ಶನಿವಾರ ಬೆಳಗ್ಗೆ ಬಿ.ಸಿ.ರೋಡಿನ ಕೈಕಂಬದಿಂದ ಬಿ.ಸಿ.ರೋಡ್ ಕಡೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ತುಂಬೆಲ್ಲ ನೀರೋ ನೀರು.
ದ್ವಿಚಕ್ರ ವಾಹನ ಸವಾರರಷ್ಟೇ ಅಲ್ಲ, ಎಲ್ಲರಿಗೂ ಕಷ್ಟ. ನಡೆದುಕೊಂಡು ಹೋಗುವವರಿಗೆ ಇಲ್ಲಿ ಜಾಗವಿಲ್ಲ.
ಇದು ಇಲ್ಲಿಯಷ್ಟೇ ಅಲ್ಲ, ಬಹಳಷ್ಟು ಕಡೆ ಇಂಥ ಪರಿಸ್ಥಿತಿ ಇದೆ.
ಏನಿದರ ಹಕೀಕತ್ತು?
ಕಾಮಗಾರಿಗಳ ಪರ್ವಕಾಲವಿದು. ಹೀಗಾಗಿ ನಾನಾ ಕಡೆ ರಸ್ತೆ ಪಕ್ಕ ವಿವಿಧ ವಿಚಾರಗಳಿಗೆ ಅಗೆತ ಆರಂಭಗೊಂಡಿದೆ. ಇದೇ ಹೊತ್ತಿನಲ್ಲಿ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ರಸ್ತೆ ಪಕ್ಕ ಮಣ್ಣು ಸಡಿಲವಾದರೆ ಏನು ಮಾಡಬೇಕು, ಹೇಗೆ ನಡೆದುಕೊಂಡು ಹೋಗಬೇಕು, ದ್ವಿಚಕ್ರ ವಾಹನ ಸಂಚಾರ ಸಾಧ್ಯವೇ, ಬಸ್ ಗೆ ಕಾಯುವುದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳೊಂದಿಗೆ ನಾಗರಿಕ ಮಳೆಗಾಲ ಬಂದಾಗ ಕೊಡೆ ಹಿಡಿದುಕೊಂಡು ಮನೆಯಿಂದ ಹೊರಕ್ಕೆ ಬರುತ್ತಾನೆ. ಆದರೆ ಸಣ್ಣ ರಸ್ತೆ ಪಕ್ಕ ನಿಲ್ಲುವುದೂ ಸೇಫ್ ಅಲ್ಲ ಎಂಬ ಪರಿಸ್ಥಿತಿ ಉದ್ಭವವಾಗಿದೆ.
ಇದಕ್ಕೆ ಎರಡು ಕಾರಣ. ಒಂದು – ರಸ್ತೆ ಪಕ್ಕ ಜಾಗವೇ ಇಲ್ಲ. ಇನ್ನೊಂದು – ಅಪ್ಪಿ, ತಪ್ಪಿ ಜಾಗವೇನಾದರೂ ಇದ್ದರೆ ಅಲ್ಲಿ ಕೆರೆಯಂತಾದ ಹೊಂಡತುಂಬಿದ ನೀರು ಅಥವಾ ಹೂತು ಹೋಗುವಷ್ಟು ಕೆಸರು ಇರುತ್ತದೆ. ಬೈ ಚಾನ್ಸ್ ಆತನೇನಾದರೂ ವಾಹನ ಓಡುವುದಿಲ್ಲ ಎಂದು ರಸ್ತೆಯಲ್ಲೇ ನಡೆಯಲು, ನಿಲ್ಲಲು ಹೊರಟ ಎಂದಾದರೆ ಬದುಕುಳಿದು ಮನೆಗೆ ಮರಳುವುದೇ ದೊಡ್ಡ ಸಾಹಸ.
ಮಂಗಳೂರು ಬಲ್ಮಠದ ಬಳಿ ಕೃತಕ ಕೆರೆ ಸಾರ್ವಜನಿಕ ಟೀಕೆಗೆ ಗುರಿಯಾಗಿತ್ತು. ಬಂಟ್ವಾಳ ತಾಲೂಕಿನ ಪ್ರಮುಖ ಕಡೆಗಳಲ್ಲೇ ಇಂಥ ಸನ್ನಿವೇಶ ಮರುಸೃಷ್ಟಿಯಾಗುತ್ತಿದೆ. ಆದರೆ ಸ್ವರೂಪ ಬೇರೆ.
