ಪ.ಗೋ. ಅಂಕಣ

ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 10: ವೃತ್ತಿಯ ಮೊತ್ತಮೊದಲನೆ ಆಘಾತ

ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). ಪ.ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ ಪ.ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆ.  ಇದು ಪ.ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ ಪ.ಗೋ, ಅವರ ಈ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಸಾಹಿತ್ಯಪ್ರೇಮಿ ಪ.ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (ಪ.ರಾಮಚಂದ್ರ). ಲೇಖನಮಾಲೆಯ 10ನೇ ಕಂತು ಇಲ್ಲಿದೆ.

ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 10: ವೃತ್ತಿಯ ಮೊತ್ತಮೊದಲನೆ ಆಘಾತ
ಒಂದು ವಾರವಿಡೀ, ಅದುವರೆಗೂ ಅಭ್ಯಾಸವಿರದಿದ್ದ ರಾತ್ರೆಯ ಶಿಫ್ಟ್ ಕೆಲಸದ ಕಲಿಕೆಯಲ್ಲಿ ಕಳೆಯಿತು. ನಿರ್ದಿಷ್ಟ ಗಂಟೆಗಳ ನಡುವೆ, ಅಗತ್ಯವಾಗಿ ಬೇಕಾದ ಅವಸರದ ಅನುವಾದ ಕಾರ್ಯದ ಪರಿಚಯವೂ ಆಯಿತು. ಕೊನೆಯ ಗಂಟೆಯಲ್ಲಿ ಅನಂತಸುಬ್ಬರಾಯರು ಕಂಪೋಸಿಂಗ್ ವಿಭಾಗದಲ್ಲಿ ಪೇಜ್ ಕಟ್ಟಿಸುವ ಹೊಣೆ ನಿರ್ವಹಿಸುತ್ತಿದ್ದರು ಎಂದೂ ತಿಳಿಯಿತು.
ಆ ಹೊತ್ತಿನವರೆಗೆ ಮೊಳೆ ಜೋಡಿಸಿ ಪ್ರೂಫ್ ತೆಗೆಸಿದ್ದ ಎಲ್ಲ ಸುದ್ದಿಗಳನ್ನೂ ಒಟ್ಟಿಗೆ ಇಟ್ಟು ನೋಡಿ, ಅವುಗಳ ಸ್ಥಾನ ಮೀಸಲಾತಿ ನಿರ್ಧರಿಸಿ, ಪ್ರತ್ಯೇಕ ಪುಟಗಳಿಗೆ ಅವುಗಳನ್ನು ಹೊಂದಿಸುವ ಉಸ್ತುವಾರಿ ಅವರದು. ಅವರು ಸೂಚಿಸಿದಂತೆ, ಮೊಳೆಗಳ ಸಾಲುಗಳನ್ನು ಎತ್ತಿ ‘ಗ್ಯಾಲಿ’ ತಟ್ಟೆಗಳಲ್ಲಿ ಜೋಡಿಸಿ, ಪುಟಗಳನ್ನು ರೂಪಿಸುವ ಕೆಲಸ ‘ಯಜಮಾನ್’ ಅಪ್ಪಣ್ಣನದು. ಇಬ್ಬರ ಕಾರ್ಯವೈಖರಿಯನ್ನು ಆರಂಭದಲ್ಲಿ ದೂರದಿಂದಲೂ, ಆಮೇಲೆ ಸಮೀಪದಿಂದಲೂ, ನೋಡಿ ಪುಟಗಳ ವಿನ್ಯಾಸವಿಧಾನ ತಿಳಿದುಕೊಳ್ಳಲು ಸಾಧ್ಯವಾಯಿತು.
ಅಷ್ಟು ಹೊತ್ತಿಗೆ ಹಾಜರಿಪಟ್ಟಿಯೊಳಗೆ ನನ್ನ ಹೆಸರು ಸೇರಿಕೊಂಡಿತ್ತು. ಮುಂದಿನ ವಾರದಿಂದ ಹಗಲು (9 ಘಂಟೆಯಿಂದ ಆರಂಭವಾಗುವ) ಮೊದಲನೆ ಶಿಫ್ಟ್ ನಲ್ಲಿ ಕೆಲಸ ಮಾಡಬೇಕೆಂಬ ಆದೇಶವೂ ‘ಲಾಗ್ ಬುಕ್’ನ ಒಳಕ್ಕೆ ಬಂದಿತ್ತು.
ಅಪ್ಪಣೆಯ ಪ್ರಕಾರ ಹಗಲು ಸೇವೆಯ ವಾರದಲ್ಲಿ ಹಾಜರಿ ಹಾಕಿದೆ. ನನ್ನಿಂದ ಕೆಲವೇ ದಿನಗಳ ಅಂತರದಲ್ಲಿ ತಾಯಿನಾಡು ಸೇರಿದ್ದ ವಿ.ಟಿ. ರಾಜಶೇಖರ ಶೆಟ್ಟಿ (ಅನಂತರ ಕುಲನಾಮ, ತೊರೆದು ‘ದಲಿತವಾಯ್ಸ್’ ಪತ್ರಿಕೆಯ ಸಂಪಾದಕರಾಗಿ ಖ್ಯಾತಿ ಪಡೆದ) ಅವರ ಪರಿಚಯವೂ ಆಯಿತು.
ಹಗಲಿನಲ್ಲಿ ಕಾಣಸಿಗುತ್ತಿದ್ದ ಮೇಲ್ವರ್ಗದ ಸಂಪಾದಕೀಯ ಶಾಖಾಪ್ರಮುಖರು ನನ್ನ ಬಗ್ಗೆ ಮೊದಮೊದಲು ಹೆಚ್ಚಿನ ಆಸಕ್ತಿ ತೋರಿಸುತ್ತಿರಲಿಲ್ಲ. ವಹಿಸಿಕೊಟ್ಟ ಕೆಲಸವನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿದರೆ ಅವರಿಗೆ ತೃಪ್ತಿಯಾಗುತ್ತಿತ್ತು. ಆದ್ದರಿಂದ ಕಾರ್ಯಾಲಯದ ಒಳಗಿನ ವೇಳೆಯಲ್ಲಿ, ಸಂಪಾದಕ ರುಮಾಲೆ ಮತ್ತಿತರ ಬಗ್ಗೆ ಹರಡುತ್ತಿದ್ದ ದಂತಕಥೆಗಳ ಸಂಗ್ರಹ, ಸಂಜೆ ಹೊತ್ತಿಗೆ ಸಂಬಳ ಬಾಕಿ ವಸೂಲಿಗಾಗಿ ವಿಶ್ವಕರ್ನಾಟಕ ಗಲ್ಲಿಗೆ ಭೇಟಿ, ಇವುಗಳಿಗೆ ಸಮಯ ಸಿಗುತ್ತಿತ್ತು.
ಪ್ರತಿ ಸಂಜೆ ಎಂಬಂತೆ ಒಟ್ಟು ಹನ್ನೆರಡು ಬಾರಿ ನಡೆದಿದ್ದ ಮುರುಘೇಂದ್ರ ದರ್ಶನದಲ್ಲಿ “ಮತ್ತೆ ಬಾ- ನಾಳೆ ಬಾ- ಹೋಗಿ ಬಾ”ಗಳನ್ನೇ ಕೇಳಿ ಸಾಕಾಗಿತ್ತು. ಕೊನೆಯ ಪ್ರಯತ್ನ ನಡೆದ 13ನೇ ಸಂಜೆ, “ಸಂಬಳ ತೊಗೊಳೋದಕ್ಕೆ ಬಂದ್ರಾ? ಹೋಗ್ರಿ, ಹೋಗ್ರಿ” ಮಾತು ಕೇಳಿ ನನ್ನ ದುಡಿಮೆಯ ಫಲವನ್ನು ನುಂಗಿಹಾಕಿ ಉದ್ಧಾರವಾಗುತ್ತಿಯಾದರೆ ಆಗೆಂದು ಶಪಿಸಿ ಬಂದೆ.
