ಬಂಟ್ವಾಳ

ಮನುಷ್ಯನನ್ನು ಪ್ರೀತಿಸುವ ಮನಸ್ಸು ದೇವರು ಕರುಣಿಸಲಿ: ರಮಾನಾಥ ರೈ

ಮತ್ತೊಬ್ಬನನ್ನೂ ಮನುಷ್ಯನೆಂದು ಪರಿಗಣಿಸಿ ಆತನನ್ನು ಪ್ರೀತಿಸುವ ಮನಸ್ಸು, ಸದ್ಭುದ್ದಿಯನ್ನು ದೇವರು ಎಲ್ಲರಿಗೂ ಕರುಣಿಸಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ಶ್ರೀ ದೇವರ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವ ಸಂದರ್ಭ ಸೋಮವಾರ ರಾತ್ರಿ ನಡೆದ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾಹೀರಾತು

ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕೆಲಸವನ್ನು ಮಾಡಿದರೆ ಜಗತ್ತಿನಲ್ಲಿ ಒಳ್ಳೆಯತನವೇ ತುಂಬಿರುತ್ತದೆ. ತಪ್ಪುಗಳು ಜಗತ್ತಿನಲ್ಲಿ ಆಗುತ್ತಲಿರುತ್ತವೆ. ನಾವು ನ್ಯಾಯ, ನಿಷ್ಠೆಯಿಂದ ಬದುಕಲು ಕಲಿಯಬೇಕು. ಮಗುವಿಗೆ ದೇವರನ್ನು ಹೋಲಿಸುತ್ತಾರೆ. ಮಗುವಿನ ಮನಸ್ಸು ನಮ್ಮದಾಗಬೇಕು ಎಂದು ರೈ ಹೇಳಿದರು.

ಧರ್ಮಸ್ಥಳ ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ನಾನು ಎಂಬ ಅಹಂಕಾರ ಸಲ್ಲದು. ನಾಯಕ ಎಂದು ಅಹಂಕಾರದಿಂದ ಮೆರೆಯಲೂ ಬಾರದು. ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ, ನಾವು ಮಾಡುವ ಕೆಲಸವಷ್ಟೇ ಶಾಶ್ವತ. ಕೊಟ್ಟ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಬೇಕು. ದೇವರು ನಮ್ಮನ್ನು ಉತ್ತಮ ಕಾರ್ಯಗಳನ್ನು ಮಾಡಲೆಂದೇ ಮನುಷ್ಯನನ್ನಾಗಿ ನೇಮಿಸಿದ್ದಾನೆ. ಪದವಿಗಳನ್ನು ಕೊಟ್ಟಿದ್ದಾನೆ. ನಾವು ಅಹಂಕಾರ ಇಲ್ಲದೆ ತ್ಯಾಗಮಯಿಯಾಗಿ ಕೆಲಸ ಮಾಡಿದರೆ ಒಳ್ಳೆಯ ಸಂದೇಶವನ್ನು ಮತ್ತೊಬ್ಬರಿಗೆ ನೀಡಿದಂತಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಹ್ಮಕಲಶ ಸಹಿತ ನಾನಾ ಧಾರ್ಮಿಕ ಕಾರ್ಯಕ್ರಮಗಳ ಒಟ್ಟು ಟರ್ನ್ ಓವರ್ ಸುಮಾರು ೬೦೦ ಕೋಟಿ ರೂಪಾಯಿ ಎಂದರೆ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ. ಅತಿ ಹೆಚ್ಚು ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ತುಳುನಾಡಿನ ಜನತೆ ಇದಕ್ಕಾಗಿ ಸರಕಾರವನ್ನು ಅವಲಂಬಿತವಾಗುವುದಿಲ್ಲ. ದೇವರ ಸೇವೆಯೆಂದು ಇಡೀ ಊರವರು ಒಟ್ಟಾಗಿ ದುಡಿಯುವುದೇ ಇಲ್ಲಿನ ವೈಶಿಷ್ಟ್ಯ ಎಂದರು.

ಜಾಹೀರಾತು

ತ್ಯಾಗ, ಸಮರ್ಪಣೆಯಿಂದ ದುಡಿಯುವ ಕಾರ್ಯಕರ್ತರಿರುವ ಕ್ಷೇತ್ರದಲ್ಲಿ ಭಗವಂತನ ಕಾರ್ಯವನ್ನು ಭಕ್ತಿ ಎಂಬ ಅನುಭೂತಿಯಿಂದ ನಡೆಸಲಾಗುತ್ತದೆ. ಭಗವಂತ ನಿರಾಕಾರ, ದೇವಸ್ಥಾನಗಳು ಭಗವಂತನನ್ನು ಪೂಜಿಸುವ ಆಲಯಗಳಷ್ಟೇ ಅಲ್ಲ, ತ್ಯಾಗ, ಮತ್ತು ಸಮರ್ಪಣೆಯ ಸಂಕೇತವೂ ಹೌದು ಎಂದು ನಳಿನ್ ಹೇಳಿದರು.

ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ, ದೇವಸ್ಥಾನದ ಹಿಂದಿನ ಸ್ಥಿತಿಯನ್ನು ಉಲ್ಲೇಖಿಸಿ, ಕಾರ್ಯಕರ್ತರ ಶ್ರಮ, ಊರವರ ಬೆಂಬಲದಿಂದ ಇಂದು ಭವ್ಯವಾದ ದೇವಳ ಎದ್ದುನಿಂತಿದೆ ಎಂದರು.

ವಾಸ್ತು ತಜ್ಞ ಪ್ರಸಾದ್ ಮುನಿಯಂಗಳ ಮಾತನಾಡಿ, ಇತಿಹಾಸ ಶಾಶ್ವತವಾಗಿ ಉಳಿಯುವಂಥದ್ದು. ಈ ದೇವಸ್ಥಾನ ಪುನರ್ನಿರ್ಮಾಣವಾಗುವ ಮೊದಲು ಹಲವು ಕ್ಷೇತ್ರಗಳನ್ನು ಸಂದರ್ಶಿಸಲಾಗಿತ್ತು. ಉತ್ತಮ ಅಂಶಗಳೊಂದಿಗೆ ಭವ್ಯ ದೇಗುಲ ನಿರ್ಮಾಣಗೊಂಡಿದೆ ಎಂದರು.

ಜಾಹೀರಾತು

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ತನ್ನ ಮತ್ತು ಸೋಮಯಾಜಿ ಕುಟುಂಬದವರ ಒಡನಾಟ ಸ್ಮರಿಸಿಕೊಂಡರು.

ಇದೇ ಸಂದರ್ಭ ವಾಸ್ತುತಜ್ಞ ಪ್ರಸಾದ ಮುನಿಯಂಗಳ, ದಾರುಶಿಲ್ಪಿ ನಾರಾಯಣ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗುರುನರಸಿಂಹ ದೇವಳ ಆಡಳಿತ ಮೊಕ್ತೇಸರ, ಉದ್ಯಮಿ ಯಜ್ಞನಾರಾಯಣ ಹೇರಳೆ ಉಪಸ್ಥಿತರಿದ್ದರು. ಉದ್ಯಮಿ ಎರಕಳ ರಘುನಾಥ ಸೋಮಯಾಜಿ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಏಲಬೆ ಪದ್ಮನಾಭ ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣರಾಜ ಭಟ್ ವಂದಿಸಿದರು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