ಗುರುವಾರ ಬಂಟ್ವಾಳ ತಾಲೂಕಿನ ಜನರಿಗೆ ಮಳೆ ದಿನವಿಡೀ ಕಾಡಿದರೆ, ಹೆದ್ದಾರಿ ಕಾಮಗಾರಿಯೂ ಸುಗಮ ಜನಜೀವನಕ್ಕೆ ಅಡಚಣೆ ಉಂಟುಮಾಡಿತು.
ಒಂದೆಡೆ ಸುರಿಯುವ ಮಳೆ, ಮತ್ತೊಂದೆಡೆ ರಸ್ತೆ ಕಾಮಗಾರಿ. ಎರಡರ ಮಧ್ಯೆ ಬಿ.ಸಿ.ರೋಡ್ ಸಹಿತ ಬಂಟ್ವಾಳ ತಾಲೂಕಿನ ಪ್ರಮುಖ ಪೇಟೆಗಳಲ್ಲಿ ವ್ಯಾಪಾರ ಇಳಿಮುಖವಾಗಿದ್ದರೆ, ವಾಹನ ಸಂಚಾರರು ಹೆದ್ದಾರಿಯಲ್ಲೂ ಪರದಾಡಬೇಕಾದ ಸ್ಥಿತಿ ಉಂಟಾಯಿತು.
ಮೇಲ್ಕಾರ್ ನಿಂದ ಕಲ್ಲಡ್ಕದವರೆಗೆ ಬೆಳಗ್ಗಿನ ಹೊತ್ತು ಮೈಲುದ್ದದ ವಾಹನ ಕ್ಯೂ ಕಂಡುಬಂತು. ಹೆದ್ದಾರಿಯನ್ನು ಅಗಲಗೊಳಿಸುವ ಸಂದರ್ಭ ಎಡಬಲಗಳಲ್ಲಿರುವ ಮರಗಳನ್ನು ಕಡಿಯುವ ಕೆಲಸ ಭರದಿಂದ ಸಾಗುತ್ತಿದ್ದು, ಈ ಸಂದರ್ಭ ರಸ್ತೆಯಲ್ಲೇ ಮರ ಬಿದ್ದ ಕಾರಣ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಈ ಸಂದರ್ಭ ವಾಹನಗಳು ಬದಲಿ ಮಾರ್ಗವನ್ನು ಅನುಸರಿಸಿದವು. ಕೆಲವು ನರಿಕೊಂಬು ಮಾರ್ಗವನ್ನು ಅವಲಂಬಿಸಿದರೆ, ಇನ್ನು ಕೆಲವು ಮೇಲ್ಕಾರ್ ಸಮೀಪ ತಿರುಗಿ ಕೆ.ಸಿ.ರೋಡ್ ಬಳಿ ಸೇರಿಕೊಂಡವು.
ಕೃತಕ ಕೆರೆ:
ಧಾರಾಕಾರ ಮಳೆಯಿಂದಾಗಿ ಬಿ.ಸಿ.ರೋಡ್ ಸಹಿತ ಪೇಟೆಗಳಲ್ಲಿ ವ್ಯಾಪಾರ ವಹಿವಾಟುಗಳು ಕುಂಠಿತವಾದವು. ಹಬ್ಬದ ಹಿನ್ನೆಲೆಯಲ್ಲಿ ಹೂಗಳ ರಾಶಿಯೇ ಇದ್ದರೂ ಖರೀದಿಸುವವರು ಕಂಡುಬರಲಿಲ್ಲ. ಬಿ.ಸಿ.ರೋಡ್ ಫ್ಲೈಓವರ್ ಅಡಿಯಲ್ಲೂ ನಿಲ್ಲಲೂ ಆಗದಂತೆ ವಾಹನ ಪಾರ್ಕಿಂಗ್‌ಗಳು ಇದ್ದರೆ, ಸರ್ವೀಸ್ ರಸ್ತೆಯಲ್ಲಿ ಕೃತಕ ಕೆರೆ ನಿರ್ಮಾಣಗೊಂಡಿತು. ಮಂಗಳೂರಿಗೆ ತೆರಳುವ ಪ್ರಯಾಣಿಕರು ಬಸ್ಸುಗಳಿಗೆ ಕಾಯಲೂ ಆಗದೆ ಕಿರಿಕಿರಿ ಅನುಭವಿಸಬೇಕಾಯಿತು.