ಮಾಹಿತಿ

ಕ್ಲಿಕ್ ಮಾಡಿ ಓದುವ ಸ್ನೇಹಿತರೇ….

https://bantwalnews.com
ಈ ವೆಬ್ ಸೈಟ್ ಅನ್ನು ಕ್ಲಿಕ್ ಮಾಡಿ ಓದುವ ಸ್ನೇಹಿತರೇ.. ಧನ್ಯವಾದ ನಿಮಗೆ.

ಇದು ದೊಡ್ಡ ಸಂಖ್ಯೆಯೇನಲ್ಲ, ಯಾವ ಸಾಧನೆಯೂ ಅಲ್ಲ. ನನ್ನ ಮಟ್ಟಿಗೆ ಖುಷಿಯ ವಿಚಾರ.
ನಿಮ್ಮೊಂದಿಗೆ ಹಂಚೋಣ ಎನಿಸಿತು.
ತುಂಬಾ ದಿನಗಳಿಂದ ಇದ್ದ ಆಲೋಚನೆಯೊಂದು ಕಾರ್ಯರೂಪಕ್ಕೆ ಬಂದಾಗ ಆತಂಕದಿಂದಲೇ ಎಚ್ಚರಿಸಿದವರು ಹಲವು ಹಿತೈಷಿಗಳು. ಆರ್ಥಿಕ ಬಂಡವಾಳದ ಜೊತೆಗೆ ದೈಹಿಕ ಶ್ರಮ, ಶಕ್ತಿಮೀರಿದ ದುಡಿಮೆಯೂ ಒಳಗೊಂಡಿರುವ ಕಾರಣ ವೆಬ್ ಸೈಟ್ ಒಂದನ್ನು ಆರಂಭಿಸಿ, ಪ್ರತಿದಿನದ ಸುದ್ದಿವಾಹಿನಿಯಾಗಿ ಒದಗಿಸುವ ಜವಾಬ್ದಾರಿಯ ಹೊಣೆ ಹೊರುವಾಗ ಸಹಜವಾಗಿಯೇ ಆತಂಕ ಮೂಡಿತ್ತು. ಸಹೋದರ ಅಶೋಕನ ಸಹಕಾರ, ಗೆಳೆಯ ಆದಿತ್ಯ ಕಲ್ಲೂರಾಯ, ಶಿವಪ್ರಸಾದ ಭಟ್ ಅವರ ಟಿಪ್ಸ್ ನೊಂದಿಗೆ ವೆಬ್ ಆರಂಭಿಸಿಯೇಬಿಡುವ ಹಠವೂ ಮೂಡಿತು. ಸಕಾಲಕ್ಕೆ ಸ್ಪಂದಿಸಿದ ಆದಿತ್ಯ, ಅಂದವಾದ ಡಿಸೈನ್ ಅನ್ನೂ ಮಾಡಿಕೊಟ್ಟರು. ಈ ಸಂದರ್ಭ ನನ್ನ ಮಾಧ್ಯಮ ಸ್ನೇಹಿತರು ನೀಡಿದ ಅಮೂಲ್ಯ ಸಲಹೆ ಮರೆಯಲು ಸಾಧ್ಯವೇ ಇಲ್ಲ. ಬಂಟ್ವಾಳದಷ್ಟೇ ಸುದ್ದಿ ನೀಡುವ ವೆಬ್ (ಜಿಲ್ಲಾ, ರಾಷ್ಟ್ರೀಯ, ರಾಜ್ಯ ಮಟ್ಟದ್ದಿವೆ) ಇಲ್ಲದ ಕಾರಣ ಬಂಟ್ವಾಳನ್ಯೂಸ್ ಎಂದೇ ಹೆಸರಿಸಿ ಆರಂಭಕ್ಕೆ ಮುನ್ನುಡಿ ಬರೆದದ್ದೂ ಆಯಿತು..
ತಂದೆ, ತಾಯಿ ಆಶೀರ್ವಾದ, ಪತ್ನಿ, ಮಕ್ಕಳ ನೆರವು, ಬಂಧು ಮಿತ್ರರ ಸಹಕಾರ, ಪ್ರೋತ್ಸಾಹದೊಂದಿಗೆ ನನಗೂ ಹೊಸ ಜಗತ್ತಾಗಿರುವ ಸುದ್ದಿಜಾಲತಾಣ ನವೆಂಬರ್ 10ರಂದು ಆರಂಭಿಸಿಯೇಬಿಟ್ಟಾಗ ಸಣ್ಣದೊಂದು ಆತಂಕವೂ ಸಹಜವಾಗಿಯೇ ಇತ್ತು.  ನನ್ನ ಮನೆಯಲ್ಲಿ ತಂದೆ, ತಾಯಿ ಕಂಪ್ಯೂಟರ್ ಕೀಲಿ ಒತ್ತುವ ಮೂಲಕ ಶುಭಾರಂಭವನ್ನೂ ಮಾಡಿದ್ದರು.
ಅದಾಗಲೇ ಬಂಟ್ವಾಳ ತಾಲೂಕಿನ ಎಲ್ಲ ಪತ್ರಿಕಾ ಸಹೋದ್ಯೋಗಿಗಳೂ ನನ್ನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಸಹಕಾರ ನೀಡಿದರು. ಅವರ ಸಕಾಲಿಕ ಸ್ಪಂದನೆಯಿಂದಾಗಿಯೇ ಬಂಟ್ವಾಳ ನ್ಯೂಸ್ ಇಂದು ಹೆಜ್ಜೆಯೂರಲಾರಂಭಿಸಿತು. ಓದುಗರಾದ ನೀವೂ ಪ್ರೋತ್ಸಾಹ ನೀಡಿದಿರಿ. ಲೇಖಕರಾದ ಅನಿತಾ ನರೇಶ್ ಮಂಚಿ, ಡಾ. ಅಜಕ್ಕಳ ಗಿರೀಶ್ ಭಟ್, ಮೌನೇಶ ವಿಶ್ವಕರ್ಮ, ಬಿ.ತಮ್ಮಯ್ಯ, ಡಾ.ರವಿಶಂಕರ್ ಹಾಗೂ ಪದ್ಯಾಣ ಗೋಪಾಲಕೃಷ್ಣ ಅವರ ಪುತ್ರ ಪ.ರಾಮಚಂದ್ರ ಕಾಲಕಾಲಕ್ಕೆ ಅಂಕಣ ಬರೆಹಗಳನ್ನು ಪ್ರೀತಿಯಿಂದ ನೀಡಲು ಆರಂಭಿಸಿದರು.

