ಬಂಟ್ವಾಳಕ್ಕೆ ಕುಡಿಯುವ ನೀರು ಒದಗಿಸುವ 56 ಕೋಟಿ ರೂ. ವೆಚ್ಚದ ಎರಡನೇ ಹಂತದ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಬೈಪಾಸ್ ಬಳಿ ಪೈಪ್ ಲೈನ್ ಕಾಮಗಾರಿಗೆ ತಕರಾರು ಇದೆ. ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ ಸಲ್ಲದು ಎಂದು ಸಚಿವ ಬಿ.ರಮಾನಾಥ ರೈ ಹೇಳಿದರು.
ಮಂಗಳವಾರ ಸಂಜೆ ಬಂಟ್ವಾಳ ಪುರಸಭಾ ವಠಾರದಲ್ಲಿ ವಿವಿಧ ಸವಲತ್ತುಗಳ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದ ಸಚಿವರು, ನಗರೋತ್ತಾನ ಯೋಜನೆಯಡಿ ಪುರಸಭೆಗಳಿಗೆ 9 ಕೋಟಿ ರೂಪಾಯಿ ಅನುದಾನ ಮಂಜೂರಾತಿ ನೀಡಿದ್ದು ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಅಭಿವೃದ್ಧಿಗಾಗಿ ತಲಾ 1 ಕೋಟಿ ರೂಪಾಯಿಯಂತೆ ಒಟ್ಟು ಎರಡು ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಂಟ್ವಾಳ ಪುರಸಭೆಗೂ ಮಂಜೂರಾತಿ ನೀಡಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡ ಸೇರಿದಂತೆ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ರಾಜ್ಯ ಸರಕಾರ ಬಜೇಟ್‌ನಲ್ಲಿ ಹಂಚಿಕೆ ಮಾಡಿ ಮೀಸಲಿಟ್ಟಿರುವ ಅನುದಾನವನ್ನು ಸದುಪಯೋಗ ಪಡೆಸಿಕೊಳ್ಳುವಂತೆ ಅವರು ಕರೆ ನೀಡಿದರು.
ಬಂಟ್ವಾಳ ಪುರಸಭಾ ವ್ಯಾಪ್ತಿಯ 60 ಕೋಟಿ ರೂಪಾಯಿ ವೆಚ್ಚದ ಸಮಗ್ರ ಒಳ ಚರಂಡಿ ಯೋಜನೆಯ ಮುಂದುವರಿದ ಕಾಮಗಾರಿಯ ಅನಿಷ್ಠಾನಕ್ಕೆ ಗಂಭೀರ ಚಿಂತನೆ ನಡೆಸಲಾಗಿದ್ದು ಈ ನಿಟ್ಟಿನಲ್ಲಿ ಸರಕಾರದ ಜೊತೆ ನಿರಂತರ ಚರ್ಚೆ ನಡೆಸಲಾಗುತ್ತಿದೆ ಎಂದ ಸಚಿವರು ಪುರಸಭೆಯನ್ನು ನಗರಸಭೆಯನ್ನಾಗಿಸಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ ಎಂದರು.
ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಮಾತನಾಡಿ, ಪುರಸಭೆ ವ್ಯಾಪ್ತಿಯ ನಿವೇಶನ ರಹಿತರಿಗೆ ಸ್ವಂತ ನಿವೇಶನ ಒದಗಿಸುವ ನಿಟ್ಟಿನಲ್ಲಿ ಪಲ್ಲಮಜಲು, ಪಾಣೆಮಂಗಳೂರು ಹಾಗೂ ಬಿ.ಕಸ್ಬಾ ವ್ಯಾಪ್ತಿಯಲ್ಲಿ ಜಮೀನು ಗುರುತಿಸಲಾಗಿದ್ದು ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಸುಮಾರು 500ಕ್ಕೂ ಮಿಕ್ಕಿ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ನೀಡಲು ಉದ್ದೇಶಿಸಲಾಗುವುದು ಎಂದರು.
ಹತ್ತನೆ ತರಗತಿ, ಪಿಯುಸಿ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 350 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶೇಕಡ 7.25 ಯೋಜನೆಯಡಿ ೪೮ ಶೌಚಾಲಯ ನಿರ್ಮಾಣಕ್ಕೆ ತಲಾ 10 ಸಾವಿರ ರೂಪಾಯಿಯಂತೆ ಸಹಾಯ ಧನ, ತುರ್ತು ಚಿಕಿತ್ಸೆಗಾಗಿ ಸಹಾಯ ಧನವಾಗಿ ೫ ಲಕ್ಷ ರೂ., ಶೇಕಡ ೩ರಡಿ ವಿಕಲ ಚೇತನರಿಗೆ 5.69 ರೂಪಾಯಿಯ ಚೆಕ್ ವಿತರಿಸಲಾಯಿತು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ಹಾಗೂ ಪುರಸಭಾ ಸದಸ್ಯರು ಉಪಸ್ಥಿತರಿದ್ದರು.
ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ಸ್ವಾಗತಿಸಿದರು. ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್ ವಂದಿಸಿದರು. ಶಹರಿ ಯೋಜನಾಧಿಕಾರಿ ಮತ್ತಡಿ ಕಾರ್ಯಕ್ರಮ ನಿರೂಪಿಸಿದರು.
for video click: