ನಾವು ಒಳ್ಳೆಯದನ್ನೇ ಯೋಚಿಸಿದಾಗ ಜಗತ್ತು ನಮಗೆ ಒಳ್ಳೆಯದೇ ಆಗಿ ಕಾಣುವುದು. ನಮ್ಮ ಮನಸ್ಸಿನ ಯೋಚನೆಗಳಲ್ಲಿ ಎಲ್ಲವೂ ಅಡಗಿದೆ ಎಂದು ಮಾಣಿಲ ಶ್ರೀಧಾಮ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಭಾನುವಾರ 48 ದಿನಗಳ ಸಾಮೂಹಿಕ ಲಕ್ಷ್ಮೀ ಪೂಜೆಯ ಅಂಗವಾಗಿ ನಾನಾ ವೈದಿಕ, ಧಾರ್ಮಿಕ ಕಾರ್‍ಯಕ್ರಗಳ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಮಕ್ಕಳು ಪ್ರತಿಯೊಬ್ಬ ತಂದೆತಾಯಂದಿರ ಅಮೂಲ್ಯ ಸಂಪತ್ತಾಗಿದ್ದು, ಆ ಸಂಪತ್ತು ದೇಶದ ಸಂಪತ್ತಾಗಿ ಪರಿವರ್ತನೆಗೊಳಿಸುವ ಮಹತ್ತರ ಜವಾಬ್ದಾರಿ ಹೆತ್ತವರ ಮೇಲಿದೆ ಎಂದು ತಿಳಿಸಿದರು.
ಧಾರ್ಮಿಕ ಉಪನ್ಯಾಸ ನೀಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್‍ಯಕರ್ತ, ಶ್ರೀ ಕ್ಷೇತ್ರದ ವೈದಿಕ ಬೋಳುಬೈಲು ಸುಬ್ರಹ್ಮಣ್ಯ ಭಟ್ ಭೋಗದೃಷ್ಟಿಯನ್ನಿಡದೇ ತ್ಯಾ ದೃಷ್ಟಿಯ ಜೀವನದಲ್ಲಿ ಸುಖಸಂತೋಷವಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಬೆಂಗಳೂರು ಶ್ರೀಧಾಮ ಸೇವಾ ಸಮಿತಿಯ ಪದಾಧಿಕಾರಿ ಪುರುಷೋತ್ತಮ ಚೇಂಡ್ಲಾ, ಉದ್ಯಮಿಗಳಾದ ರವಿ ಬೆಂಗಳೂರು, ಸಂತೋಷ್ ಬೆಂಗಳೂರು, ಜನಾರ್ದನ ಸಾಲ್ಯಾನ್ ನಾಸಿಕ್, ಶ್ರೀ ಕ್ಷೇತ್ರದ ಟ್ರಸ್ಟಿ ಚಂದ್ರಶೇಖರ್ ತುಂಬೆ, ಶ್ರೀಧಾಮ ಮಿತ್ರವೃಂದದ ಅಧ್ಯಕ್ಷ ಅಧ್ಯಕ್ಷ ಯೋಗೀಶ್ ಬಾಳೆಕಾನ ಇನ್ನಿತರರು ಉಪಸ್ಥಿತರಿದ್ದರು.
ಶ್ರೀಧಾಮ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆ ವನಿತಾ ವಿ. ಶೆಟ್ಟಿ, ಸ್ವಾಗತಿಸಿದರು. ಶ್ರೀಧಾಮ ಮಹಿಳಾ ಸೇವಾ ಸಮಿತಿಯ ಕಾರ್‍ಯದರ್ಶಿ ಗೀತಾ ಪುರುಷೋತ್ತಮ್ ವಂದಿಸಿದರು.
ಶ್ರೀ ಕ್ಷೇತ್ರದಲ್ಲಿ ವೇ.ಮೂ.ನಯನಕೃಷ್ಣ ಜಾಲ್ಸೂರು ಅವರ ವೈದಿಕತ್ವದಲ್ಲಿ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ಶ್ರೀಗುರುಪೂಜೆ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ಬಾಲಭೋಜನ, ಸಾಮೂಹಿಕ ಕುಂಕುಮರ್ಚನೆ, ವಿಷ್ಣು ಸಹಸ್ರ ನಾಮ ಪಠಣ, ಕನಕಧಾರ ಯಾಗ, ಶ್ರೀ ವಿಠೋಭ ರುಕ್ಮಯಿ ಧ್ಯಾನ ಮಂದಿರದಲ್ಲಿ ಭಜನಾ ಸಂಕೀರ್ತನೆ, ಶ್ರೀ ದುರ್ಗಾ ಪೂಜೆ, ಆಶ್ಲೇಷಾ ಬಲಿ, ಶ್ರೀ ಲಕ್ಷ್ಮೀ ಪೂಜೆ ನಡೆದವು.