ಒಂದೆಡೆ ಕಲ್ಲಡ್ಕ ಘಟನೆ ಹಿನ್ನೆಲೆಯಲ್ಲಿ ಸೆ.144ರನ್ವಯ ನಿಷೇಧಾಜ್ಞೆ ಮುಂದುವರಿದಿದೆ. ಮಳೆ, ಬಿಸಿಲೆನ್ನದೆ ಎಲ್ಲೆಂದರಲ್ಲಿ ಪೊಲೀಸರು ಕಣ್ರೆಪ್ಪೆ ಮಿಟುಕಿಸದೆ ಕಾವಲು ಕಾಯುತ್ತಾ ಇದ್ದಾರೆ. ಇನ್ನೊಂದೆಡೆ ಘಟನೆ ಕುರಿತು ದಿನಕ್ಕೊಂದರಂತೆ ಆರೋಪ, ಪ್ರತ್ಯಾರೋಪಗಳು ಕೇಳಿಬರುತ್ತಿವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವೈಯಕ್ತಿಕ ಟೀಕೆಯವರೆಗೆ ಹೋಗಿದೆ.
ಬಿಜೆಪಿ, ಮತ್ತು ಎಸ್.ಡಿ.ಪಿ.ಐ ಪಕ್ಷಗಳು ಹಾಗೂ ವಿವಿಧ ಸಮುದಾಯದ ಸಂಘಟನೆಗಳು ಘಟನೆ ಸಂದರ್ಭ ಪೊಲೀಸರು ವರ್ತಿಸಿದ ಕುರಿತು ಕೆಲವು ದಿನಗಳಿಂದಲೇ ಹೇಳಿಕೆಗಳನ್ನು ನೀಡುತ್ತಾ ಇದ್ದಾರೆ. ಕಲ್ಲಡ್ಕದಲ್ಲಿ ನಡೆದ ಶಾಂತಿಸಭೆಯಲ್ಲೂ ಇದು ವ್ಯಕ್ತವಾಗಿತ್ತು. ಎಲ್ಲವನ್ನೂ ಆಲಿಸಿದ ಜಿಲ್ಲಾಧಿಕಾರಿ ಡಾ. ಜಗದೀಶ್ ಮತ್ತು ಎಸ್ಪಿ ಭೂಷಣ್ ಬೊರಸೆ, ನಮ್ಮಿಂದ ತಪ್ಪಾಗಿದ್ದರೆ ಅದರ ವಿಮರ್ಶೆಯನ್ನು ಕೂಡ ಮಾಡುತ್ತೇವೆ. ನೀವು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುವುದನ್ನು ನಿಲ್ಲಿಸಿ, ಸೌಹಾರ್ದ ಕಾಪಾಡಿ ಎಂದಿದ್ದರು.
ಅದಾದ ಮರುದಿನ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಬಿಜೆಪಿ ಮತ್ತು ಎಸ್.ಡಿ.ಪಿ.ಐ ಪಕ್ಷಗಳು ಘಟನೆ ನಿರ್ವಹಿಸುವಲ್ಲಿ ರಾಜ್ಯ ಸರಕಾರದ ವೈಫಲ್ಯವಿದೆ ಎಂದು ಆಪಾದಿಸಿದರು. ಮರುದಿನ ಸಚಿವ ರೈ ಎಸ್ಪಿ ಭೂಷಣ್ ಜಿ. ಬೊರಸೆ ಅವರಿಗೆ ಕಲ್ಲಡ್ಕ ಡಾ. ಪ್ರಭಾಕರ ಭಟ್ ಅವರನ್ನು ಬಂಧಿಸುವಂತೆ ಹೇಳಿದ್ದಾರೆ ಎಂದು ಉಲ್ಲೇಖಿಸಲಾದ ವಿಡಿಯೋ ತುಣುಕುಗಳು ವಾಟ್ಸಾಪ್ ನಲ್ಲಿ ಹರಡಿ, ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಈ ಸಂದರ್ಭ ಮತ್ತೆ ಆರೋಪ, ಪ್ರತ್ಯಾರೋಪಗಳು ನಡೆದವು.
ಇದರ ಕುರಿತು ಇಬ್ಬರ ಹೇಳಿಕೆ ಈ ರೀತಿ ಇದೆ.
ಸಚಿವ ಬಿ.ರಮಾನಾಥ ರೈ
ಪೊಲೀಸ್ ಇಲಾಖೆಯವರು ನಿಷ್ಪಕ್ಷಪಾತವಾಗಿ ಕೆಲಸ ಮಾಡದೇ ಇದ್ದರೆ, ನನ್ನ ಮೇಲೆ ಆರೋಪಗಳು ಬರುತ್ತವೆ. ಹಿಂದುವಿರಲಿ, ಮುಸ್ಲಿಂ ಇರಲಿ ಯಾವುದೇ ಸಮುದಾಯವೂ ಮತೀಯವಾದವನ್ನು ಮಾಡುವುದು ಸರಿಯಲ್ಲ. ಪೊಲೀಸರು ತನಿಖೆಯನ್ನು ಸರಿಯಾಗಿ ನಡೆಸದೇ ಇದ್ದರೆ ನಮ್ಮನ್ನು ಗುರಿ ಮಾಡಲಾಗುತ್ತದೆ. ನಾನು ಯಾವುದೇ ಮತೀಯವಾದಕ್ಕೆ ಪ್ರೋತ್ಸಾಹ ನೀಡುವವನಲ್ಲ.
