ವಿದ್ಯಾರ್ಥಿಯು ಶ್ರದ್ಧೆ, ಏಕಾಗ್ರತೆ ಮತ್ತುಆಸಕ್ತಿಯಿಂದ ತಾನು ಶಿಕ್ಷಣದಲ್ಲಿ ತೊಡಗಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ಶ್ರೀ ವೆಂಕಟರಮಣ ಸ್ವಾಮಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಹೇಳಿದರು. ಕಾಲೇಜಿನಲ್ಲಿ ನಡೆದ ೨೦೧೭-೧೮ನೇ ಶೈಕ್ಷಣಿಕ ವರ್ಷಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ೨೦೧೬-೧೭ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡಾಗ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದರು.
ದ್ವಿತೀಯ ಪಿಯುಸಿಯಲ್ಲಿ ಶೇ. ೯೦ಕ್ಕಿಂತ ಅಧಿಕ ಅಂಕಗಳನ್ನು ಪಡೆದ ೨೩ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಾಣಿಜ್ಯ ವಿಭಾಗದಲ್ಲಿ ೫೭೯ ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾದ ವಿದ್ಯಾರ್ಥಿನಿ ಶರಣ್ಯಾ ಮಾತನಾಡಿ ನಿರಂತರ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು. ವಿಜ್ಞಾನ ವಿಭಾಗದಲ್ಲಿ ೫೭೧ ಅಂಕಗಳನ್ನು ಪಡೆದು ಆ ವಿಭಾಗದಲ್ಲಿ ಪ್ರಥಮ ಸ್ಥಾನಿಯಾದ ಶಾನ್ ಲಿಂಟನ್ ಮಿರಾಂಡ ಮಾತನಾಡಿ ಶ್ರದ್ಧೆಯಿಂದ ಓದಿದರೆ ಖಂಡಿತ ಉತ್ತಮ ಅಂಕಗಳನ್ನು ತೆಗೆಯಲು ಸಾಧ್ಯ. ಆದರೆ ಅದರ ಜೊತೆಗೆ ಶಿಕ್ಷಕರ ಮಾರ್ಗದರ್ಶನ ಮತ್ತು ಹೆತ್ತವರ ಪ್ರೋತ್ಸಾಹವೂ ಬೇಕು ಎಂದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಾಲಕೃಷ್ಣ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಮಾನಸ ಕೆ., ಅನನ್ಯ ಜಿ. ಪ್ರಾರ್ಥಿಸಿದರು. ಅರ್ಥಶಾಸ್ತ್ರಉಪನ್ಯಾಸಕಿ ಶಾಲಿನಿ ಬಿ. ಸ್ವಾಗತಿಸಿ, ಉಪನ್ಯಾಸಕ ಪ್ರದೀಪ್ ಪೂಜಾರಿ ವಂದಿಸಿದರು. ಗಣಿತ ಶಾಸ್ತ್ರ ಉಪನ್ಯಾಸಕಿ ಕವಿತಾ ಯಾದವ್ ಕಾರ್ಯಕ್ರಮ ನಿರೂಪಿಸಿದರು.