ಇದೀಗ ನಿಮ್ಮ ಮುಂದಿರುವ ಸುದ್ದಿ ತಾಣದ ಫೇಸ್ ಬುಕ್ ಪುಟವನ್ನು 5000ಕ್ಕೂ ಅಧಿಕ ಮಂದಿ ಇಷ್ಟಪಟ್ಟಿದ್ದಾರೆ. ಬಂಟ್ವಾಳನ್ಯೂಸ್ ಪೋರ್ಟಲ್ ಫೇಸ್ ಬುಕ್ ಖಾತೆಯಲ್ಲಿ 5000 ಸ್ನೇಹಿತರಿದ್ದಾರೆ. 3,27,132 ಮಂದಿ ನಮ್ಮ ವೆಬ್ಸೈಟ್ ಓದಿದ್ದಾರೆ. 57,636 ಮಂದಿ ನಮ್ಮ ಯೂಟ್ಯೂಬ್ ಸುದ್ದಿಯನ್ನು ವೀಕ್ಷಿಸಿದ್ದಾರೆ. (ಯೂಟ್ಯೂಬ್ ಗೆ 206 ಮಂದಿ ಸಬ್ ಸ್ಕ್ರೈಬರ್ ಗಳಿದ್ದಾರೆ). ಇವಿಷ್ಟು ಇಂದಿನ ಲೆಕ್ಕ. 

ನಿಮ್ಮ ಪ್ರೋತ್ಸಾಹ ಮುಂದುವರಿದರೆ ಮತ್ತಷ್ಟು ಬೆಳವಣಿಗೆಯನ್ನು ಬಂಟ್ವಾಳನ್ಯೂಸ್ ಕಾಣಲು ಸಾಧ್ಯ.
ಇದೇನೂ ದೊಡ್ಡ ನಂಬರ್ ಅಲ್ಲ ಎಂಬುದೂ ಗೊತ್ತು. ಸಮುದ್ರದಲ್ಲಿ ಸಣ್ಣ ಮೀನಿನಂತಿದೆ ಬಂಟ್ವಾಳನ್ಯೂಸ್. ದೊಡ್ಡ ಸುದ್ದಿತಾಣಗಳು, ಚಾನೆಲ್ ಗಳಿಗೆ ಹೋಲಿಸಿದರೆ ನಮ್ಮದು ಅಂಬೆಗಾಲಿಡುತ್ತಿರುವ ಶಿಶುವಷ್ಟೇ.
ಆದರೆ ಬಂಟ್ವಾಳನ್ಯೂಸ್ ತನ್ನ ಜವಾಬ್ದಾರಿ ಮರೆತಿಲ್ಲ
ಬ್ರೇಕಿಂಗ್ ನ್ಯೂಸ್ ಎಂಬ ಧಾವಂತಕ್ಕೆ ಬಲಿಬಿದ್ದು, ಯಾವುದೇ ಅತಿರಂಜಿತ ಸುದ್ದಿಗಳನ್ನುನಾವು ಇನ್ನೂ ನೀಡುವುದಿಲ್ಲ. ಹಾಗೆ ನೋಡಿದರೆ ಬಂಟ್ವಾಳ ನ್ಯೂಸ್ ಇಂದು ಭಾರೀ ಪ್ರಮಾಣದ ಜಾಹೀರಾತನ್ನು ಹೊಂದಿಲ್ಲ. ಆರ್ಥಿಕ ಲಾಭವನ್ನೂ ಗಳಿಸಿಲ್ಲ.
ಅಷ್ಟೇ ಅಲ್ಲ, ಹಲವರಿಗೆ ನಮ್ಮಿಂದ ನಿರಾಸೆ ಆಗಿರಲೂಬಹುದು. ರೋಚಕ ವಿಚಾರಗಳೇನಾದರೂ ಇದರಲ್ಲಿ ಬಂದು ಅದನ್ನು ವಾಟ್ಸಾಪುಗಳಲ್ಲಿ ಶೇರ್ ಮಾಡಬಹುದು ಎಂಬ ಬಯಕೆಯನ್ನು ಯಾರಾದರೂ ಇಟ್ಟುಕೊಂಡರೆ ಕ್ಷಮಿಸಿ. ನನಗೆ ನಂಬರ್ ಗೇಮ್ ನಲ್ಲಿ ನಂಬಿಕೆ ಇಲ್ಲ. ಹೀಗಾಗಿ ಯಾವುದೇ ರೋಚಕ ಬ್ರೇಕಿಂಗ್ ಸುದ್ದಿಯನ್ನು ಬಂಟ್ವಾಳನ್ಯೂಸ್ ನಿಂದ ನಿರೀಕ್ಷಿಸಬೇಡಿ.
ಇಂಟರ್ ನೆಟ್ ಪತ್ರಿಕೆಗಳಲ್ಲಿ ಬಂಟ್ವಾಳ ತಾಲೂಕಿನದ್ದೇ ಸುದ್ದಿಗಳನ್ನು ನೀಡುವ ಮೊದಲ ಪತ್ರಿಕೆ ನಮ್ಮದು ಎಂಬುದು ಎಲ್ಲರಿಗೂ ಗೊತ್ತಾಗಿರುವ ವಿಚಾರ. ಹೀಗಾಗಿ ದೊಡ್ಡ ಸುದ್ದಿ ನೆಟ್ವರ್ಕುಗಳೊಂದಿಗೆ ನಮ್ಮ ಸ್ಪರ್ಧೆಯೇನೂ ಇಲ್ಲ.

 ಸಲಹೆ ಸೂಚನೆ ನೀಡುತ್ತಾ ಹುರಿದುಂಬಿಸುತ್ತಿರುವ ತೆರೆಮರೆಯಲ್ಲಿ ನನ್ನನ್ನು ಪ್ರೋತ್ಸಾಹಿಸುತ್ತಿರುವ ಹಿರಿಯ, ಕಿರಿಯ ಸ್ನೇಹಿತರು, ಮಾರ್ಗದರ್ಶಿಗಳಿಗೆ ವೈಯಕ್ತಿಕವಾಗಿ ಋಣಿಯಾಗಿದ್ದೇನೆ.

ಜಾಹೀರಾತು

ಅಂದವಾಗಿ ವೆಬ್ ವಿನ್ಯಾಸಗೊಳಿಸಿದ ಆದಿತ್ಯ ಕಲ್ಲೂರಾಯ https://thewebpeople.in/ ಅವರಿಗೆ ಹಾಗೂ ಇದುವರೆಗೆ ನನ್ನೊಂದಿಗೆ ಸಾಥ್ ನೀಡುತ್ತಿರುವ ಬಂಟ್ವಾಳ ತಾಲೂಕಿನ ಎಲ್ಲ ಪತ್ರಕರ್ತರು ಹಾಗೂ ಸಹೃದಯಿ ಸ್ನೇಹಿತರಿಗೆ ವಿಶೇಷ ಧನ್ಯವಾದ. ನಿಮ್ಮ ಬೆಂಬಲ ಹೀಗೆ ಇರಲಿ.

– ಹರೀಶ ಮಾಂಬಾಡಿ, ಸಂಪಾದಕ
You tube channel :
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.