ಕಲ್ಲಡ್ಕ ಪ್ರಭಾಕರ ಭಟ್
ನಾನು ಕೋಮು ಪ್ರಚೋದನೆ ಮಾಡಿರುವುದಕ್ಕೆ ದಾಖಲೆ ಇದ್ದರೆ ತೋರಿಸಲಿ. ಅವರದೇ ಸರಕಾರ ಇದೆ. ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಿ.
ನಮಗೆ ದ್ವೇಷಸಾಧನೆ, ಪ್ರತಿಕಾರ ತೀರಿಸುವುದು , ಹಿಂಸೆ ಬೇಕಾಗಿಲ್ಲ. ಕಲ್ಲಡ್ಕದಲ್ಲಿ ಹಿಂದು ಮುಸಲ್ಮಾನ ನಾಗರಿಕರೆಲ್ಲರೂ ಪರಸ್ಪರ ಸೌಹಾರ್ದದಿಂದ ಇದ್ದೇವೆ. ನಮ್ಮಲ್ಲಿ ಯಾವುದೇ ಘರ್ಷಣೆ ಇಲ್ಲ. ಯಾರೋ ಕೆಲವರು ಸಮಸ್ಯೆಯನ್ನು ಸೃಷ್ಟಿಸಿದ್ದಾರೆ. ಕಲ್ಲಡ್ಕ ಶ್ರೀರಾಮ ಮಂದಿರವೇ ಬೇರೆ, ವಾಣಿಜ್ಯ ಸಂಕೀರ್ಣವೇ ಬೇರೆ.
ದೂರು, ಹೇಳಿಕೆ:
ಸಚಿವರ ಹೇಳಿಕೆಯನ್ನು ಖಂಡಿಸಿ ಬಿಜೆಪಿಯ ಮುಖಂಡ ರಾಜೇಶ್ ನಾಯ್ಕ್ ಉಳೇಪಾಡಿ, ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಕಾರ್ಯದರ್ಶಿ ಮೋನಪ್ಪ ದೇವಸ್ಯ, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ದಿನೇಶ್ ಅಮ್ಟೂರು ಹೇಳಿಕೆ ನೀಡಿದರು. ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ದಿನೇಶ್ ಅಮ್ಟೂರು ಸಚಿವರ ಹೇಳಿಕೆ ವಿರುದ್ಧ ಬಂಟ್ವಾಳ ನಗರ ಠಾಣೆಗೆ ದೂರು ನೀಡಿ ಸೂಕ್ತ ತನಿಖೆಗೆ ಒತ್ತಾಯವನ್ನೂ ಮಾಡಿದ್ದಾರೆ.
ಹೀಗೆ ಕಲ್ಲಡ್ಕದಲ್ಲಿ ಮೇ.26 ಮತ್ತು ಜೂನ್.13ರಂದು ನಡೆದ ಘಟನೆಗಳು ವಿವಿಧ ಆಯಾಮಗಳನ್ನು ಪಡೆದುಕೊಂಡಿದೆ.
ಕ್ಷಣ ಮಾತ್ರದಲ್ಲಿ ಸುದ್ದಿಗಳು ಹರಡುವುದು, ಹರಡಿಸುವುದು ಸುಲಭ. ಆದರೆ ರೋಚಕತೆಯನ್ನು ಒದಗಿಸುವುದು ಬಂಟ್ವಾಳನ್ಯೂಸ್ ಉದ್ದೇಶವಲ್ಲ. ಯಾವುದೇ ಪಕ್ಷ, ಸಂಘಟನೆಗಳಿರಲಿ, ತೀರಾ ವೈಯಕ್ತಿಕ ಆಪಾದನೆಗಳನ್ನು ಮಾಡಲು ಈ ಜಾಲತಾಣವನ್ನು ಬಳಕೆ ಮಾಡುವುದು ಬೇಡ ಎಂಬುದು ನಮ್ಮ ಉದ್ದೇಶವೂ ಹೌದು. ಈ ಹಿನ್ನೆಲೆಯಲ್ಲಿ ರಾಜಕೀಯ ಟೀಕೆ, ಪ್ರತಿಟೀಕೆಗಳಿಗೆ ಜಾಲತಾಣ ಮಹತ್ವ ನೀಡುವುದೂ ಇಲ್ಲ. ಒಂದು ವೇಳೆ ಈ ಹಿಂದೆ ಇಂಥದ್ದೇನಾದರೂ ಪ್ರಕಟವಾಗಿದ್ದರೆ ತಿದ್ದಿಕೊಳ್ಳುತ್ತೇವೆ.
ಬಂಟ್ವಾಳ ತಾಲೂಕು ಸಹಿತ ಇಡೀ ಜಿಲ್ಲೆಯಾದ್ಯಂತ ಜನರು ನಿಷೇಧಾಜ್ಞೆ ಇಲ್ಲದೆ ನಿರ್ಭೀತಿಯಿಂದ ವಾಸಿಸುವ ಕಾಲವನ್ನು ಎದುರು ನೋಡುತ್ತಿದ್ದೇವೆ.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…