ಬಂಟ್ವಾಳ

ನೆರವು ರದ್ದು ವಿಚಾರದಲ್ಲಿ ರಾಜಕೀಯ ನಾಟಕ: ರಮಾನಾಥ ರೈ

ಕಲ್ಲಡ್ಕ, ಪುಣಚ ಶಾಲೆಗಳಿಗೆ ದೊರಕುತ್ತಿದ್ದ ದೇವಸ್ಥಾನದ ನೆರವು ರದ್ದುಗೊಳಿಸುವ ವಿಚಾರದಲ್ಲಿ ರಾಜಕೀಯ ನಾಟಕ ನಡೆಯುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಜಾಹೀರಾತು

ಬಂಟ್ವಾಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರದಲ್ಲಿ ತಾನು ಯಾವುದೇ ತಪ್ಪು ಮಾಡಿಲ್ಲ. ಹೈಸ್ಕೂಲುಗಳು ಸರಕಾರಿ ಅನುದಾನದಿಂದ ನಡೆಯುತ್ತಿದ್ದು, ಈಗಲೂ ಬಿಸಿಯೂಟ ಪಡೆಯುವ ಅವಕಾಶ ಇದೆ. ಶಿಕ್ಷಣ ಸಂಸ್ಥೆಯವರು ತಮಗೆ ಸರಕಾರದ ವತಿಯಿಂದ ಬಿಸಿಯೂಟ ಬೇಡ ಎಂದು ಹೇಳಿದರೆ ಏನು ಮಾಡುವುದು ಎಂದು ಪ್ರಶ್ನಿಸಿದ ಅವರು, ಇದೆಲ್ಲವೂ ನಾಟಕ ಎಂದರು.

ಆರ್.ಎಸ್.ಎಸ್. ನಾಯಕ ಕಲ್ಲಡ್ಕ ಡಾ. ಪ್ರಭಾಕರ ಭಟ್ ಅವರ ವಿರುದ್ಧ ನೇರ ವಾಗ್ದಾಳಿ ನಡೆಸಿದ ರೈ, ಮಕ್ಕಳಿಂದ ಖಾಲಿ ತಟ್ಟೆ ಹಿಡಿಯುವಂತೆ ಮಾಡಿ, ಅವರಿಂದ ಭಾಷಣ ಮಾಡಿಸುವುದು ಹಾಗೂ ಇತರರಿಂದ ಭಿಕ್ಷೆ ಬೇಡಿಸುವ ಬದಲು, ಪ್ರಭಾಕರ ಭಟ್ಟರೇ ಭಿಕ್ಷೆ ಬೇಡಬೇಕಿತ್ತು. ಅವರ ಶಾಲೆಯ ಶಿಕ್ಷಕರ ಸಂಬಳಕ್ಕೆ ಸರಕಾರದ ಅನುದಾನ ದೊರಕುತ್ತದೆ. ಸಿನೆಮಾ ನಟ, ನಟಿಯರು, ಉದ್ಯಮಿಗಳಿಂದ ಹಣಕಾಸಿನ ನೆರವು ಬರುತ್ತದೆ. ಹೀಗಿರುವಾಗ ಮಕ್ಕಳನ್ನು ಮುಂದಿಟ್ಟುಕೊಂಡು ತನ್ನ ವಿರುದ್ಧ ಆರೋಪ ಹೊರಿಸುವುದು ಎಷ್ಟು ಸರಿ ಎಂದು ಹೇಳಿದ ರೈ, ನೀವು ನನ್ನ ಅನ್ನಕ್ಕೆ ಕನ್ನ ಹಾಕಿದಿರಿ ಎನ್ನುತ್ತೀರಲ್ಲ, ನೀವು ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರಕಾರ ನೀಡಿದ್ದ ಜಮೀನು:

ಕಲ್ಲಡ್ಕ ಶಿಕ್ಷಣ ಸಂಸ್ಥೆಗೆ ಜಮೀನು ನೀಡಿದ್ದು ಅಂದಿನ ಕಾಂಗ್ರೆಸ್ ಸರಕಾರ. ಅಂದು ಆರ್. ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಶ್ರೀರಾಮ ವಿದ್ಯಾಕೇಂದ್ರಕ್ಕೆ ಜಮೀನು ಮಂಜೂರು ಮಾಡಲಾಗಿತ್ತು. ಸಂದರ್ಭ ಯಾವ ತಾರತಮ್ಯವನ್ನೂ ಮಾಡಿರಲಿಲ್ಲ. ಇದು ಡಾ. ಭಟ್ ಅವರಿಗೆ ಮರೆತುಹೋಯಿತೇ ಎಂದು ಪ್ರಶ್ನಿಸಿದ ರೈ, ಕುರಿತು ಅವರಿಗೆ ಸ್ವಲ್ಪವಾದರೂ ಕೃತಜ್ಞತೆ ಇರಬೇಕಿತ್ತು. ಆದರೆ ಅಂಥ ಮನೋಭಾವ ಅವರಿಗಿಲ್ಲ. ಅವರು ಕೃತಘ್ನರು ಎಂದು ಆರೋಪಿಸಿದರು.

ಅನ್ನದ ತಟ್ಟೆ ಎಸೆದಿದ್ದರು:

ಪುಣಚದ ಸುಬ್ಬಣ್ಣ ಶಾಸ್ತ್ರಿಗಳ ಮೊಮ್ಮಗ ಆರಂಭಿಸಿದ್ದ ಪ್ರೌಢಶಾಲೆಗೆ ಶ್ರೀದೇವಿ ಪ್ರೌಢಶಾಲೆಯವರು ತಕರಾರು ತೆಗೆದಿದ್ದರು. ಸಂದರ್ಭ ಪ್ರೌಢಶಾಲೆ ಮಾಡಬಾರದು ಎಂದು ನಾನಾ ರೀತಿಯಲ್ಲಿ ಒತ್ತಡ ಹೇರಿದ್ದರು. ಅಂದು ಶಾಲೆಗೆ ಬೀಗ ಜಡಿಯುವ ಸಂದರ್ಭ ಅನ್ನದ ತಟ್ಟೆ ಎಸೆಯಲಾಗಿತ್ತು. ಪುಣಚದ ಶಾಲೆಯ ಮಕ್ಕಳನ್ನು ಹೊರಹಾಕಿದ್ದು, ರಮಾನಾಥ ರೈ ಅಲ್ಲ. ಕಲ್ಲಡ್ಕ ಶಾಲೆಯ ಮಕ್ಕಳಿಗೆ ದೇವಸ್ಥಾನದಿಂದ ಲಭ್ಯ ನೆರವು ಸ್ಥಗಿತವಾದೊಡನೆ ನನ್ನ ಅನ್ನಕ್ಕೆ ಕನ್ನ ಹಾಕಿದೆ ಎಂದು ಮಕ್ಕಳಿಂದ ಹೇಳಿಸುವ ಪ್ರಭಾಕರ ಭಟ್ಟರು ಪುಣಚದಲ್ಲಿ ಏನು ಮಾಡಿದ್ದಿರಿ ಎಂದು ರೈ ಸವಾಲೆಸೆದರು.

ನನ್ನದು ಸರಕಾರಿ ಜಾಗವಲ್ಲ:

ನನ್ನ ಶಾಲೆ ಇರುವುದು ಸರಕಾರಿ ಜಾಗದಲ್ಲಲ್ಲ. ಇವರದ್ದು ಸರಕಾರಿ ಜಾಗದಲ್ಲಿದೆ. ಸರಕಾರದ ನೆರವು ಪಡೆಯಿರಿ ಎಂದು ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳುತ್ತಾರೆ, ಅಂಥ ದುರುಪಯೋಗವನ್ನು ನಾನು ಮಾಡಿಲ್ಲ ಎಂದು ರೈ ಸ್ಪಷ್ಟನೆ ನೀಡಿದರು.

