- ಡಾ.ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಕಲಗಚ್ಚು ಅಥವಾ ಅಕ್ಕಿ ತೊಳೆದ ನೀರನ್ನು ಎಲ್ಲರೂ ಬಿಸಾಡುವವರೇ. ಆದರೆ ಇದು ಅತ್ಯಂತ ಸತ್ವಭಾರಿತವಾಗಿದ್ದು ಮನುಷ್ಯನ ಶರೀರಕ್ಕೂ ಸಹ ಪುಷ್ಟಿದಾಯಕವಾಗಿದೆ ಮತ್ತು ಹಲವಾರು ಸಂದರ್ಭಗಳಲ್ಲಿ ವ್ಯಾಧಿಶಾಮಕವಾಗಿಯೂ ಕೆಲಸಮಾಡುತ್ತದೆ.
ತಯಾರಿಸುವ ವಿಧಾನ :
ಮೊದಲಿಗೆ ಅಕ್ಕಿಯಲ್ಲಿರುವ ಧೂಳು, ಕಸ,ಮಣ್ಣು ಇತ್ಯಾದಿಗಳನ್ನು ಹೋಗಲಾಡಿಸಲು ನೀರಿಗೆ ಹಾಕಿ ಕದಡಿ ನೀರನ್ನು ಚೆಲ್ಲಬೇಕು. ನಂತರ ಅಕ್ಕಿಯ ಪ್ರಮಾಣದ 8 ಪಟ್ಟು ಶುದ್ದ ನೀರನ್ನು ಹಾಕಿ ಅಕ್ಕಿಯನ್ನು ಚೆನ್ನಾಗಿ ಹಿಸುಕಬೇಕು. ನಂತರ ನೀರನ್ನು ಬೇರೆ ಪಾತ್ರೆಗೆ ಹಾಕಬೇಕು .ಈ ನೀರಿನಲ್ಲಿ ಅಕ್ಕಿಯಲ್ಲಿರುವ ಬಹುಪಾಲು ಸತ್ವಗಳಾದ ವಿಟಮಿನ್ಗಳು ,ಜಿಂಕ್ ,ಕಬ್ಬಿಣಾಂಶ ,ಪೊಟ್ಯಾಸಿಯಂ ,ಮೆಗ್ನೀಷಿಯಂ ಇತ್ಯಾದಿಗಳು ಅಡಕವಾಗಿವೆ.
- ವಾಂತಿ ಮತ್ತು ಭೇದಿಯ ಸಮಸ್ಯೆಯಿಂದ ಬಳಲುತ್ತಿರುವವರು ಕಲಗಚ್ಚಿಗೆ ಸ್ವಲ್ಪ ಕಲ್ಲುಸಕ್ಕರೆ ಸೇರಿಸಿ ಕುಡಿದರೆ ಶರೀರಕ್ಕೆ ಬಲ ಮತ್ತು ಉತ್ಸಾಹವನ್ನು ನೀಡುತ್ತದೆ.
- ಇದು ಗರ್ಭಿಣಿಯರ ವಾಂತಿಯನ್ನೂ ಸಹ ಕಡಿಮೆ ಮಾಡುತ್ತದೆ.
- ಶರೀರದಲ್ಲಿ ಕುರ ಅಥವಾ ಬೊಕ್ಕೆ ಮೂಡಿದಾಗ ವಿಭೂತಿಯನ್ನು ಕಲಗಚ್ಚಿನಲ್ಲಿ ಕಲಸಿ ಲೇಪಿಸಬೇಕು
- ಕಲಗಚ್ಚಿಗೆ ಹಾಲು ಸೇರಿಸಿ ಕುಡಿದರೆ ಬಾಣಂತಿಯರಲ್ಲಿ ಎದೆ ಹಾಲಿನ ಉತ್ಪತ್ತಿ ಅಧಿಕವಾಗುತ್ತದೆ.
- ಇದು ಬೇಗನೆ ಜೀರ್ಣವಾಗುವ ಕಾರಣ ಮಕ್ಕಳಿಗೆ ದಿನಾ ಕುಡಿಸುವುದರಿಂದ ಮಕ್ಕಳ ಬೆಳವಣಿಗೆ ಸರಿಯಾಗಿ ಆಗುತ್ತದೆ ಮತ್ತು ಮಾಂಸಖಂಡಗಳು ಪುಷ್ಟಿಯಾಗುತ್ತವೆ.
- ಪ್ರತಿನಿತ್ಯ ತಲೆಕೂದಲನ್ನು ಕಲಗಚ್ಚಿನಲ್ಲಿ ತೊಳೆಯುವುದರಿಂದ ಕೂದಲಿನ ಬುಡ ದೃಢವಾಗುತ್ತದೆ ಮತ್ತು ಕೂದಲು ನುಣುಪಾಗುತ್ತದೆ
- ಕಲಗಚ್ಚಿಗೆ ಕಲ್ಲುಸಕ್ಕರೆ ಸೇರಿಸಿ ಕುಡಿದರೆ ಮಹಿಳೆಯರಲ್ಲಿನ ಕೆಲವು ತರಹದ ಬಿಳಿಸೆರಗು ವಾಸಿಯಾಗುತ್ತದೆ. .
- ಅಕ್ಕಿತೊಳೆದ ನೀರು ಶರೀರದ ತಾಪಮಾನವನ್ನು ಮತ್ತು ನೀರಿನ ಅಂಶವನ್ನು ಸರಿದೂಗಿಸುವ ಕಾರಣ ಜ್ವರದಿಂದ ಬಳಲುತ್ತಿರುವವರಿಗೆ ಇದು ಉತ್ತಮ ಪಾನೀಯವಾಗಿದೆ.
- ನಿಯಮಿತವಾಗಿ ಕಲಗಚ್ಚನ್ನು ಕುಡಿಯುವುದರಿಂದ ಮಹಿಳೆಯರಲ್ಲಿ ಮುಟ್ಟಿನ ಪ್ರಕ್ರಿಯೆಯು ಸರಿಯಾಗಿ ಆಗುತ್ತದೆ.
- ಕಲಗಚ್ಚಿನಲ್ಲಿ ಮುಖ ತೊಳೆಯುವುದರಿಂದ ಮುಖದ ಕಾಂತಿ ಅಧಿಕವಾಗಿ ಚರ್ಮದ ಸುಕ್ಕು ಕಡಿಮೆಯಾಗುತ್ತದೆ.
- ಕಲಗಚ್ಚಿನ ಸೇವನೆಯಿಂದ ಮಲಬದ್ಧತೆಯು ನಿವಾರಣೆಯಾಗುತ್ತದೆ.
- ಬೆಂಕಿಯ ದಗೆಯಿಂದ(sun burn ) ಚರ್ಮವನ್ನು ರಕ್ಷಿಸಲು ಕಲಗಚ್ಚಿಗೆ ಬಟ್ಟೆಯನ್ನು ಮುಳುಗಿಸಿ ಶರೀರದ ಮೇಲೆ ಉಜ್ಜಬೇಕು.
- ಕಲಗಚ್ಚಿಗೆ ಕಲ್ಲುಸಕ್ಕರೆ ಹಾಕಿ ಕುಡಿದರೆ ಪಿತ್ತ ಸಂಬಂಧಿ ಎದೆಉರಿ,ವಾಕರಿಕೆ,ತಲೆನೋವು ಕಡಿಮೆಯಾಗುತ್ತದೆ.
- ಕೆಲವೊಂದು ಸಂಶೋಧನೆಗಳ ಪ್ರಕಾರ ಕಲಗಚ್ಚು ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಸಹಕಾರಿಯಾಗಿದೆ.
Dr. Ravishankar A Gಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.