( ಮತ್ತೆ ಕೆಲವೇ ದಿನಗಳಲ್ಲಿ ವಿ.ಕ. ಕಣ್ಣುಮುಚ್ಚಿತು. ಸುರಿಸಲು, ಸೋಗಿನ ಕಂಬನಿ ಕೂಡಾ ನನ್ನಲ್ಲಿ ಉಳಿದಿರಲಿಲ್ಲ).
ತಾಯಿನಾಡು ಪತ್ರಿಕೆಯಲ್ಲಿ, ಮೊತ್ತಮೊದಲು ನನ್ನ ಗಮನ ಸೆಳೆದುದು, ಭಾರತ ಸೇವಾದಳದ ಕಾರ್ಯಕರ್ತರಾಗಿ ಹನುಮಂತಯ್ಯನವರ ನಿಕಟಸಂಪರ್ಕ ಬೆಳೆಸಿಕೊಂಡು ಎಂ.ಎಲ್.ಸಿ. ಪದವಿಯನ್ನೂ ಪಡೆದ ಚಿತ್ರಕಲಾವಿದ ರುಮಾಲೆ ಚನ್ನಬಸವಯ್ಯನವರು, ಪತ್ರಿಕಾಸಂಪಾದಕನ ಹೊಸ ಹೊಣೆಯನ್ನು ನಿಭಾಯಿಸುತ್ತಿದ್ದ ವೈಶಿಷ್ಟ್ಯ.
ಕಚೇರಿ ಕಟ್ಟಡದಲ್ಲೇ ಒಂದು ಕಡೆ ಅವರ ವಾಸದ ಸ್ಥಳ ಪಾತ್ರರ್ವಿಧಿಗಳ ಸೌಕರ್ಯವೂ ಅಲ್ಲೇ. ಬೆಳಗಿನ ಹೊತ್ತು ಬಿ.ಎನ್.ಗುಪ್ತರು ನಡೆಸುವ ಎಡಿಟೋರಿಯಲ್ ಕಾನ್ಫರೆನ್ಸ್ ನಲ್ಲಿ ಮೌನವಾಗಿಯೇ ಕುಳಿತಿದ್ದು ಬರುವ ಅಭ್ಯಾಸ, ಆ ಮೇಲೆ ಸಂಜೆಯವರೆಗೂ ಆಗೊಮ್ಮೆ ಈಗೊಮ್ಮೆ ಸಂಪಾದಕೀಯ ಶಾಖೆಗೆ ಕುಶಲೋಪರಿಗಾಗಿ ಭೇಟಿ, ರಾತ್ರಿಯೂ ಭೇಟಿಯ ಪುನರಾವರ್ತನೆ. ಹನುಮಂತಯ್ಯನವರಿಗೆ ಸಂಬಂಧಿಸಿದಂತೆ ಏನಾದರೂ ಸುದ್ದಿ ಪ್ರಕಟವಾಗಬೇಕಿದ್ದರೆ, ಅಂಥ ಸಂದರ್ಭಗಳಲ್ಲಿ ಮಾತ್ರ ಸಂಬಂಧಪಟ್ಟವರೊಡನೆ ಕೆಲನಿಮಿಷಗಳ ಒತ್ತಡದ ಮಾತುಕತೆ.
ರಾತ್ರೆ ಭೇಟಿಯ ಸಂದರ್ಭಗಳಲ್ಲಿ ಹೆಚ್ಚಾಗಿ, ಪತ್ರಿಕೆಗೆ ‘ತುರ್ತು ಅಗತ್ಯಕ್ಕೆ’ ಹಣ ಕೊಡುತ್ತಿದ್ದ ಬಜಾಜ್ ಎಂಬವರೊಡನೆ ದೂರವಾಣಿ ಸಂಭಾಷಣೆ. ಅದು ಮುಗಿದರೆ, “ಈವತ್ತಿನ ಪೇಪರಿನಲ್ಲಿ ಬ್ಲಾಕ್ ಏನಾದರೂ ಬರುತ್ತಾ?” ಎಂಬ ಪ್ರಶ್ನೆ. ಏನೂ ಇಲ್ಲ ಎಂದರೆ “ನೋಡಿ, ವಿಧಾನಸೌಧ, ವಿನೋಬಾಜಿ, ಡಾಕ್ಟರ್ ಮೋದಿ, ಬಾಲಯೋಗೀಜಿ, ಇದೆಲ್ಲಾ ಬ್ಲಾಕ್ ಗಳೂ ಸ್ಟಾಕಿನಲ್ಲಿ ಇವೆ. ಯಾವುದಾದರೂ ಒಂದು ಹಾಕಿ – ಒಳ್ಳೆದೊಂದು ಹೆಡಿಂಗ್ ಬರೀರಿ – ಅಂತೂ ಒಂದು ಬ್ಲಾಕ್ ಆದರೂ ಬರಬೇಕು ಇವರೇ” ಎಂಬ ಸೌಮ್ಯ ಬೇಡಿಕೆ. ಪಡಿಯಚ್ಚಿನ ಆಯ್ಕೆ – ಅದಕ್ಕೆ ಕೊಡುವ “ಕ್ಯಾಪ್ ಷನ್”ನ ಬರಹ ಮುಕ್ತಾಯವಾದ ಮೇಲಷ್ಟೇ ತನ್ನ ರಾತ್ರಿಯ ಹಸಿತರಕಾರಿಗಳ ಭೋಜನಕ್ಕಾಗಿ ನಿರ್ಗಮನ.
ವಿಧಾನಸೌಧದ ಚಿತ್ರಕ್ಕೆ ತಲೆಬರಹ-ಅಡಿಬರಹಗಳನ್ನು ಬಾರಿಬಾರಿಗೂ ಬರೆದು ಸುಸ್ತು ಹೊಡೆದಿದ್ದ ಸಹಾಯಕ ಸಂಪಾದಕರು ‘ಬಾಗಿಲೊಳು ಕೈಮುಗಿದು ಒಳಗೆ ಬಾ’ ಕವಿತೆಯ ಒಂದು ಸಾಲನ್ನು ಪರಿವರ್ತಿಸಿ, (ವಿಧಾನಸೌಧವನ್ನು) ‘ಕಲೆಯಲ್ಲವೀ ಸೌಧ ಶಿಲೆಯ ಬಲೆಯು’ ಎಂದೂ ವರ್ಣಿಸುವ ‘ದೇವರ ಕೆಲಸ’ ಮಾಡಿದ್ದರು.
ತಾಯಿನಾಡು ಸೇವಾವಧಿಯಲ್ಲೂ ವಿಶೇಷ ಸೃಷ್ಟಿಯನ್ನು ಮೊದಲಿಂದ ಕೊನೆಯವರೆಗೆ ನೋಡುವ ಇನ್ನೊಂದು ಅವಕಾಶ ಸಿಕ್ಕಿತು. ಅದಕ್ಕೂ ಹಿಂದಿನ (ವಿ.ಕ.) ‘ಸೃಷ್ಟಿ’ಗೂ ಇದ್ದ ಒಂದು ವ್ಯತ್ಯಾಸ ಮಾತ್ರ, ಗಮನಾರ್ಹವಾಗಿತ್ತು. ಹಿಂದಿನದರಲ್ಲಿ ಊಹೆ- ಲೆಕ್ಕಾಚಾರಗಳೇ ವರದಿಗಿದ್ದ ಆಧಾರವಸ್ತುಗಳಾದರೆ, ಅಂದಿನದಕ್ಕೆ ಮುಚ್ಚಿಟ್ಟಿದ್ದ ದಾಖಲೆಗಳು ಆಧಾರದ ಆಕರವಾಗಿದ್ದವು.
