ಈ ರಸ್ತೆ ನೇರವಾಗಿ ಗೂಡಿನಬಳಿ ದಾಟಿ ಹಳೇ ಸೇತುವೆ ಕಡೆಗೆ ಹೋಗುತ್ತದೆ. ಇದೇ ಮಾರ್ಗದಲ್ಲಿ ಲಯನ್ಸ್, ರೋಟರಿ ಭವನಗಳು, ಲಯನ್ಸ್ ಪಾರ್ಕ್, ರೈಲ್ವೆ ಸ್ಟೇಶನ್, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರ, ಪಶುವೈದ್ಯ ಆಸ್ಪತ್ರೆ, ತಾಲೂಕು ಆರೋಗ್ಯಾಕಾರಿ ಕಚೇರಿ, ಸರಕಾರಿ ಪದವಿಪೂರ್ವ ಕಾಲೇಜು ಬಿ.ಮೂಡ, ಗೂಡಿನಬಳಿ ಹಯಾತುಲ್ ಇಸ್ಲಾಮಿಕ್ ವಿದ್ಯಾಸಂಸ್ಥೆಗಳು, ಗೂಡಿನಬಳಿ ಸಹಿತ ನಾನಾ ಪ್ರದೇಶಗಳಲ್ಲಿರುವ ನೂರಾರು ಮನೆಗಳು ಇವೆ. ಪ್ರತಿನಿತ್ಯ ಈ ಮಾರ್ಗವಾಗಿ ಶಾಲಾ, ಕಾಲೇಜು ಮಕ್ಕಳು, ನೂರಾರು ನಾಗರಿಕರು ನಡೆದುಕೊಂಡೇ ಹೋಗುತ್ತಾರೆ. ನಸುಕಿನ ಜಾವ ಹಾಗೂ ರಾತ್ರಿ ಬಂಟ್ವಾಳ ರೈಲು ನಿಲ್ದಾಣಕ್ಕೆ ತೆರಳುವವರು ಈ ಮಾರ್ಗವನ್ನೇ ಆಯ್ದುಕೊಳ್ಳಬೇಕು. ಅಷ್ಟೇ ಅಲ್ಲ, ಇದೇ ಮಾರ್ಗದಲ್ಲಿ ಪ್ರತಿನಿತ್ಯ ವಾಕಿಂಗ್ ಮಾಡುವವರೂ ಇದ್ದಾರೆ.
ಇದು ಬಿ.ಸಿ.ರೋಡ್ ನಾರಾಯಣಗುರು ವೃತ್ತದಿಂದ ಗೂಡಿನಬಳಿ ಕಡೆಗೆ ಹೋಗುವ ರಸ್ತೆ..
ಆದರೆ ಇದೇ ರಸ್ತೆಯಲ್ಲಿ ತ್ಯಾಜ್ಯಗಳನ್ನು ಡಂಪ್ ಮಾಡಲಾಗುತ್ತಿದೆ. ಬಂಟ್ವಾಳ ಪುರಸಭೆಯ ತ್ಯಾಜ್ಯ ಸಂಗ್ರಹಿಸಿದ ವಾಹನಗಳು ತ್ಯಾಜ್ಯವನ್ನು ಇಲ್ಲಿ ಸಂಗ್ರಹಿಸಿ ಮತ್ತೆ ರವಾನೆಯ ಕೆಲಸ ಮಾಡುತ್ತದೆ. ಹೀಗಾಗಿ ಇದೊಂದು ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ. ಇಲ್ಲಿ ಹೇರಳವಾದ ಕಸಕಡ್ಡಿಗಳು, ಅದರ ಜೊತೆಗೆ ಮಾಂಸದ ಚೂರುಗಳೂ ಬೀಳುತ್ತವೆ. ಇವು ಶ್ವಾನಪಡೆಯನ್ನು ಆಕರ್ಷಿಸುತ್ತವೆ.
