ಕೊಲ್ಲೂರು ದೇವಳದಿಂದ ನೀಡಲಾಗುತ್ತಿರುವ ಅನುದಾನವನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಮತ್ತು ಪುಣಚ ಶ್ರೀದೇವಿ ವಿದ್ಯಾಸಂಸ್ಥೆಗೆ ರದ್ದುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಕ್ರಿಯಿಸಿರುವ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಕಾನೂನು ಮೀರಿ ನೆರವು ನೀಡಿದ್ದನ್ನು ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.
ಇದು ನನ್ನ ಕೈವಾಡ ಅಲ್ಲ, ಮುಜರಾಯಿ ಇಲಾಖೆ ಮಾಡಿದ ಕೆಲಸ. ಕಲ್ಲಡ್ಕ ಘಟನೆ ಹಿಂದೆ ದ್ವೇಷದಿಂದ ಮಾಡಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಆದರೆ ಇದು ಸರಿಯಲ್ಲ. ಈ ಪ್ರಕ್ರಿಯೆಯನ್ನು ಧಾರ್ಮಿಕ ಪರಿಷತ್ ಆರಂಭಿಸಿ ವರ್ಷವಾಯಿತು. ಈಗ ಜಾರಿಯಾಗಿದೆ ಅಷ್ಟೇ. ಈ ವಿಚಾರವಾಗಿ ವಿನಾ ಕಾರಣ ನನ್ನ ಹೆಸರನ್ನು ಎಳೆದುತರುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ರೈ ಹೇಳಿದರು.
ಕಲ್ಲಡ್ಕ ಶಾಲೆಗೆ ಸಾಕಷ್ಟು ಸಂಖ್ಯೆಯಲ್ಲಿ ಹಣ ಸಂಗ್ರಹವಾಗುತ್ತಿದೆ. ಆದರೂ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಹಣದಿಂದ ಮಕ್ಕಳಿಗೆ ಊಟ ನೀಡಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ ಮಕ್ಕಳ ಹೊಟ್ಟೆಗೆ ಕಲ್ಲು ಹಾಕಿದ್ದು ರಮಾನಾಥ ರೈ ಅಲ್ಲ ಎಂದು ರೈ ಹೇಳಿದರು. ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲಿ ಎಂದು ಸಲಹೆ ನೀಡಿದರು.