ಗುಪ್ತರವರು ಆ ಸೃಷ್ಟಿಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದರು. ಅಬಕಾರಿ ಕಂಟಾಕ್ಟ್ ವ್ಯವಹಾರದ ಒಳಹೊರಗುಗಳನ್ನು ಬಹಿರಂಗಗೊಳಿಸಿ( ಪ್ರಮುಖ ದೈನಿಕವೊಂದರ ಮಾಲಿಕವರ್ಗಕ್ಕೆ ಸೇರಿದ ಅಬಕಾರಿ ಸಂಸ್ಥೆಯನ್ನೂ ಹೆಸರಿಸಿ) ಕೆಲವು ದಿನಗಳವರೆಗೆ ವರದಿಗಳ ಧಾರವಾಹಿ ಪ್ರಕಟಣೆಯಾಯಿತು. ಅಬಕಾರಿ ಅವ್ಯವಹಾರಕ್ಕಿಂತ ಹೆಚ್ಚಾಗಿ, ಪತ್ರಿಕೆಯ ಒಡೆಯರ ಕಡೆಗೇ ಗುಪ್ತರ ಗುರಿ ಇತ್ತೆಂಬುದು ವರದಿಗಳಲ್ಲಿ ಸ್ಪಷ್ಟವಾಗುತ್ತಿತ್ತು. ತಾಯಿನಾಡುವಿನ ಪ್ರಸಾರ ಆ ದಿನಗಳಲ್ಲಿ ಹೆಚ್ಚಿರಲೂಬಹುದು.
ಯಾವುದಾದರೂ ಸಂದರ್ಭದಲ್ಲಿ, ಒಂದು ನಿರ್ದಿಷ್ಟ ಕಾರಣಕ್ಕಾಗಿ, ಸುದ್ದಿಗಳನ್ನು ಸೃಷ್ಟಿಸಲೂ ಪತ್ರಿಕೆಗಳಿಗೆ ಸಾಧ್ಯವಿದೆ ಎಂಬ ಮಾತಿನ ನಿದರ್ಶನ ಎರಡನೆಯ ಬಾರಿಗೆ ನನಗೆ ದೊರಕಿತು. ವಾಸ್ತವಿಕ ಹಿನ್ನೆಲೆ ಅಥವಾ ಅಲ್ಪಸ್ವಲ್ಪ ದಾಖಲೆಗಳು ಇದ್ದರಂತೂ, ಅಂಥ ಸುದ್ದಿಗಳನ್ನು ಚಾಕಚಕ್ಯತೆಯಿಂದ ಹಿಗ್ಗಿಸಲೂ ಸಾಧ್ಯವಿದೆಯೆಂದೂ ಗೊತ್ತಾಯಿತು.
ವೆಂಕಣ್ಣ, ಗುಪ್ತ ಅಥವಾ ಅವರ ವರ್ಗಕ್ಕೆ ಸೇರಿದ ಇತರ ಹಲವರ ಧೈರ್ಯ-ಸಾಮರ್ಥ್ಯಗಳನ್ನು ಮೈಗೂಡಿಸಿಕೊಳ್ಳಲು ನನಗೂ ಸಾಧ್ಯವಾಗಬಹುದೆ ?( ಈಗಲ್ಲವಾದರೆ, ಮುಂದೆ ಎಂದಾದರೂ) ಎಂಬ ಆಸೆಯೂ ತಲೆ ಎತ್ತಿತು!
