ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರಾಧಿಕಾರ ಅಭಿವೃದ್ಧಿಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಬಿ.ಸಿ.ರೋಡಿನ ಆಟೋ ಚಾಲಕರು ಮತ್ತು ಸಾರ್ವಜನಿಕರು ಭಿಕ್ಷೆ ಬೇಡುವ ಮೂಲಕ ಹಣ ಸಂಗ್ರಹಿಸಿ ಬಿ.ಸಿ.ರೋಡ್ ಸರ್ವೀಸ್ ರಸ್ತೆ ರಿಪೇರಿಯನ್ನು ಶನಿವಾರ ನಡೆಸಿದರು.
ರಸ್ತೆಗೆ ಸಂಬಂಧಿಸಿದ ಇಲಾಖೆಯಾದ ಎನ್.ಎಚ್.ಎ.ಐ ವಿಳಂಬಗತಿಯಲ್ಲಿ ಕೆಲಸ ಮಾಡುತ್ತಿರುವ ಕಾರಣ ಸಾರ್ವಜನಿಕರು ಹಾಗೂ ವಾಹನ ಸವಾರರು ತೊಂದರೆಗೆ ಒಳಗಾಗಿದ್ದರು. ಇದನ್ನು ಕಂಡು ಬಿ.ಸಿ.ರೋಡಿನ ಕೆಲ ಆಟೊ ರಿಕ್ಷಾ ಚಾಲಕ, ಮಾಲೀಕರು ಹಾಗೂ ಸಾರ್ವಜನಿಕರು ಶನಿವಾರ ಒಟ್ಟಾದರು. ಬೆಳಗ್ಗೆ ಬಸ್ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಹಾಗೂ ಸ್ಥಳೀಯ ವ್ಯಾಪಾರಸ್ಥರಿಂದ ಹಣ ಸಂಗ್ರಹಿಸಿದರು.
’ಭಿಕ್ಷೆ ಬೇಡಿ ರಸ್ತೆ ರಿಪೇರಿ ಮಾಡಲಾಗುವುದು’ ಎಂಬ ನಾಮಫಲಕವನ್ನು ಹಿಡಿದುಕೊಂಡ ಬ್ಯಾನರ್ ಜೊತೆ ತಿರುಗಾಟ ನಡೆಸಿ, ಬಳಿಕ ಜೆಸಿಬಿಯೊಂದನ್ನು ತಂದು, ಜಲ್ಲಿಯನ್ನು ಹಾಕಿಸಿ ರಸ್ತೆಯನ್ನು ಹದಗೊಳಿಸುವ ಕಾರ್ಯ ನಡೆಸಿದರು. ಈ ಸಂದರ್ಭ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಯಿತು. ಬಿ.ಸಿ.ರೋಡ ನ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ವಸಂತ ಕುಮಾರ್ ಮಣಿಹಳ್ಳ, ಕಾರ್‍ಯದರ್ಶಿ ಚಂದ್ರಶೇಖರ್, ಟೆಂಪೋ ಚಾಲಕರ ಸಂಘದ ಅದ್ಯಕ್ಷ ಕೃಷ್ಣ ಅಲ್ಲಿಪಾದೆ, ಕಾರ್‍ಯದರ್ಶಿ ನಾರಾಯಣ, ಗೌರವಾಧ್ಯಕ್ಷ ಸದಾನಂದ ನಾವೂರು ಮತ್ತಿತರರು ಉಪಸ್ಥಿತರಿದ್ದರು.
ಬಿರುಮಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆ ರಸ್ತೆಪಕ್ಕ ಕಾಂಕ್ರೀಟ್ ಚರಂಡಿಯನ್ನು ಮಾಡಿ ಅದಕ್ಕೆ ಸ್ಲ್ಯಾಬ್ ಹಾಕುವ ಕೆಲಸವನ್ನು ಮಳೆಗಾಲ ಆರಂಭಗೊಂಡ ಬಳಿಕ ನಡೆಸಿದ್ದು ಮತ್ತಷ್ಟು ಸಮಸ್ಯೆ ಉಂಟುಮಾಡಿತ್ತು. ರಸ್ತೆಯಲ್ಲಿ ಅತಿ ದೊಡ್ಡ ಹೊಂಡಗಳು ಕಾಣಿಸತೊಡಗಿದ್ದವು. ಮಳೆ ಧಾರಾಕಾರವಾಗಿ ಸುರಿಯುತ್ತಿರುವ ಸಂದರ್ಭ ರಸ್ತೆಯಲ್ಲೆಲ್ಲ ಕೆಸರು ಮಣ್ಣು ಕಂಡುಬಂದವು. ಹಲವು ಚಿಕ್ಕಪುಟ್ಟ ಅಪಘಾತಗಳೂ ಸಂಭವಿಸಿದ್ದವು.
ವೀಡಿಯೋ ವರದಿಗೆ: