಾರೆಯಲ್ಲೇ ಸುಮಾರು ಮೂರು ಎಕರೆ ಜಾಗದಲ್ಲಿ ಟ್ರೀ ಪಾರ್ಕ್ ನಿರ್ಮಿಸಿದೆ. ಸಣ್ಣ ಪುಟ್ಟ ಕೆಲಸಗಳಷ್ಟೇ ಬಾಕಿ ಉಳಿದಿದ್ದು, ಬಂಟ್ವಾಳದ ಮಿನಿ ವಿಧಾನಸೌಧ, ಮೆಸ್ಕಾಂ ಕಚೇರಿ, ಪ್ರವಾಸಿ ಬಂಗ್ಲೆ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಉದ್ಘಾಟನೆ ಸಂದರ್ಭ ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.

ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿ ಮೂಗು ಮುಚ್ಚುವ ಪರಿಸ್ಥಿತಿಯನ್ನು ಬದಲಾಯಿಸಿ ಜೋಡುಮಾರ್ಗ ಉದ್ಯಾನವನ ನಿರ್ಮಿಸಲಾಯಿತು. ಇದೀಗ ಸಾಗುವಾನಿ ಮರಗಳ ಮಧ್ಯೆ ಕಾಡಿನಂತಿದ್ದ ಪರಿಸರವನ್ನೆಲ್ಲ ಸಮತಟ್ಟುಗೊಳಿಸಿ ಮರಗಳ ಉದ್ಯಾನವನವನ್ನು ನಿರ್ಮಿಸಲಾಗುತ್ತಿದೆ. ನೇತ್ರಾವತಿ ನದಿ ಕಿನಾರೆಯಲ್ಲಿ ಈ ಟ್ರೀ ಪಾರ್ಕ್ ಇರುವ ಕಾರಣ ಇದನ್ನು ಪ್ರವಾಸಿ ಕೇಂದ್ರವಾಗಿಯೂ ಅಭಿವೃದ್ಧಿಪಡಿಸಲು ಸಾಧ್ಯ.

ಏನೇನಿದೆ:

ಟ್ರೀ ಪಾರ್ಕ್ ಮಧ್ಯೆ ಪುಟ್ಟ ಮನೆಯೊಂದನ್ನು ನಿರ್ಮಿಸಲಾಗಿದೆ. ಅದರ ಸುತ್ತಲೂ ಬೆಂಚುಗಳನ್ನು ಅಳವಡಿಸಲಾಗಿದ್ದು, ಅಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಪಾರ್ಕ್‌ನ ಹೊರ ಮತ್ತು ಒಳಭಾಗದಲ್ಲಿ ಕಲ್ಲು ಬೆಂಚುಗಳಿವೆ. ಮಕ್ಕಳಿಗಾಗಿ ಪ್ರತ್ಯೇಕ ವ್ಯವಸ್ಥೆ ಇದೆ. ಆಟಕ್ಕೆ ಬೇಕಾದ ಜಾರುಬಂಡಿ, ಜೋಕಾಲಿಗಳನ್ನು ಅಳವಡಿಸಲಾಗುತ್ತಿದೆ.

ಇಂಟರ್ ಲಾಕ್ ಹಾಕಿದ ವಾಕ್‌ಪಾಥ್ ನಡೆಯುವವರನ್ನು ಮುದಗೊಳಿಸುತ್ತದೆ. ವಾಕಿಂಗ್ ಮಾಡಲೂ ವ್ಯವಸ್ಥೆ ಇದೆ. ನದಿ ಮತ್ತು ದಡದ ಮಧ್ಯೆ ಗಟ್ಟಿಯಾದ ಬೇಲಿ ಹಾಕಲಾಗಿದೆ. ಯಾವುದೇ ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಲಾಭವೇನು:

ಟ್ರೀ ಪಾರ್ಕ್‌ನಲ್ಲಿ ಸುಮಾರು 13 ರೀತಿಯ ಔಷದೀಯ ಸಸ್ಯಗಳನ್ನು ಬೆಳೆಸಲಾಗುವುದು. ಇವುಗಳ ಮಹತ್ವದ ಅರಿವು ಇಲ್ಲಿಗೆ ಬರುವವರಿಗೆ ಆಗಬೇಕು ಎನ್ನುವ ಉದ್ದೇಶ ಇದರಲ್ಲಡಗಿದೆ.

ಈ ಟ್ರೀ ಪಾರ್ಕ್ ಸಂಪೂರ್ಣವಾಗಿ ಸಾರ್ವಜನಿಕರ ಅನುಕೂಲಕ್ಕೆಂದೇ ನಿರ್ಮಿಸಲಾಗಿದೆ. ಈಗ ಅಂತಿಮ ಸ್ಪರ್ಶ ನೀಡಲಾಗುತ್ತಿರುವ ಕಾರಣ ಪ್ರವೇಶವಿಲ್ಲ. ಉದ್ಘಾಟನೆ ಬಳಿಕ ಇಲ್ಲಿ ಶುಲ್ಕ ವಿಸುವ ಕುರಿತು ಆಡಳಿತ ಕೈಗೊಳ್ಳುವ ತೀರ್ಮಾನದಂತೆ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗುವುದು. ಕೇವಲ ವಿಹಾರಕ್ಕಷ್ಟೇ ಅಲ್ಲ, ಗಿಡ ಮರಗಳ ಅರಿವೂ ಉಂಟಾಗುವಂತೆ ಮಾಡುವುದು ಇದರ ಉದ್ದೇಶ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಬಿ.ಸುರೇಶ್.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts