ವಾಸ್ತವ

ಸಾಥ್, ಸಾಥ್ ಏಕ್ ಸಾಥ್

  • ಹರೀಶ ಮಾಂಬಾಡಿ

ನಿನ್ನೆ ರಾತ್ರಿಯಿಂದಲೇ ಇತ್ತು. ಇಂದು ಬೆಳಗ್ಗೆಯೂ social mediaಗಳಲ್ಲಿ ಕಂಡುಬಂತು. 7-7-17 ಇಂದಿನ ತಾರೀಕು. ಅದನ್ನು ಹಿಂದಿಯಲ್ಲಿ ಹೇಳುವುದಾದರೆ ಸಾತ್, ಸಾತ್, ಏಕ್ ಸಾತ್.  ಸಾತ್ ಎಂಬ ಏಳನ್ನು ಸಾಥ್ ಎಂದು ಬದಲಾಯಿಸಿಕೊಳ್ಳಿ. ಒಟ್ಟಿಗೆ ಒಟ್ಟಿಗೆ ಒಟ್ಟೊಟ್ಟಿಗೆ ಎಂಬರ್ಥ ಬರುತ್ತದೆ. ಪ್ರಸಕ್ತ ಸನ್ನಿವೇಶದಲ್ಲಿ ಬಂಟ್ವಾಳದಲ್ಲಿ ಈ ಮಂತ್ರ ಹೇಳುವ ಅಗತ್ಯವಿದೆ. ತ್ವೇಷಮಯ ಪರಿಸ್ಥಿತಿಯ ಬದಲು ಒಟ್ಟಿಗೆ, ಒಟ್ಟೊಟ್ಟಿಗೆ ಬಾಳ್ವೆ ಮಾಡುವ ಮನಸ್ಸು ಇಂದಿನ ಜರೂರತ್ತು.

ಜಾಹೀರಾತು

ಇಂದು ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಬ್ಬರ ಪೌರುಷ ಕೆದಕಿ ಚಂದ ನೋಡುವ ಮಂದಿಯೇ ಜಾಸ್ತಿ. ಬಾಯಿಗೆ ಬಂದಂತೆ ಬರೆದು ದ್ವೇಷದ ಕಿಡಿಗೆ ತಮ್ಮದೊಂದು ಕೊಡುಗೆ ನೀಡುವವರು ರಸ್ತೆ ಹಾಳಾಗಿದೆಯೆಂದೋ, ಕುಡಿಯುವ ನೀರಿನ ಸಮಸ್ಯೆ ಇದೆಯೆಂದೋ, ಯಾರೋ ಕಷ್ಟದಲ್ಲಿದ್ದಾರೆ ನೆರವು ನೀಡಲು ಬನ್ನಿ ಎಂದೋ ವಾಟ್ಸಾಪ್ , ಫೇಸ್ಬುಕ್ಕುಗಳಲ್ಲಿ ಮನವಿ ಮಾಡುವುದಿಲ್ಲ. ಅಂಥವರ ಸಂಖ್ಯೆ ಕಡಿಮೆ. ಇವತ್ತು ಯಾವ ಸಣ್ಣ ವ್ಯಾಪಾರಿಯೂ ದಿನಕ್ಕೆ ನೂರು ರೂಪಾಯಿ ಲಾಭ ಆಗಿದೆ ಎಂದು ಹೇಳುವ ಸ್ಥಿತಿಯಲ್ಲಿಲ್ಲ. ಯಾವ ಆಟೋ ದುಡಿಮೆಗಾರನೂ ಇವತ್ತು ಫುಲ್ ಬ್ಯುಸಿ ಎನ್ನುತ್ತಿಲ್ಲ. ಅಂಗಡಿ ಮಾಲೀಕರು ಗ್ರಾಹಕರಿಲ್ಲದೆ ಕಂಗಾಲು. ಕಚೇರಿ, ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ ಆತಂಕದ ಸ್ಥಿತಿ. ಹಾಗಾದರೆ ಇದರ ಲಾಭ ಯಾರಿಗೆ? ಯೋಚನೆ ಮಾಡಬೇಕಾದದ್ದು ಜನರು. ಇಂಥ ಪರಿಸ್ಥಿತಿ ಯಾವುದೋ ಬೆರಳೆಣಿಕೆಯಷ್ಟು ಮಂದಿ ನಿರ್ಮಿಸಿದ್ದು ವಾತಾವರಣ ಕುಲಗೆಡಿಸುವಂತೆ ಮಾಡಿದೆ.

ಬಿ.ಸಿ.ರೋಡ್ ಸಹಿತ ಇಡೀ ಬಂಟ್ವಾಳ ತಾಲೂಕಿನಲ್ಲಿ ಒಂದು ಸಾವಿರ ಪೊಲೀಸರು ಕಳೆದ ಎರಡು ದಿನಗಳಿಂದ ಇದ್ದಾರೆ ಎಂದರೆ ತಮಾಷೆಯ ವಿಷಯವೇನಲ್ಲ. ಒಬ್ಬ ಇನ್ನೊಬ್ಬನೊಂದಿಗೆ ಮಾತನಾಡುವ ಸಂದರ್ಭ ಪಕ್ಕದಲ್ಲೇ ಪೊಲೀಸರು ನಮ್ಮನ್ನು ವೀಕ್ಷಿಸುತ್ತಾರೆ ಎಂದಾದರೆ ನಮ್ಮನಮ್ಮೊಳಗೆ ನಂಬಿಕೆ ಕಳೆದುಕೊಂಡಿದ್ದೇವೆ ಎಂದರ್ಥ. ಸುಮ್ಮನೆ ಯೋಚನೆ ಮಾಡಿ. ನೀವೇನಾದರೂ ಬಿಜಾಪುರ ಆ ಜಿಲ್ಲೆಯ ಹಳ್ಳಿ ಪ್ರದೇಶಕ್ಕೆ ತೆರಳಿ, ಅಲ್ಲಿ ನಾಲ್ಕು ದಿನ ಅವರು ಕೊಟ್ಟ ಊಟ ಮಾಡಿ ಬನ್ನಿ. ದಕ್ಷಿಣ ಕನ್ನಡ ಜಿಲ್ಲೆಯ ಕುಚ್ಚಿಲಕ್ಕಿ ಅನ್ನ ಉಂಡವರಿಗೆ ಉತ್ತರ ಕರ್ನಾಟಕದ ಊಟ ಸೇರುವುದಿಲ್ಲ. ಅಂಥದ್ದೇ ಸನ್ನಿವೇಶ ಈಗ ಎದುರಾಗಿದೆ. ನಮ್ಮೂರಿಗೆ ಬಂದ ಹಾವೇರಿ ಸಹಿತ ಉತ್ತರ ಕರ್ನಾಟಕ ಅಥವಾ ಹೊರಜಿಲ್ಲೆಗಳ ಪೊಲೀಸರು ಹೊತ್ತು ಹೊತ್ತಿನ ಊಟವನ್ನು ಶಾಸ್ತ್ರಕ್ಕಷ್ಟೇ ಮಾಡುತ್ತಿದ್ದಾರೆ. ಇಲ್ಲಿನ ಮಳೆ, ಗಾಳಿ, ಚಳಿಗೆ ಮೈಯೊಡ್ಡಿ ನಿಲ್ಲುತ್ತಿದ್ದಾರೆ. ಇಷ್ಟಕ್ಕೆಲ್ಲ ಅವರು ಕಾರಣ ಎಂದು ಒಬ್ಬರು, ಇವರು ಕಾರಣ ಎಂದು ಮತ್ತೊಬ್ಬರು ಬೆರಳು ತೋರಿಸಬಹುದು. ಆದರೆ ನಾವು ಕಾರಣರಾಗಬಾರದು ಅಷ್ಟೇ.

ಹೀಗಾಗಿ ಸಾಥ್ ಸಾಥ್ ಏಕ್ ಸಾಥ್ ಎಂಬ ಮಾತಿಗೆ ಬಹಳಷ್ಟು ಅರ್ಥ ಧ್ವನಿಸುತ್ತದೆ. ನಾವು ನಾವು ನಂಬಿಕೊಂಡು ಬಂದ ಜಾತಿ, ಮತ, ಪಕ್ಷ ಮತ್ತು ಸಿದ್ಧಾಂತಗಳಡಿಯೇ ಸಾಗೋಣ. ಅದಕ್ಕೆ ಯಾರ ಅಡ್ಡಿಯೂ ಬೇಡ. ಏಕೆಂದರೆ ಎಲ್ಲರ ಪ್ರಣಾಳಿಕೆ, ತತ್ವಗಳೂ ಚೆನ್ನಾಗಿವೆ. ಅನುಸರಿಸುವ ಪ್ರಾಂಜಲ ಮನಸ್ಸು ಬೇಕಷ್ಟೇ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.