ಬಂಟ್ವಾಳ ತಾಲೂಕಿನ ದೇವಸ್ಥಾನಗಳ ಮೇಲೆ ಕಳ್ಳರ ಕಣ್ಣು ಬಿದ್ದಂತಿದೆ. ವಾರದ ಹಿಂದಷ್ಟೇ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಗಡಿಭಾಗದಲ್ಲಿರುವ ಹೊಕ್ಕಾಡಿಗೋಳಿ ಸಮೀಪದ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಎರಡು ಸಿಸಿ ಕ್ಯಾಮೆರಾ ಸಹಿತ ಕಾಣಿಕೆ ಡಬ್ಬಿ ಹಣ ಎಗರಿಸಿ ಪರಾರಿಯಾಗಿದ್ದರು. ಎರಡು ದಿನಗಳ ಹಿಂದೆ ಕಡೇಶ್ವಾಲ್ಯ ದೇವಾಲಯದಲ್ಲಿ ಕಳ್ಳರು ಲಗ್ಗೆ ಹಾಕಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ,ನಗದು ಕಳವುಗೈದ ಪ್ರಕರಣದ ಬೆನ್ನಲ್ಲೆ ಅರಳ ದೇವಾಲಯದಲ್ಲಿ ಕಳವಿಗೆ ವಿಫಲ ಯತ್ನ ನಡೆದಿದೆ.
ಆದರೆ ಬಾಗಿಲ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು, ವಿವಿಧೆಡೆ ತಡಕಾಡಿದರೂ ಯಾವುದೇ ಚಿನ್ನಾಭರಣ ಕಳವಾಗಿಲ್ಲ. ಒಂದು ಕಾಣಿಕೆ ಡಬ್ಬಿಯನ್ನಷ್ಟೇ ಕೊಂಡು ಹೋಗಿದ್ದಾರೆ ಎಂದು ಬಂಟ್ವಾಳನ್ಯೂಸ್ ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಪ್ರಮುಖ ಕಾರಣಿಕದ ದೇವಸ್ಥಾನ ಎಂಬ ಪ್ರತೀತಿಗೆ ಒಳಗಾಗಿರುವ ಕಡೇಶ್ವಾಲ್ಯದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಕಳ್ಳರು ನುಗ್ಗಿದ ಬಳಿಕ ಮತ್ತೊಂದು ಘಟನೆ ನಡೆದಿರುವುದು ಹಾಗೂ ಸಿಸಿ ಕ್ಯಾಮರಾ ಇದ್ದರೂ ಪ್ರಯೋಜನವಾಗದಿರುವುದು ಸಾರ್ವಜನಿಕರಲ್ಲಿ ಹಾಗೂ ಭಕ್ತಾಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ.
ಹಲವು ಪ್ರಕರಣಗಳು ರಾಶಿ ಬಿದ್ದಿರುವ ಹೊತ್ತಿನಲ್ಲೇ ಕೆಲ ದಿನಗಳಿಂದ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳರು ಚಟುವಟಿಕೆಯಿಂದಿರುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಬಿ.ಸಿ.ರೋಡಿನ ದೇವಸ್ಥಾನವೊಂದರಲ್ಲಿ ಕಳವು ಕೃತ್ಯ ನಡೆದಿದ್ದ ಸಂದರ್ಭ ಪೊಲೀಸರು ಎಲ್ಲ ದೇವಸ್ಥಾನಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಬೇಕು ಎಂಬ ಸೂಚನೆಯನ್ನು ದೇವಳಗಳ ಆಡಳಿತ ಪ್ರಮುಖರಿಗೆ ನೀಡಿದ್ದರು. ಅದರಂತೆ ಕ್ಯಾಮರಾ ಅಳವಡಿಸಿದರೂ ಚುರುಕಾಗಿರುವ ಕಳ್ಳರು ಅದರ ಫೂಟೇಜ್ ಗಳು ಪೊಲೀಸರ ಕೈಗೆ ಸಿಗದಂತೆ ಹೊತ್ತೊಯ್ಯುವುದು ಸವಾಲಾಗಿ ಪರಿಣಮಿಸಿದೆ.