ಭ್ರಾಮರಿ ಯಕ್ಷಮಿತ್ರರು ಮಂಗಳೂರು ಆಶ್ರಯದಲ್ಲಿ ಪುರಭವನದಲ್ಲಿ ಶನಿವಾರ ರಾತ್ರಿ ಆಯೋಜಿಸಲಾದ ದ್ವಿತೀಯ ವರ್ಷದ ಯಕ್ಷವೈಭವ ಹಾಗೂ ಭ್ರಾಮರಿ ಯಕ್ಷಮಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಕ್ಷಗಾನ ಪ್ರಸಂಗಕರ್ತರಾದ ಗಣೇಶ್ ಕೊಲೆಕಾಡಿ ಅವರಿಗೆ ‘ಭ್ರಾಮರಿ ಯಕ್ಷಮಣಿ’ ಪ್ರಶಸ್ತಿ ಪ್ರದಾನ, ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ ಶಿವಣ್ಣ ಸರಪಾಡಿ ಹಾಗೂ ರಾಮಚಂದ್ರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ಉದ್ಘಾಟಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹುಟ್ಟಿಸುವ ಕೆಲಸ ನಡೆಯುತ್ತಿರುತ್ತದೆ ಎಂಬ ಅಪವಾದ ಸಹಜವಾಗಿ ಪ್ರಸ್ತುತ ಕೇಳಿ ಬರುತ್ತಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಸಾಮಾಜಿಕ ಜಾಲತಾಣಗಳ ಮೂಲಕವಾಗಿ ಮನಸ್ಸು ಕಟ್ಟುವ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸರ್ವರನ್ನು ಜತೆಯಾಗಿಸುವ ವಿಭಿನ್ನ ಹಾಗೂ ಆದರ್ಶ ಪ್ರಯೋಗವನ್ನು ಭ್ರಾಮರಿ ಯಕ್ಷಮಿತ್ರರು ಬಳಗ ನಡೆಸಿರುವುದು ಅಭಿನಂದನೀಯ ಎಂದರು.
ಮಂಗಳೂರು ಮೇಯರ್ ಕವಿತಾ ಸನಿಲ್ ಮಾತನಾಡಿ, ಯಕ್ಷಗಾನ ಸೇರಿದಂತೆ ಎಲ್ಲಾ ಕಲಾ ಪ್ರಕಾರಗಳಿಗೆ ಮೂಲ ನೆಲೆಯಾಗಿರುವ ಮಂಗಳೂರು ಪುರಭವನ ದುಬಾರಿ ಎಂಬ ಕಲಾವಿದರ ಬೇಸರವನ್ನು ಈ ಬಾರಿ ಶಮನ ಮಾಡಿ, ಅತ್ಯಂತ ಕಡಿಮೆ ಬೆಲೆಗೆ ಪುರಭವನ ದೊರಕುವಂತೆ ಮಂಗಳೂರು ಪಾಲಿಕೆ ಮಾಡಿದೆ ಎಂದರು.
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ|ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್, ಚಲನಚಿತ್ರ ನಟ, ನಿರ್ಮಾಪಕ ಡಾ| ರಾಜಶೇಖರ ಕೋಟ್ಯಾನ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಕ್ರೈಡೈ ರಾಜ್ಯ ಉಪಾಧ್ಯಕ್ಷ ಪುಷ್ಪರಾಜ್ ಜೈನ್ ಉಪಸ್ಥಿತರಿದ್ದರು. ಭ್ರಾಮರಿ ಯಕ್ಷಮಿತ್ರರು ತಂಡದ ಅಧ್ಯಕ್ಷರಾದ ವಿನಯಕೃಷ್ಣ ಕುರ್ನಾಡ್ ಸ್ವಾಗತಿಸಿದರು. ಸತೀಶ್ ಮಂಜೇಶ್ವರ ಸಮ್ಮಾನ ಪತ್ರ ವಾಚಿಸಿದರು. ಸತೀಶ್ ಇರಾ ವಂದಿಸಿದರು. ದಿನೇಶ್ ಇರಾ ಕಾರ್ಯಕ್ರಮ ನಿರ್ವಹಿಸಿದರು.