ವಾಸ್ತವಘಟನೆಗಳನ್ನೇ ವಿಸ್ತರಿಸಿ, ಅವುಗಳಿಗೆ ಕಥೆಯ ಹಂದರಗಳನ್ನು ಕೊಟ್ಟು ಪ್ರಕಟಿಸಿದರೆ ಓದುಗರು ಅವನು ಆಸಕ್ತಿಯಿಂದ ಸ್ವೀಕರಿಸುತ್ತಾರೆಯೇ ? ಪರೀಕ್ಷಿಸಿ ನೋಡಬೇಕು ಎಂದುಕೊಂಡು-
ನಡೆದಿದ್ದ  ಒಂದು ಘಟನೆಯ ವರದಿಗಳ  ಹಿನ್ನೆಲೆಯಲ್ಲಿ ಪತ್ತೇದಾರಿ ಕಾದಂಬರಿಯೊಂದನ್ನು ಬರೆದು ಪ್ರಕಟಿಸಿದುದು, ತಾಯಿನಾಡು ಸೇವಾವಧಿಯ ಸಮಯದಲ್ಲೇ.

1957 ರಲ್ಲಿ ಪ.ಗೋಪಾಲಕೃಷ್ಣ ಅವರು “ಜಾಪ್ರಿ” ಕಾವ್ಯನಾಮದಲ್ಲಿ ಬರೆದ ಗನ್ ಬೋ ಸ್ಟ್ರೀಟ್ ಎಂಬ ಪತ್ತೇದಾರಿ ಕಾದಂಬರಿಯ ಬಗ್ಗೆ 1950-1960 ರ ದಶಕಗಳಲ್ಲಿ ತಾಯಿನಾಡು ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದಾಗ ಹಿರಿಯ ಕನ್ನಡ ಪತ್ರಕರ್ತ ಹೆಚ್. ಆರ್. ನಾಗೇಶರಾವ್ ಅವರು ತಾಯಿನಾಡು ಪತ್ರಿಕೆಯ ದಿನಾಂಕ 01-11-1957 ರ ಸಂಚಿಕೆಗೆ ಬರೆದ ಲೇಖನ.

ಆ ಪ್ರಕಟಣೆ ಮತ್ತು ಅನಂತರ (ಶೀಕೃಪಾನ ಪ್ರೋತ್ಸಾಹದಿಂದ) ನಮ್ಮ ಪತ್ರಿಕೆಗೇ ಬರೆದುಕೊಟ್ಟ ಹತ್ತು ಹಲವು ಲೇಖನಗಳು ನನ್ನಲ್ಲಿ ಬೆಳೆಯುತ್ತಿದ್ದ ಅಭದ್ರತೆಯ ಭಯವನ್ನು ಕ್ರಮೇಣ ನೀಗಿಸಿದವು.
ಹೀಗಾದರೂ “ಇನ್ನು ಕೆಲವು ವರ್ಷಗಳವರೆಗೆ ಪತ್ರಿಕೋದ್ಯಮದಲ್ಲಿ ದಿನಗಳೆಯಬಹುದು” ಎಂಬ ತೀರ್ಮಾನಕ್ಕೆ ನಾನು ಬಂದು ಮುಟ್ಟುವ ಒಂದೆರಡು ವಾರಗಳ ಮೊದಲು-
“ಬಾಯಾರಿಕೆಯಾದರೆ ಮಸಿ ಕುಡಿದು, ಹಸಿವೆಯಾದರೆ ನ್ಯೂಸ್ ಪ್ರಿಂಟ್ ಕಾಗದವನ್ನೇ ಹರಿದು ತಿನ್ನುವವನೇ ಪತ್ರಿಕೋದ್ಯಮಿ” ಎಂದು ನಾನು ಒಂದೆಡೆ ಬರೆದಿದ್ದುದನ್ನು ನಿದರ್ಶನ ರೂಪದಲ್ಲಿ ತೋರಿಸುವ ಘಟನೆಯೊಂದು ನಡೆಯಿತು.
ಮೊದಲೇ ಹೇಳಿದಂತೆ ತಾಯಿನಾಡುವಿನಲ್ಲಿ ನಾವು ಬರೆಯಲು ಮಸಿಕುಡಿಕೆ, ಲೇಖನಿ (ಸ್ಟೀಲ್ ನಿಬ್ ಪೆನ್ ಹೋಲ್ಡರ್)ಗಳನ್ನು ಉಪಯೋಗಿಸುತ್ತಿದ್ದೆವು.
