ತಾಲೂಕಿನ ಆಯಕಟ್ಟಿನ ಜಾಗಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸ್ ಸರ್ಪಗಾವಲು ಇರಿಸಲಾಗಿದೆ. ತಪಾಸಣೆ ಸಂದರ್ಭ ಯಾರಲ್ಲಾದರೂ ಮಾರಕಾಸ್ತ್ರ ಸಹಿತ ಯಾವುದೇ ಆಯುಧ ಪತ್ತೆಯಾದಲ್ಲಿ ಅಂಥವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಹೇಳಿದ್ದಾರೆ.
ಬುಧವಾರ ಬಂಟ್ವಾಳ ನಗರ ಠಾಣೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಒಂದು ತಿಂಗಳಿಂದ ಬಂಟ್ವಾಳ ಪರಿಸರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಬಂದೋಬಸ್ತ್ ಮತ್ತು ತನಿಖೆಯ ಪೂರ್ಣ ಹೊಣೆಗಾರಿಕೆಯನ್ನು ಖುದ್ದು ತಾನೆ ವಹಿಸಿದ್ದು, ಇಲ್ಲೇ ಮೊಕ್ಕಾಂ ಹೂಡುತ್ತೇನೆ ಎಂದರು.
ಇತ್ತೀಚಿನ ದಿನಗಳಲ್ಲಿ ಪೊಲೀಸರಿಗೆ ಸವಾಲು ಹಾಕುವಂಥ ಪ್ರಕ್ರಿಯೆಗಳು ನಡೆಯುತ್ತಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಜಾತಿ, ಧರ್ಮದ ಹೆಸರಿನ ಸಂಘಟನೆಗಳು ಶಾಂತಿ ಕಾಪಾಡಲು ಅವಕಾಶ ನೀಡಬೇಕು. ಯಾವುದೇ ಅನುಮಾನಗಳು ಇದ್ದಲ್ಲಿ ಸಂಘಟನೆ ಮುಖಂಡರು ತನ್ನನ್ನು ನೇರವಾಗಿ ಭೇಟಿಯಾಗಿ ಚರ್ಚೆ ನಡೆಸಲು ಮುಕ್ತ ಅವಕಾಶ ಇದೆ ಎಂದ ಐಜಿಪಿ, ಅನುಮಾನದ ಆಧಾರದಲ್ಲಿ ಯಾರ ಮೇಲೂ ಕೈಮಾಡುವ ದುಸ್ಸಾಹಸ ಸಲ್ಲದು ಎಂದು ಎಚ್ಚರಿಸಿದರು.
ಕಲ್ಲಡ್ಕ, ಮಾಣಿ, ಬಿ.ಸಿ.ರೋಡ್, ಕೈಕಂಬ, ಫರಂಗಿಪೇಟೆ, ಬಂಟ್ವಾಳ ಪರಿಸರದಲ್ಲಿ ಪರಿಸ್ಥಿತಿ ಹತೋಟಿಗೆ ತರುವ ನಿಟ್ಟಿನಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಜನರ ಆಸ್ತಿ ಪಾಸ್ತಿ ಹಾಗೂ ಶಾಂತಿ ಕಾಪಾಡುವುದು ಪೊಲೀಸರ ಹೊಣೆಗಾರಿಕೆಯಾಗಿದ್ದು, ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದ ಅವರು ಯಾವುದನ್ನೂ ಕೋಮು ಭಾವನೆಯಲ್ಲಿ ಗಮನಿಸಬೇಡಿ ಎಂದು ಮನವಿ ಮಾಡಿದರು.
ಊಹಾಪೋಹಗಳಿಗೆ ಕಿವಿಗೊಡಬೇಡಿ:
ಪ್ರಸಕ್ತ ಸಮಯದಲ್ಲಿ ಹರಡುವ ವದಂತಿ, ಊಹಾಪೋಹಗಳಿಗೆ ಕಿವಿಗೊಡಬೇಡಿ. ಕಳೆದ ಒಂದು ತಿಂಗಳಿನಿಂದ ಪೊಲೀಸರು ಇಲ್ಲೇ ಬೀಡುಬಿಟ್ಟಿದ್ದಾರೆ. ಅವರಿಗೂ ಸಂಸಾರವಿದೆ. ಠಾಣೆಗೆ ಸಮಸ್ಯೆ ಹೇಳಿಕೊಂಡು ಬರುವಂಥ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಅಸಾಧ್ಯವಾಗುತ್ತಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಿ ಎಂದರು.