ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾಣೆಮಂಗಳೂರು -ಅಮ್ಟೂರು -ಗೋಳ್ತಮಜಲು ಗ್ರಾಮಗಳ ತ್ರೀವೇಣಿ ಸಂಗಮದ ಗಡಿ ಪ್ರದೇಶದಲ್ಲಿ , ಸಮುದ್ರ ಮಟ್ಟದಿಂದ ಸುಮಾರು ಒಂದು ಸಾವಿರ ಅಡಿ ಎತ್ತರದ ಪ್ರಕೃತಿ ಸೌಂದರ್ಯದ ರಮ್ಯ ಮನೋಹರವಾದ ಪರ್ವತದ ತುದಿಯಲ್ಲಿರುವ ಶ್ರೀ ನರಹರಿ ಸದಾಶಿವ ದೇವಾಲಯದಲ್ಲಿ ಆಟಿ ಅಮಾವಾಸ್ಯೆಯ ವೈಶಿಷ್ಯ ಪೂರ್ಣವಾದ ತೀರ್ಥಸ್ನಾನ ಜುಲೈ 23ರಂದು ಜರಗುವುದು.
ಆಟಿ ಅಮಾವಾಸ್ಯೆಯಂದು ನರಹರಿ ಪರ್ವತದ ತುದಿಯಲ್ಲಿ ಸದಾಶಿವನ ಸಾನ್ನಿಧ್ಯದಲ್ಲಿರುವ ಪ್ರಾಕೃತಿಕವಾದ ಶಂಖ, ಚಕ್ರ, ಗದಾ ಮತ್ತು ಪದ್ಮದ ಆಕಾರದ ತೀರ್ಥಕೂಪದಲ್ಲಿ ತೀರ್ಥಸ್ನಾನ ಗೈದರೆ ಸರ್ವ ಪಾಪಕರ್ಮಗಳು ನಿವಾರಣೆಗೊಂಡು ಇಷ್ಟಾರ್ಥ ಸಿದ್ಧಿಸುವುದು ಎಂಬ ನಂಬಿಕೆ ಇದೆ.
ಆಟಿ ಅಮಾವಾಸ್ಯೆಯ ಮುಂಜಾನೆಯೇ ನವವಧುವರರು, ಶಿವಭಕ್ತರು ಸಾಲು ಸಾಲಾಗಿ ಪರ್ವತವೇರಿ ಪವಿತ್ರವಾದ ನಾಲ್ಕು ಕೆರೆಗಳಲ್ಲಿ (ತೀರ್ಥಕೂಪ) ಮಿಂದು ಎಲೆ, ಅಡಿಕೆ ಅರ್ಪಣೆ ಗೈದು ವಿನಾಯಕ, ನರಹರಿ ಸದಾಶಿವ ಹಾಗೂ ನಾಗರಾಜನಿಗೆ ವಂದಿಸಿ ವಿಧ ವಿಧದ ಸೇವೆಗಳನ್ನು ಸಲ್ಲಿಸಿ ಪುನೀತರಾಗುತ್ತಾರೆ. ಈ ಕ್ಷೇತ್ರದಲ್ಲಿ ಬಲಿವಾಡು ಸೇವೆಯಿಂದ ಸರ್ವ ಭಯವೂ ಪಾದಾರ್ಪಣೆಯಿಂದ ಉಬ್ಬಸವ್ಯಾಧಿಯೂ, ತೊಟ್ಟಿಲುಮಗು ಸೇವೆಯಿಂದ ಬಂಜೆತನವೂ ನೀಗುವುದು ಎಂಬ ನಂಬಿಕೆ ಇದೆ.
ದೇಗುಲ ಪುನರ್ ನಿಮಾರ್ಣಕ್ಕೆ ಸಜ್ಜು :
ನರಹರಿ ಪರ್ವತ ಸದಾಶಿವನಿಗೆ ಶಿಲಾಮಯ ಗರ್ಭಗುಡಿಯೊಂದಿಗೆ ದೇವಸ್ಥಾನದ ಸಮಗ್ರ ಪುನರ್ ನಿಮಾರ್ಣದ ಕಾರ್ಯಕ್ಕೆ ನೂತನವಾಗಿ ರೂಪುಗೊಂಡ ಜೀರ್ಣೋದ್ಧಾರ ಸಮಿತಿ ಕಾರ್ಯೊನ್ಮುಖವಾಗಿದೆ.ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ದೇಗುಲ ಪುನರ್ ನಿರ್ಮಾಣದ ನೀಲ ನಕಾಶೆಯನ್ನು ವಾಸ್ತು ಶಿಲ್ಪ ಪ್ರಸಾದ್ ಮುನಿಯಂಗಳ ಅವರು ಸಿದ್ಧಪಡಿಸಿದ್ದಾರೆ .ದೇಗುಲದವರೆಗೆ ರಸ್ತೆಯನ್ನು ವಿಸ್ತರಿಸುವ ಕಾಮಗಾರಿ ಇದೀಗ ಪ್ರಗತಿಯಲ್ಲಿದೆ. ಈಗಾಗಲೇ ಶ್ರೀ ಮಹಾಗಣಪತಿ ಮತ್ತು ಶ್ರೀನಾಗ ನನ್ನು ಬಾಲಾಲಯದಲ್ಲಿ ಪ್ರತಿಷ್ಠೆ ಮಾಡಲಾಗಿದೆ. ಪ್ರಕೃತಿ ಸೌಂದರ್ಯದ ಈ ಶಿವಕ್ಷೇತ್ರದ ಪುನರ್ ನಿರ್ಮಾಣದಲ್ಲಿ ದಾನಿಗಳು ಕೈ ಜೋಡಿಸುವಂತೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಡಾ| ಪ್ರಶಾಂತ್ ಮಾರ್ಲ ಮತ್ತು ಜೀರ್ಣೋದ್ಧಾರ ಸಮಿತಿ. ಅಧ್ಯಕ್ಷ ಡಾ| ಆತ್ಮರಂಜನ್ ರೈ ವಿನಂತಿಸಿದ್ದಾರೆ.