• ಡಾ.ಎ.ಜಿ.ರವಿಶಂಕರ್
  • www.bantwalnews.com

ಉದ್ದನ್ನು ಸಂಸ್ಕೃತದಲ್ಲಿ ‘ಮಾಷ’ ಎಂದು ಕರೆಯಲಾಗುತ್ತದೆ. ‘ಮಾಷ ಮಾಂಸ ಸಮಾನ; ಎಂಬ ವಾಕ್ಯವಿದೆ.ಅಂದರೆ ಮಾಂಸವನ್ನು ಉಪಯೋಗಿಸುವುದರಿಂದ ದೇಹಕ್ಕೆ ಆಗುವ ಲಾಭವು ಉದ್ದನ್ನು ಸೇವಿಸುವುದರಿಂದ ಸಹ ಆಗುತ್ತದೆ.ಉದ್ದು ದೇಹಕ್ಕೆ ಬಲದಾಯಕ ಹಾಗು ಪುಷ್ಟಿದಾಯಕವಾಗಿದೆ.

  1. ಕೃಷ ಹಾಗು ಬಲಹೀನ ವ್ಯಕ್ತಿಗಳು ಉದ್ದನ್ನು ಸೇವಿಸುವುದರಿಂದ ಶರೀರದ ತೂಕ ಹಾಗು ಬಲ ಅಧಿಕವಾಗುತ್ತದೆ.
  2. ಉದ್ದು ವಾತವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿರುವ ಕಾರಣ ಪಕ್ಷವಾತ,ಸಂಧುವಾತ,ಅರ್ದಿತ (facial paralysis )ಇತ್ಯಾದಿಗಳಲ್ಲಿ ಉತ್ತಮ ಫಲವನ್ನು ನೀಡುತ್ತದೆ.
  3. ಉದ್ದು ಹೃದಯಕ್ಕೆ ಬಲದಾಯಕವಾಗಿದ್ದು ರಕ್ತನಾಳಗಳಲ್ಲಿ ಕಲ್ಮಶಗಳು ನಿಲ್ಲದಂತೆ ಮಾಡುತ್ತದೆ.
  4. ಉದ್ದಿನಲ್ಲಿ ನಾರಿನ ಅಂಶ ಇರುವ ಕಾರಣ ಮಲಪ್ರವ್ರುತ್ತಿಯನ್ನು ಮತ್ತು ಉತ್ಪತ್ತಿಯನ್ನು ಉತ್ತೇಜಿಸುತ್ತದೆ. ಆದುದರಿಂದ ಮಲಪ್ರವೃತ್ತಿಯ ಅನಿಯಮಿತೆ ಇದ್ದಾಗ ಉದ್ದನ್ನು ಬೆಲ್ಲದೊಂದಿಗೆ ಬೇಯಿಸಿ ತಿನ್ನಬೇಕು.
  5. ಉದ್ದು ಮೂತ್ರಕೋಶದ ಕ್ಷೀಣತೆಯನ್ನು ಕಡಿಮೆ ಮಾಡುತ್ತದೆ .ಹಾಗಾಗಿ ಇದನ್ನು ಬೇಯಿಸಿ ಗಂಜಿ ಮಾಡಿ ಸೇವಿಸುವುದರಿಂದ ಮೂತ್ರ ಪ್ರವ್ರುತ್ತಿಯಲ್ಲಿನ ನೋವು ಕಡಿಮೆಯಾಗಿ ಮೂತ್ರ ಸರಾಗವಾಗಿ ವಿಸರ್ಜನೆಯಾಗುತ್ತದೆ.
  6. ಉದ್ದು ಎದೆಹಾಲಿನ ಪ್ರಮಾಣವನ್ನು ಅಧಿಕ ಮಾಡುವುದರಿಂದ ಎಳೆ ಮಕ್ಕಳ ತಾಯಂದಿರಿಗೆ ಇದು ಉತ್ತಮ ಪಥ್ಯ ಆಹಾರವಾಗಿದೆ.
  7. ಉದ್ದು ಪಿತ್ತಕಾರಕವಾದ ಕಾರಣ ಮುಟ್ಟಿನ ಸಮಯದಲ್ಲಿ ಸರಿಯಾಗಿ ರಕ್ತ ಸ್ರಾವ ಆಗದಿದ್ದರೆ ಉದ್ದಿನ ಗಂಜಿ ಮಾಡಿ ಸೇವಿಸಬೇಕು ಅಥವಾ ಬೆಲ್ಲದೊಂದಿಗೆ ಜಜ್ಜಿ ತಿನ್ನಬೇಕು.
  8. ಉದ್ದಿನಬೇಳೆಯನ್ನು ಎಳ್ಳೆಣ್ಣೆಯಲ್ಲಿ ಕಾಯಿಸಿ ದಿನಕ್ಕೆ 5 ಮಿಲಿ ಯಷ್ಟು ಸೇವಿಸಿದರೆ ಶರೀರದ ನೋವುಗಳು ಕಡಿಮೆಯಾಗುತ್ತದೆ ಮತ್ತು ನರ ನಾಡಿಗಳಿಗೆ ಬಲ ಬರುತ್ತದೆ.
  9. ಇದೇ ಎಣ್ಣೆಯನ್ನು ಶರೀರಕ್ಕೆ ಹಾಕಿ ಉಜ್ಜುವುದರಿಂದ ಸಹ ನೋವು ನಿವಾರಣೆಯಾಗುತ್ತದೆ .
  10. ಉದ್ದನ್ನು ಗಂಜಿಯಂತೆ ಬೇಯಿಸಿ ತೆಳ್ಳಗಿನ ಬಟ್ಟೆಯಲ್ಲಿ ಸುತ್ತಿ ನೋವಿರುವ ಸ್ಥಳಕ್ಕೆ ಕಟ್ಟುವುದರಿಂದ ಅಲ್ಲಿನ ನೋವು ಕಡಿಮೆಯಾಗುತ್ತದೆ.
  11. ಉದ್ದನ್ನು ನಿಯಮಿತವಾಗಿ ಸೇವಿಸುವುದರಿಂದ ಪುರುಷರಲ್ಲಿ ವೀರ್ಯಾಣುವಿನ ಪ್ರಮಾಣ ಅಧಿಕವಾಗುತ್ತದೆ.
  12. ನಾರಿನ ಅಂಶ,ವಿಟಮಿನ್ಗಳು ಖನಿಜಗಳು  ಕ್ಯಾಲ್ಸಿಯಂ  ಇತ್ಯಾದಿಗಳು ಉದ್ದಿನಲ್ಲಿ ಯಥೇಷ್ಟವಾಗಿ ಇರುವುದರಿಂದ ಮಧುಮೇಹಿಗಳಿಗೆ ಇದು ಉತ್ತಮ ಪಥ್ಯಾಹಾರವಾಗಿದೆ.
  13. ಉದ್ದನ್ನು ನೀರಿನಲ್ಲಿ ಅರೆದು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿನ ಮೊಡವೆ ವಾಸಿಯಾಗುತ್ತದೆ ಮತ್ತು ಮುಖದ ಕಾಂತಿ ಅಧಿಕವಾಗುತ್ತದೆ.
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.