ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿ ಹಾಗೂ ಒಂದನೆ ತರಗತಿಯಿಂದ ಆಂಗ್ಲ ಭಾಷ ಕಲಿಕೆ ರದ್ದುಗೊಳಿಸುವಂತೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ನೀಡಿದ ಆದೇಶಕ್ಕೆ ರಾಜ್ಯ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿ ಎಸ್. ಸುಜಾತ ಇದ್ದ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದ್ದು ಕಳೆದ ವರ್ಷದಂತೆ ಶಿಕ್ಷಣ ಮುಂದುವರಿಸಲು ಅನುಮತಿ ನೀಡಿದ್ದಾರೆ.
ರಾಜ್ಯ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಡಿ. ಸಿದ್ದರಾಮಯ್ಯ ಸೂಚನೆಯನ್ವಯ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಂಟ್ವಾಳ ತಾಲೂಕಿನ 23 ಶಾಲೆಗಳಿಗೆ ಆದೇಶ ಪತ್ರ ರವಾನಿಸಿದ್ದರು. ಇದರಂದ ದಡ್ಡಲಕಾಡು ಶಾಲೆಯ ಎಲ್‌ಕೆಜಿ ಯುಕೆಜಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರಕ್ಕೊಳಗಾಗಿ ಪೋಷಕರು ಆತಂಕಕ್ಕೀಡಾಗಿದ್ದರು.
ಈ ನಿಟ್ಟಿನಲ್ಲಿ ಸಂಘಟಿತರಾದ ವಿದ್ಯಾರ್ಥಿಗಳ ಪೋಷಕರು ಶಾಲೆಯನ್ನು ದತ್ತು ಸ್ವೀಕರಿಸಿಕೊಂಡ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಮೇ.೨೩ರಂದು ಬಿ.ಸಿ.ರೋಡಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಡಪಡಿಸಿದ್ದರು. ಮಾತ್ರವಲ್ಲದೆ ನ್ಯಾಯಕ್ಕಾಗಿ ರಾಜ್ಯ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಯಿತು. ಕಳೆದ ಗುರುವಾರ ವಿಚಾರಣೆ ನಡೆಸಿದ ನ್ಯಾಯಪೀಠ ಸರಕಾರದಿಂದ ಸ್ಪಷ್ಟೀಕರಣ ಕೇಳಿ ವಿಚಾರಣೆಯನ್ನು ಮೇ.೩೧ಕ್ಕೆ ಮುಂದೂಡಿತ್ತು. ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿಕ್ಷಣಾಧಿಕಾರಿಯ ಆದೇಶಕ್ಕೆ ತಡೆಯಾಜ್ಞೆ ನೀಡಿ ಕಳೆದ ವರ್ಷದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ಹೊರಡಿಸಿದೆ. ದಡ್ಡಲಕಾಡು ಶಾಲೆಯ ಪರವಾಗಿ ನ್ಯಾಯವಾದಿ ಎಸ್. ರಾಜಶೇಖರ್ ವಾದಿಸಿದ್ದರು.
ತೀರ್ಪಿನಿಂದ ದಡ್ಡಲಕಾಡು ಸರಕಾರಿ ಪ್ರಾಥಮಿಕ ಶಾಲೆಯ ಆರುನೂರು ವಿದ್ಯಾರ್ಥಿಗಳ ಪೋಷಕರಲ್ಲಿ ಸಂಭ್ರಮ ಮನೆ ಮಾಡಿದೆ. ಮೇ.೨೯ರಂದು ಶಾಲಾ ಆರಂಭೊತ್ಸವ ಮಾಡಲಾಗಿತ್ತಾಧರೂ ವಿದ್ಯಾರ್ಥಿಗಳ ಪೋಷಕರು ಉತ್ಸಾಹದಿಂದ ಪಾಲ್ಗೊಂಡಿರಲಿಲ್ಲ. ನ್ಯಾಯಲಯದಿಂದ ವ್ಯತಿರಿಕ್ತ ತೀರ್ಪು ಬಂದರೂ ಮಕ್ಕಳನ್ನು ಇದೇ ಶಾಲೆಯಲ್ಲಿ ಕಲಿಸಲು ವಿದ್ಯಾರ್ಥಿಗಳ ಪೋಷಕರು ನಿರ್ಧರಿಸಿದ್ದರು.