ಆರಂಭದಲ್ಲಿ ಮಳೆಗಾಲ ಕಾಲಿಡುವ ಮುನ್ನ ಕಾಮಗಾರಿಗಳನ್ನೆಲ್ಲ ಮುಗಿಸಿಬಿಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಹೆಚ್ಚಿನ ಕೆಲಸ ಬಹುತೇಕ ಮುಗಿದರೂ ಕೆಲವೊಂದು ಅಪೂರ್ಣವಾದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ.
ಹಾಗೆಂದು ಇಡೀ ತಾಲೂಕಿನಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ ಎಂದರ್ಥವಲ್ಲ. ಸರಕಾರದ ವಿವಿಧ ಯೋಜನೆಗಳಡಿ ಕೆಲವೆಡೆ ರಸ್ತೆ ಕಾಮಗಾರಿಗಳು ಅಚ್ಚುಕಟ್ಟಾಗಿಯೇ ನಡೆದಿವೆ. ಸಮಸ್ಯೆ ಉದ್ಭವಿಸಿರುವುದು ನಿರ್ವಹಣೆಯೇ ಇಲ್ಲದ ರಸ್ತೆಗಳ ಬದಿಯಲ್ಲಿ.
ಪಾಣೆಮಂಗಳೂರಿನಿಂದ ನರಿಕೊಂಬು ಕಡೆಗೆ ತೆರಳುವ ಸಂದರ್ಭ ಹೆದ್ದಾರಿಯನ್ನು ದಾಟಿ ಹೋಗಬೇಕು. ಕಲ್ಲುರ್ಟಿ ದೇವಸ್ಥಾನದ ಎದುರು ನರಿಕೊಂಬು ಕಡೆಯಿಂದ ಹೆದ್ದಾರಿ ಸಂಸುವ ರಸ್ತೆಯ ಅಂಚು ಸಂಪೂರ್ಣ ಹಾಳಾಗಿದೆ. ಇಲ್ಲೇ ಪಕ್ಕದಲ್ಲ ಸಡಿಲ ಮಣ್ಣು ತುಂಬಿಹೋಗಿದೆ. ರಸ್ತೆಯಲ್ಲಿ ದೊಡ್ಡ ಹೊಂಡವಿದ್ದು, ಶಾರದಾ ಪ್ರಾಥಮಿಕ ಶಾಲೆಯ ಎದುರು ಹೆದ್ದಾರಿ ಕಡೆಯೂ ಹೊಂಡವಿದೆ. ನರಿಕೊಂಬು ಕಡೆಯಿಂದ ಬರುವ ವಾಹನಗಳು ಎಡಕ್ಕೆ ಮೇಲ್ಕಾರ್ ಕಡೆ ತಿರುಗುವ ಜಾಗದಲ್ಲೂ ಕೆರೆ, ಬಲಕ್ಕೆ ತಿರುಗುವಾಗಲೂ ಕೆರೆಯನ್ನು ನೋಡುವಂಥ ಸನ್ನಿವೇಶ. ಇದಕ್ಕೆ ಸಂಪೂರ್ಣ ಪರಿಹಾರ ದೊರಕಬೇಕಾದರೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯಬೇಕು. ಅಲ್ಲಿಯವರೆಗೆ ನಾಗರಿಕ ಸಹಿಸಿಕೊಳ್ಳಬೇಕು.
ಪುರಸಭಾ ವ್ಯಾಪ್ತಿಯ ಎರಡನೆ ಹಂತದ ಸಮಗ್ರ ಕುಡಿಯುವ ನೀರು ಯೋಜನೆಯ ಪೈಪ್‌ಲೈನ್ ಕಾಮಗಾರಿಯ ಮುಂದುವರಿದ ಭಾಗ ಕಾಮಾಜೆ ಪರಿಸರದ ಜನರಿಗೆ ತಟ್ಟಿದೆ. ಇದೀಗ ಬಿ.ಸಿ.ರೋಡ್ ಕಾಮಾಜೆ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ.
