ಕಲ್ಲಡ್ಕ

ನಮಗೆ ರಕ್ಷಣೆ ನೀಡಿ: ಕಲ್ಲಡ್ಕ ಪೇಟೆ ವ್ಯಾಪಾರಸ್ಥರ ಮನವಿ

ಅಂಗಡಿ ಮುಂಗಟ್ಟುಗಳು ಯಾವಾಗ ಬಂದ್ ಆಗುತ್ತದೋ ಎಂಬ ಆತಂಕ ಉಂಟಾಗಿದೆ. ಪ್ರತಿ ಬಾರಿಯೂ ಗಲಭೆಗಳಾದಾಗ ಅದರಲ್ಲಿ ಭಾಗಿಗಳಾದವರು ತಪ್ಪಿಸಿಕೊಂಡು ಅಲ್ಲಿಂದ ಹೋಗುತ್ತಾರೆ. ಬಳಿಕ ಇರುವವರು ಅಂಗಡಿ ಮಾಲೀಕರು ಮತ್ತು ಅದರಲ್ಲಿ ಕೆಲಸ ಮಾಡುವವರು ಮಾತ್ರ. ನಮಗೆ ರಕ್ಷಣೆ ಬೇಕು.

ಹೀಗಂದು ಅಳಲು ತೋಡಿಕೊಂಡವರು ಕಲ್ಲಡ್ಕ ಪೇಟೆಯ ಹಿಂದು ವರ್ತಕರ ಸಂಘದ ಸದಸ್ಯರು.

ಕಲ್ಲಡ್ಕದಲ್ಲಿ ಕಳೆದ ಒಂದು ತಿಂಗಳಿಂದ ಜನಸಂಚಾರ ಕಡಿಮೆ, ವ್ಯಾಪಾರವೂ ಕಡಿಮೆ. ಅದರೊಂದಿಗೆ ನಮಗೂ ಆತಂಕ. ನಮಗೆ ರಕ್ಷಣೆ ನೀಡಿ ಎಂದು ಬಿ.ಸಿ.ರೋಡ್ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖ ಮೋನಪ್ಪ ದೇವಸ್ಯ ಹೇಳಿದರು.

ನಾವು ಕಲ್ಲಡ್ಕ ಪೇಟೆಯಲ್ಲಿ ಸಣ್ಣ ದೊಡ್ಡ ಅಂಗಡಿಗಳು ಹಾಗೂ ಹೋಟೆಲ್ ಇತ್ಯಾದಿ ವ್ಯಾಪಾರ ಮಾಡಿಕೊಂಡಿರುವವರು. ಹಲವಾರು ವರ್ಷಗಳಿಂದ ವ್ಯಾಪಾರ ಮಾಡುತ್ತಾ ಬಂದಿದ್ದೇವೆ. ಕಲ್ಲಡ್ಕದಲ್ಲಿ ಈವರೆಗೆ ನಡೆದ ಘಟನೆಗಳೆಲ್ಲವೂ ಕೆಲವೊಂದು ವ್ಯಕ್ತಿಗಳ ನಡುವೆ ನಡೆದ ಘಟನೆಗಳಷ್ಟೇ. ಕೋಮುದ್ವೇಷದ ಘಟನೆಗಳಲ್ಲ. ಘಟನೆ ನಡೆದ ಬಳಿಕ ದುಷ್ಕರ್ಮಿಗಳಿಂದ ಅಂಗಡಿ ಮಾಲೀಕರಿಗೆ, ಅಂಗಡಿಗೆ ತೊಂದರೆ ಆಗಿದೆ. ಅದಾದ ಬಳಿಕ ರಾಜಕೀಯ ಪ್ರೇರಿತವಾಗಿ ಕೋಮು ಗಲಭೆ ಎಂದು ಬಿಂಬಿತವಾಗಿದೆ. ದಿಕ್ಕು ತೋಚದೆ ಹೋಗಲು ವಾಹನಗಳು ಇಲ್ಲದೆ ನಿಂತಿರುವಾಗ ಪೊಲೀಸರಿಂದ ಲಾಠಿ ಪೆಟ್ಟು ತಿಂದು ಆಸ್ಪತ್ರೆಗೆ ಸೇರಿದ ಸಂದರ್ಭವೂ ಇದೆ ಎಂದು ಅಳಲು ತೋಡಿಕೊಂಡರು.

ಸಾರ್ವಜನಿಕರಿಗೆ ರಕ್ಷಣೆ ಕೊಡಬೇಕಾದ ಪೊಲೀಸರಿಗೆ ಸೂಕ್ತ ನಿರ್ದೇಶಗಳಿಲ್ಲದೆ ಅಮಾಯಕರಿಗೆ ತೊಂದರೆಯಾದ ಸಂದರ್ಭವೇ ಜಾಸ್ತಿ. ಅಂಗಡಿ ಮಾಲೀಕರು ನಿಲ್ಲಿಸಿದ ವಾಹನಗಳನ್ನು ಪುಡಿಮಾಡುವುದು, ಅಂಗಡಿಗಳನ್ನು ಧ್ವಂಸಗೊಳಿಸುವುದೂ ಇದರಲ್ಲಿ ಸೇರಿದೆ. ಇಂಥ ಎಲ್ಲ ಘಟನೆ ನಡೆದಾಗ ಬಲಿಪಶುಗಳಾಗುವುದು ಅಂಗಡಿ ಮಾಲೀಕರು ಎಂದು ಹೇಳಿದ ಅವರು, ಆತಂಕದ ನಡುವೆಯೇ ವ್ಯಾಪಾರ ಮಾಡಬೇಕಾದ ದುಸ್ಥಿತಿಗೆ ಇಂದು ಕಲ್ಲಡ್ಕ ತಲುಪಿದೆ. ಅಂಗಡಿ ಮಾಲೀಕರ ನಷ್ಟದ ಹೊರೆಯನ್ನು ಸ್ವತ: ವಹಿಸಬೇಕಾಗುತ್ತದೆ. ಹೀಗಾಗಿ ಅಂಗಡಿಗಳಿಗೆ ಮತ್ತು ವಾಹನಗಳಿಗೆ ತೊಂದರೆ ಕೊಡುವವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಯೊಬ್ಬ ವ್ಯಾಪಾರಸ್ಥರು ತಮ್ಮ ಜೀವನ ನಿರ್ವಹಣೆಗೋಸ್ಕರ ದುಡಿಯುತ್ತಿದ್ದು, ಯಾವುದೇ ಗಲಭೆಗಳಾದಾಗ ಪೊಲೀಸರು ಅಂಗಡಿ ಮಾಲೀಕರಿಗೆ ಮತ್ತು ಅಂಗಡಿಗಳಿಗೆ ಮತ್ತು ವಾಹನಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪೂವಪ್ಪ ಟೈಲರ್, ಯತೀನ್ ಕುಮಾರ್, ವಿಠಲ ಪ್ರಭು, ಚಂದ್ರಶೇಖರ್, ನರಸಿಂಹ ನಾಯಕ್, ಚಿತ್ತರಂಜನ್, ಶ್ರೀನಿವಾಸ, ಕರುಣಾಕರ ದಾಸ್ ಮೊದಲಾದವರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