ರಾಜ್ಯ ಸರ್ಕಾರವು ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿನ ವ್ಯಾಪ್ತಿಗೆ ಸಂಬಂಧಿಸಿದಂತೆ ಕೇಂದ್ರಗಳಲ್ಲಿ ದಾಖಲಾಗಿರುವ ಗರ್ಭಿಣಿಯರಿಗೆ, ಬಾಣಂತಿಯರಿಗೆ, ಕಿಶೋರಿಗಳಿಗೆ ಪೌಷ್ಠಿಕಾಂಶವುಳ್ಳ ಮಧ್ಯಾಹ್ನದ ಬಿಸಿ ಊಟವನ್ನು ಪ್ರತಿನಿತ್ಯ ಮಧ್ಯಾಹ್ನ ಅಂಗನವಾಡಿ ಕೇಂದ್ರಗಳಲ್ಲಿಯೇ ನೀಡಬೇಕು ಎನ್ನುವ ಸರಕಾರದ ಯೋಜನೆ ಶೀಘ್ರವೇ ಕಾರ್‍ಯಗತವಾಗಲಿರುವುದು ಸ್ವಾಗತಾರ್ಹ ಆದರೇ ಈ ಯೋಜನೆ ಅನುಷ್ಠಾನಗೊಳಿಸಲು ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಕಷ್ಟ ಸಾಧ್ಯವಾಗಬಹುದು. ಅಂದರೆ ಹೆಚ್ಚಿನ ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯದ ಸಮಸ್ಯೆ ಎದುರಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಮಹಿಳೆಯರು ಬೇರೆ ಬೇರೆ ಕೆಲಸ ನಿಮಿತ್ತ ಮನೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡುವುದು ವಾಡಿಕೆಯಾಗಿದ್ದು ತಮ್ಮ ದೈನಂದಿನ ಕೆಲಸದ ಒತ್ತಡದಿಂದ ಅಂಗನವಾಡಿ ಕೇಂದ್ರಗಳಿಗೆ ಬರಲು ಸಾಧ್ಯವಾಗಲಿಕ್ಕಿಲ್ಲ. ಕೇಂದ್ರದಲ್ಲಿ ಸ್ಥಳಾವಕಾಶವೂ ಕಡಿಮೆಯಾಗಿದ್ದು ಕಾರ್‍ಯಕರ್ತೆಯರು ಸಹ ಬೇರೆ ಬೇರೆ ಸಂಧರ್ಭಗಲ್ಲಿ ಅಂದರೆ ಚುನಾವಣಾ ಆಯೋಗದ ಕೆಲಸ ಕಾರ್‍ಯಗಳು, ಫಲ್ಸ್ ಪೋಲಿಯೋ, ಇನ್ನಿತರ ಇಲಾಖಾ ಸಂಬಂಧಿಸಿದಂತೆ ಸಭೆಗಳಲ್ಲಿ ಭಾಗವಹಿಸುವಾಗ ಅಂಗನವಾಡಿ ಸಹಾಯಕಿಯರೇ ಎಲ್ಲಾ ಜವಾಬ್ದಾರಿಯೊಂದಿಗೆ ಪುಟ್ಟ ಮಕ್ಕಳನ್ನು ತನ್ನ ನಿಗದಲ್ಲಿರಿಸಿ ಅವರಿಗೆ ಕಾಲಕಾಲಕ್ಕೆ ತಿಂಡಿ ತಿನಿಸುವುದು, ಊಟ ಬಡಿಸಿ ಅವರ ಆರೈಕೆ ಮಾಡುವುದರಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. ಇದರ ಜೊತೆಯಲ್ಲಿ ಬಾಣಂತಿಯರಿಗೆ, ಗರ್ಭಿಣಿಯರಿಗೆ, ಕಿಶೋರಿಯರಿಗೆ ಪ್ರತ್ಯೇಕವಾಗಿ ಬಿಸಿ ಊಟ ತಯಾರಿಸಿ ಒದಗಿಸಲು ಸಾಧ್ಯವಾಗದ ಮಾತು.
ಆದುದರಿಂದ ಸದ್ಯದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ “ಮಾತೃ ಪೂರ್ಣ” ಯೋಜನೆಯಿಂದ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಕೈಬಿಟ್ಟು ಈ ಹಿಂದಿನಂತೆ ಪೌಷ್ಠಕ ಆಹಾರ ಮನೆಗೆ ಕೊಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ವಿನಂತಿಸಿದ್ದಾರೆ.