ಪೈಪ್‌ಲೈನ್ ರಸ್ತೆ ಬದಿಯಲ್ಲೇ ಹಾದು ಹೋಗಿರುವುದರಿಂದ ಪೈಪ್ ಅಳವಡಿಕೆಯ ಸಂದರ್ಭದಲ್ಲಿ ರಸ್ತೆಯನ್ನೇ ಅಗೆದು ಹಾಕಿರುವುದರಿಂದ ಪುರಸಭಾ ವ್ಯಾಪ್ತಿಯ ಬಹುತೇಕ ರಸ್ತೆಗಳೂ ಹದೆಗೆಟ್ಟಿದೆ. ಹೀಗಾಗಿ ರಸ್ತೆ ಬದಿ ನಡಿಗೆ ಸ್ವರ್ಗದ ಕಡೆಗೆ ಎಂಬಂತಾಗಿದೆ.
ಒಳರಸ್ತೆಗಳು ಸಂಪೂರ್ಣ ಕೆಸರುಮಯ ಆಗಿರುವ ಕಾರಣ ಈ ಭಾಗಕ್ಕೆ ಆಟೋಗಳೂ ಬರುವುದಿಲ್ಲ. ಬಂದರೆ ಆಟೋ ತೊಳೆಯಲು ಸಂಪೂರ್ಣ ವಾಷ್ ಗೇ ಕೊಡಬೇಕು. ಬಂಟ್ವಾಳ ಪ್ರಥಮ ದರ್ಜೆ ಕಾಲೇಜಿಗೆ ಹೋಗುವ ಮಕ್ಕಳು ಇದರ ನೇರ ಫಲಾನುಭವಿಗಳು.
ಬಿ.ಎಸ್.ಎನ್.ಎಲ್. ಕಚೇರಿ ಎದುರು ದೊಡ್ಡ ಹೊಂಡವನ್ನು ಕೊರೆಯಲಾಗಿದೆ. ಇದರ ಎದುರೇ ಸಾರ್ವಜನಿಕರು ಮಂಗಳೂರಿಗೆ ತೆರಳುವ ಬಸ್ ಗಳಿಗೆ ಕಾಯುತ್ತಾರೆ. ಸಣ್ಣಪುಟ್ಟ ಮಕ್ಕಳೂ ಇಲ್ಲಿ ನಿಲ್ಲುತ್ತಾರೆ. ಧಾರಾಕಾರ ಮಳೆ ಬಂತೆಂದರೆ ಈ ಹೊಂಡದಲ್ಲಿ ನೀರು ನಿಲ್ಲಲು ಹಾಗೂ ಪಕ್ಕದಲ್ಲಿದ್ದ ಮಣ್ಣು ಜಾರಲು ಶುರುವಾಗುತ್ತದೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಹೊಂಡಕ್ಕೆ ಬೀಳುವ ಅಪಾಯವಿದೆ. ಹೊಂಡದಲ್ಲಿ ನೀರು ತುಂಬಿದರೆ ಸಮೀಪದ ಬಿ.ಎಸ್.ಎನ್.ಎಲ್. ಕಚೇರಿಯ ಕಂಪೌಂಡ್ ಕುಸಿದು ಅನಾಹುತವಾಗುವ ಸಂಭವ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಕಾರ ಈ ಕುರಿತು ಲಕ್ಷ್ಯವನ್ನೇ ವಹಿಸುವುದಿಲ್ಲ ಎಂಬ ಆರೋಪ ಸಾರ್ವಜನಿಕರದ್ದು.
ಬಂಟ್ವಾಳನ್ಯೂಸ್ ಗೆ ನಮ್ಮ ಓದುಗರಾದ ಎಸ್.ಆರ್. ಕೈಕಂಬ ಶನಿವಾರ ಬೆಳಗ್ಗಿನ ತಾಜಾ ಸ್ಥಿತಿಯ ವೀಡಿಯೊ ಸೆರೆ ಹಿಡಿದುಕೊಟ್ಟಿದ್ದಾರೆ.
ಈ ಲಿಂಕ್ ನೋಡಿ. ರಸ್ತೆ ಬದಿ ಸೇಫ್ ಅಲ್ಲ ಎಂದು ಗೊತ್ತಾಗುತ್ತದೆ.