ಬಿ.ಸಿ.ರೋಡ್ ನ ಲಾಂಡ್ರಿಗೆ ನುಗ್ಗಿ ಅದರ ಮಾಲೀಕನ ಪುತ್ರ ಶರತ್ ಅವರ ಮೇಲೆ ಮಾರಣಾಂತಿಕ ದಾಳಿಯ ವಿಚಾರಕ್ಕೆ ಸಂಬಂಧಿಸಿ ತನಿಖೆ ತೀವ್ರಗೊಂಡಿದ್ದು, ಇದಕ್ಕಾಗಿ ಆರು ತಂಡಗಳನ್ನು ರಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಇದಕ್ಕಾಗಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಮೂರು ತಂಡಗಳು ಕಾರ್ಯಾಚರಿಸಿದರೆ, ಜಿಲ್ಲೆಯ ಇತರ ವ್ಯಾಪ್ತಿಯಲ್ಲಿ ಮೂರು ತಂಡಗಳು ಕಾರ್ಯಾಚರಿಸಲಿವೆ ಎಂದು ಎಸ್ಪಿ ಬಂಟ್ವಾಳದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.
ಈಗಾಗಲೇ ಹಲವರನ್ನು ವಿಚಾರಿಸಲಾಗಿದೆ. ಮಹತ್ವದ ಸುಳಿವು ಇನ್ನಷ್ಟೇ ಸಿಗಬೇಕಾಗಿದೆ ಎಂದ ಅವರು, ಶರತ್ ಅವರ ಸ್ಥಿತಿ ನಿನ್ನೆಯಂತೆಯೇ ಇದೆ ಎಂದು ಮಾಹಿತಿ ನೀಡಿದರು.
ಪೊಲೀಸ್ ಸರ್ಪಗಾವಲು:
ಒಟ್ಟು 1000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ನಲ್ಲಿ ತೊಡಗಿದ್ದಾರೆ. ಇವರ ಮೇಲುಸ್ತುವಾರಿಗೆ 100 ಮಂದಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ 10 ಡಿಆರ್, 12 ಕೆ.ಎಸ್.ಆರ್.ಪಿ ತುಕಡಿಗಳು ಕಾರ್ಯಾಚರಣೆ ನಡೆಸುತ್ತಿವೆ. ಎಂದು ಎಸ್ಪಿ ರೆಡ್ಡಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಗುರುವಾರ ಪರಿಸ್ಥಿತಿಯನ್ನು ಅವಲೋಕಿಸಲು ಬಂಟ್ವಾಳ ನಗರ ಠಾಣೆಯಲ್ಲಿ ಎಸ್ಪಿ ಸಭೆ ನಡೆಸಿದರು. ಈ ಸಂದರ್ಭ ಪ್ರಭಾರ ಅಡಿಷನಲ್ ಎಸ್ಪಿ ವಿಷ್ಣವರ್ಧನ್, ಡಿವೈಎಸ್ಪಿ ರವೀಶ್ ಸಹಿತ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಶೇಷವಾಗಿ ಬಿ.ಸಿ.ರೋಡ್ ನಲ್ಲಿ ಪೊಲೀಸ್ ಬಂದೋಬಸ್ತ್ ಎಂದಿಗಿಂತಲೂ ಜಾಸ್ತಿ ಇದೆ. ಶುಕ್ರವಾರ ಪ್ರತಿಭಟನೆಗೆ ಕರೆ ನೀಡಿರುವುದು ಹಾಗೂ ಸೆ.144ರನ್ವಯ ನಿಷೇಧಾಜ್ಞೆ ಜಾರಿಯಲ್ಲಿರುವುದು ಇದಕ್ಕೆ ಕಾರಣ.