ಬಂಟ್ವಾಳ

ಕವಿ ಗೋಪಾಲಕೃಷ್ಣ ಅಡಿಗರನ್ನು ಸರಕಾರ ನೆನಪಿಸುವ ಕಾರ್ಯ ಅಗತ್ಯ: ಡಾ. ನರಹಳ್ಳಿ

ಈ ಶತಮಾನದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಮೊಗೇರಿ ಗೋಪಾಲಕೃಷ್ಣ ಅಡಿಗರನ್ನು ಸರಕಾರ ನೆನಪಿಸುವ ಕೆಲಸ ಮಾಡಬೇಕಾಗಿದೆ. ಅಡಿಗರ ಜನ್ಮಶತಮಾನೋತ್ಸವವನ್ನು ನಾಡು ವಿಜೃಂಭಣೆಯಿಂದ ಆಚರಿಸಬೇಕು. ಡಿಸೆಂಬರ್ ನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ರಾಷ್ಟ್ರೀಯ ವಿಚಾರಸಂಕಿರಣವನ್ನು ಅಡಿಗರ ಕುರಿತು ನಡೆಸುವ ಯೋಜನೆ ಇದೆ ಎಂದು ಕನ್ನಡ ಭಾಷಾ ಸಲಹಾ ಮಂಡಳಿ ಸಂಚಾಲಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

ಜಾಹೀರಾತು

ಬಂಟ್ವಾಳದ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಭಾನುವಾರ ಬಂಟ್ವಾಳ ಜೋಡುಮಾರ್ಗದ ಮೊಗೇರಿ ಗೋಪಾಲಕೃಷ್ಣ ಅಡಿಗ ಶತಮಾನೋತ್ಸವ ಸಮಿತಿ ವತಿಯಿಂದ ಕವಿ ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ ಕಾರ್ಯಕ್ರಮ ಹಾಗೂ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜಸೇವೆ ಅರ್ಥ ಕಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಇಂಥದ್ದೊಂದು ವಿಚಾರಸಂಕಿರಣವನ್ನು ಊರ ಸಾಹಿತ್ಯಾಭಿಮಾನಿಗಳು ಹಮ್ಮಿಕೊಂಡಿರುವುದು ಸಂತೋಷದ ಸಂಗತಿ ಎಂದ ಅವರು, ಪ್ರಶ್ನಿಸುವ ಮನೋಭಾವವನ್ನು ಕಲಿಸಿದ ಅಡಿಗರ ಸಾಹಿತ್ಯ ಇಂದು ಪ್ರಸ್ತುತ ಎಂದರು. ಅಡಿಗರ ಕಾವ್ಯಗಳಲ್ಲಿ ಆದರ್ಶ, ವಾಸ್ತವಗಳ ಮುಖಾಮುಖಿ ಇದೆ. ಅವರನ್ನು ಶೋಧಿಸುವ ಕಾವ್ಯ. ಇಂದು ಕವಿಗಳ ನೆನಪು, ವಿಚಾರಸಂಕಿರಣಗಳು ಏಕೆ ಪ್ರಸ್ತತವೆಂದರೆ ಧ್ಯಾನಶೀಲ ಮನಸ್ಸಿನ ಸ್ಥಿತಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸಾಹಿತ್ಯದ ಪ್ರಸ್ತುತತೆ ಸಾಮಾಜಿಕ ಆಕ್ರಮಣಗಳಿಂದ ತಪ್ಪಿಸಿಕೊಳ್ಳುವ ಅಡಗುದಾಣಗಳು ಇದ್ದಂತೆ. ನಮ್ಮನ್ನು ನಾವು ಕಾಪಾಡಿಕೊಳ್ಳಲು ಸಾಹಿತ್ಯ ಬೇಕು, ನಮ್ಮ ಕಾಲದ ಸವಾಲು ಇದು ಎಂದು ಡಾ. ನರಹಳ್ಳಿ ಹೇಳಿದರು.

ಹಿರಿಯ ಸಾಹಿತಿ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ, ವಿಚಾರಸಂಕಿರಣದ ಉದ್ದೇಶವನ್ನು ವಿವರಿಸಿದರು.

ಪ್ರಧಾನ ಅತಿಥಿಯಾಗಿ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ ರಾವ್ ಭಾಗವಹಿಸಿ ಮಾತನಾಡಿ, ಅಡಿಗರ ಸಾಹಿತ್ಯದ ಕುರಿತು ಬೆಳಕು ಚೆಲ್ಲಿದರು. ಅಡಿಗರ ಗದ್ಯ ಸಾಹಿತ್ಯ ಕುರಿತು ವಿಶ್ರಾಂತ ಪ್ರಾಧ್ಯಾಪಕ ಡಾ. ಆರ್. ನರಸಿಂಹಮೂರ್ತಿ ಉಪನ್ಯಾಸ ನೀಡುವರು. ಬಳಿಕ ಅಡಿಗರ ಕಾವ್ಯಾನುಸಂಧಾನ ಕುರಿತು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಉಪನ್ಯಾಸ ನೀಡಿದರು. ಎಚ್.ಎಸ್. ಚಂದ್ರಶೇಖರ ಕೆದ್ಲಾಯ ಬ್ರಹ್ಮಾವರ ಅವರು ಅಡಿಗರ ಕಾವ್ಯ ಗಾಯನ ಪ್ರಸ್ತುತ ಪಡಿಸಿದರು.

ಸಮಿತಿ ಉಪಾಧ್ಯಕ್ಷರಾದ ವಿಶ್ವನಾಥ ಬಂಟ್ವಾಳ, ಕಸಾಪ ತಾಲೂಕು ಘಟಕ ಅಧ್ಯಕ್ಷ ಕೆ. ಮೋಹನ ರಾವ್, ಸಮಿತಿ ಕೋಶಾಧಿಕಾರಿ ಬಿ.ತಮ್ಮಯ್ಯ, ಮಹಾಬಲೇಶ್ವರ ಹೆಬ್ಬಾರ ಮೊದಲಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಕೆ.ಮೋಹನ ರಾವ್ ವಂದಿಸಿದರು.ಕಾರ್ಯದರ್ಶಿ ಡಾ. ಅಜಕ್ಕಳ ಗಿರೀಶ ಭಟ್ಟ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.