ಆಗಾಗ ಖಾಲಿಯಾಗುತ್ತಿದ್ದ ಮಸಿಕುಡಿಕೆಗಳಲ್ಲಿ ತುಂಬಿಸುವ ಸಲುವಾಗಿ ಶಾಯಿತುಂಬಿದ ದೊಡ್ಡ ಬಾಟಲಿಗಳನ್ನೂ ನಮ್ಮ ಕೈಗೆಟಕುವ ದೂರದಲ್ಲಿ ನೆಲದ ಮೇಲೆ ಇಡಲಾಗುತ್ತಿತ್ತು.
ರಾತ್ರಿಯ ಹೊತ್ತಿನ ಕೆಲಸದಲ್ಲಿ ನನಗೆ ಅಗತ್ಯವಾಗಿದ್ದ ನೀರನ್ನೂ ಒಂದು ಬಾಟಲಿಯಲ್ಲಿ ತುಂಬಿಸಿ ನಾನು ತಂದಿಟ್ಟುಕೊಳ್ಳುತ್ತಿದ್ದೆ.
ಒಂದು ರಾತ್ರಿ ಹಾಗೆ ತಂದಿದ್ದ ನೀರಿನ ಬಾಟಲಿಯ ಪಕ್ಕದಲ್ಲೇ ಶಾಯಿಯ ಬಾಟಲಿ ಇತ್ತು. ಯಾವುದೋ ಮರೆವಿನಲ್ಲಿ ನಾನು ಬಾಟಲಿಯತ್ತ ಕೈಚಾಚಿ ಎತ್ತಿ ಕುಡಿದುದು “ನೀರಲ್ಲ”ವೆಂದು ನನಗೆ ತಿಳಿದದ್ದು, ಆ ಕಹಿದ್ರವದ ಸ್ವಲ್ಪಾಂಶ ನನ್ನ ಗಂಟಲೊಳಗೆ ಹೋದ ನಂತರವೇ!
ಅಂತಹುದೂ ಸೇರಿದಂತೆ ಹಲವಾರು ಅನುಭವಗಳನ್ನು ಗಳಿಸಿಕೊಂಡು, ನಾನು ವೃತ್ತಿಯಲ್ಲಿ ಮುಂದುವರಿಯುವ ಧೈರ್ಯ ಬಂದಿತು ಎನ್ನುವ ಹಂತಕ್ಕೆ ಬಂದಾಗ-
ವೃತ್ತಿಯ ಮೊತ್ತಮೊದಲನೆ ಆಘಾತ ನನಗಾಯಿತು.
‘ನೌಕರಿಯಿಂದ ನಿನ್ನನ್ನು ಕಿತ್ತುಹಾಕಲಾಗಿದೆ’ ಎಂಬ ‘ನೋಟೀಸ್’ ಕಚೇರಿಯಲ್ಲಿ ನಾನಿದ್ದಲ್ಲಿಗೇ ಬಂದು ಮುಟ್ಟಿತು.
ಹೇಗೆ ? ಯಾಕೆ ? ಎಂಬ ಪ್ರಶ್ನೆಗಳಿಗೆ ಕೊಡಬೇಕಾದ ಉತ್ತರ ಸ್ವಲ್ಪ ದೀರ್ಘವಾಗಬೇಕಾದುದು ಅನಿವಾರ್ಯ.
(ಮುಂದಿನ ಭಾಗದಲ್ಲಿ)

(2005ರಲ್ಲಿ ಪುಸ್ತಕವಾಗಿ ಪ್ರಕಟಗೊಂಡ ಪದ್ಯಾಣ ಗೋಪಾಲಕೃಷ್ಣ ಅವರ ಅಂಕಣ ಬರಹಗಳ ಮರುಪ್ರಕಟಣೆ ಇದು.)

Click to read older posts:

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