ಬಂಟ್ವಾಳ ಬೈಪಾಸ್ ರಸ್ತೆಯನ್ನು ರೀಪೇರಿ ಮಾಡಲಾಗದ ವ್ಯಕ್ತಿ ಇಂದು ನಂಬರ್ ಒನ್ ಸಂಸದರೆನಿಸಿಕೊಳ್ಳುತ್ತಾರೆ. ಹಾಗಾದರೆ ಉಳಿದವರು ಹೇಗಿರಬಹುದು ಎಂದು ಲೇವಡಿ ಮಾಡಿದ ರೈ, ಬಿಜೆಪಿ ರಾಜಕೀಯ ಲಾಭಕ್ಕೋಸ್ಕರ ಹೇಳಿಕೆ ನೀಡುತ್ತಿದೆ ಎಂದರು.

 ಶರತ್ ಹತ್ಯೆ ನಿಯೋಜಿತ ಕೊಲೆ:

ಶರತ್ ಮಡಿವಾಳ ಹತ್ಯೆ ನಿಯೋಜಿತ ಹತ್ಯೆ. ತಾಲೂಕಿನಲ್ಲಿ ನಡೆದ ಎರಡೂ ಕೊಲೆಗಳನ್ನು ಮತೀಯವಾದಿಗಳು ಮಾಡಿದ್ದು ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ರಮಾನಾಥ ರೈ ಹೇಳಿದರು.

ಬಹುಸಂಖ್ಯಾತ, ಅಲ್ಪಸಂಖ್ಯಾತ ಮತೀಯ ಸಂಘಟನೆಗಳು ಸಕ್ರಿಯವಾಗಿವೆ ಎಂದು ಹಿಂದೆಯೇ ಹೇಳಿದ್ದೆ. ತನಿಖೆ ನಡೆದು ಅಪರಾಗಳನ್ನು ಹಿಡಿಯುವಂತೆ ನಾನೂ ಒತ್ತಡ ಹಾಕಿದ್ದೆ. ಕುರಿತು ದೇವರಲ್ಲೂ ಮನವಿ ಮಾಡಿದ್ದೆ. ಯಾರು ಅಪಪ್ರಚಾರ ಮಾಡುತ್ತಾರೋ ಅವರಿಗೆ ಶಿಕ್ಷೆ ಕೊಡಬೇಕು ಎಂದು ಹೇಳಿದ ರೈ, ತಾಲೂಕಿನಲ್ಲಿ ಭಯಮುಕ್ತ ವಾತಾವರಣ ಸೃಷ್ಟಿ ತನ್ನ ಆದ್ಯತೆ ಎಂದರು. ತಾಲೂಕಿನಲ್ಲಿ ನಡೆದ ಕೃತ್ಯಗಳಿಗೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯಕ್ಕೆ ಅವರು ಶ್ಲಾಘನೆ ವ್ಯಕ್ತಪಡಿಸಿದರು.

ಹೋಂ ಮಿನಿಸ್ಟರ್ ಕಾದು ನೋಡಿ:

ಗೃಹಸಚಿವರಾಗಿ ನೇಮಕಗೊಳ್ಳುವ ಸಾಧ್ಯತೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರೈ, ಕಾದು ನೋಡಿ ಎಂದು ಉತ್ತರಿಸಿದರು. ಬೆಂಗಳೂರಿಗೆ ಹೋಗುತ್ತಿದ್ದೇನೆ ಎಂದಷ್ಟೇ ಉತ್ತರಿಸಿದ ಸಚಿವರು, ಗೃಹಖಾತೆ ವಹಿಸುವ ಸುಳಿವು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, ಮಂಜುಳಾ ಮಾವೆ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮೊಹಮ್ಮದ್ ನಂದರಬೆಟ್ಟು, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ತಾಲೂಕು ಪಂಚಾಯತ್ ಸದಸ್ಯ ಸಂಜೀವ ಪೂಜಾರಿ, ಪುರಸಭೆ ಸದಸ್ಯ ಗಂಗಾಧರ್, ಪಕ್ಷ ಪ್ರಮುಖರಾದ ಮಾಧವ ಮಾವೆ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ರಾಜೇಶ್ ಬಾಳೆಕಲ್ಲು ಮೊದಲಾದವರು ಉಪಸ್ಥಿತರಿದ್ದರು.

 

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.