ಹೀಗಾಗಿ ಇಲ್ಲಿವೆ ನಾಯಿಗಳು… ಎಚ್ಚರ!
ಕಳೆದ ಕೆಲವು ದಿನಗಳಿಂದ ಒಂದಕ್ಕಿಂದ ಒಂದು ಬಲಿಷ್ಠವಾದ ನಾಯಿಗಳು ಇಲ್ಲಿ ಕಾಣಸಿಗುತ್ತವೆ. ಇಲ್ಲೇ ಸಾಗುವ ಜನರನ್ನು ಹೆದರಿಸುತ್ತವೆ. ಅವರ ಕೈಯಲ್ಲೇನಾದರೂ ಇದ್ದರೆ ಅದನ್ನು ಸೆಳೆಯುವಂತೆ ಗುರ್ರೆನ್ನುತ್ತವೆ. ಓಡಿಸಿದರೆ ಓಡಿಸಿಕೊಂಡು ಬರುತ್ತವೆ. ಮಂಗಳವಾರ ಬೆಂಗಳೂರಿನಲ್ಲಿ ಮಹಿಳೆಯೊಬ್ಬರನ್ನು ಅಟ್ಟಿಸಿ ಬೀಳಿಸಿ ಗಾಯಗೊಳಿಸಿದ ನಾಯಿಗಳ ಕುರಿತು ಈಗಾಗಲೇ ವಿಡೀಯೋಗಳು ವೈರಲ್ ಆಗಿವೆ. ದಕ್ಷಿಣ ಕನ್ನಡದ ಬಿ.ಸಿ.ರೋಡಿನಲ್ಲಿ ಇಂಥದ್ದೇ ಘಟನೆ ಮರುಕಳಿಸಬಾರದು ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸ್ಥಳೀಯ ಪುರಸಭಾ ಸದಸ್ಯ ಮಹಮ್ಮದ್ ಇಕ್ಬಾಲ್ ಅವರಲ್ಲಿ ಕಾಲೇಜು ವಿದ್ಯಾರ್ಥಿಗಳು ಈ ಕುರಿತು ಶೀಘ್ರ ಗಮನಹರಿಸಿ ನಾಯಿಗಳ ಕಾಟದಿಂದ ಮುಕ್ತಿ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ. ಅದರಂತೆ ಸದಸ್ಯರು ಬಂಟ್ವಾಳ ಪುರಸಭೆಗೆ ಈ ವಿಚಾರವಾಗಿ ಚರ್ಚಿಸಿದ್ದು, ಇದಕ್ಕೆ ಪೂರಕವಾಗಿ ಇಲ್ಲಿ ಬೀದಿ ದೀಪಗಳ ವ್ಯವಸ್ಥೆಯನ್ನೂ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಬಿ.ಸಿ.ರೋಡ್ ಸಹಿತ ಬಂಟ್ವಾಳ ಪುರಸಭೆ ವ್ಯಾಪ್ತಿಯ ನಿರ್ಜನ ಪ್ರದೇಶ, ಕಸದ ರಾಶಿ ಇರುವ ಪ್ರದೇಶಗಳಲ್ಲಿ ಸಹಜವಾಗಿಯೇ ನಾಯಿಗಳು ಮುತ್ತಿಕೊಳ್ಳುತ್ತವೆ. ಮಾಂಸದ ತುಣುಕುಗಳು ಕಸದ ಮಧ್ಯೆ ಇವೆ ಎಂದಾದರೆ ಶ್ವಾನಪಡೆಗಳು ಅಲ್ಲಿಗೆ ಲಗ್ಗೆ ಹಾಕುತ್ತವೆ. ಆದರೆ ಅದೇ ಜಾಗ ಸ್ವಚ್ಛವಾಗಿದ್ದರೆ ನಾಯಿಗಳು ಅಲ್ಲಿ ತಲೆಯೇ ಹಾಕುವುದಿಲ್ಲ.