ಕಡೇಶ್ವಾಲ್ಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಜನಸ್ಪಂದನ ಸಭೆ ಶನಿವಾರ ನಡೆಯಿತು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಸರಕಾರಿ ಸೌಲಭ್ಯಗಳ ಅತಿ ಹೆಚ್ಚು ಪ್ರಯೋಜನ ಪಡೆದಿದ್ದಾರೆ ಎಂದರು.ಬಂಟ್ವಾಳ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾರ್ಯಕ್ರಮಕ್ಕಾಗಿ ಕಾಮಗಾರಿ ನಡೆಯುತ್ತಿದೆ. ಕರೋಪಾಡಿಯಲ್ಲಿ ಪ್ರಾಯೋಗಿಕವಾಗಿ ನೀರು ಒದಗಿಸಲಾಗುತ್ತಿದ್ದು, ಸಂಗಬೆಟ್ಟು ಪೂರ್ಣಗೊಂಡಿದೆ. ಮಾಣಿಯಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಸರಪಾಡಿ ಹಾಗೂ ನರಿಕೊಂಬು ಯೋಜನೆಗಳು ಕ್ಯಾಬಿನೆಟ್ ಅನುಮೋದನೆಗೆ ಬಾಕಿ ಇದೆ ಎಂದ ರೈ, ಇದಲ್ಲದೆ ಕುಡಿಯುವ ನೀರಿಗೆ 1.7 ಕೋಟಿ ರೂಪಾಯಿಯ ಟಾಸ್ಕ್ ಫೋರ್ಸ್ ಯೋಜನೆಯನ್ವಯ ಅನುದಾನ ಮೀಸಲಿರಿಸಲಾಗಿದೆ. ಬರ ಪರಿಹಾರಕ್ಕೆಂದು 1 ಕೋಟಿ ರೂಪಾಯಿ ಒದಗಿಸಲಾಗಿದೆ, ಮೂಲರಪಟ್ನದಲ್ಲಿ ಕಿಂಡಿ ಅಣೆಕಟ್ಟಿನ ನಿರ್ಮಾಣ ಅಂತಿಮ ಹಂತದಲ್ಲಿದ್ದು, 5 ಕೋಟಿ ರೂ ವಿನಿಯೋಗಿಸಲಾಗಿದೆ ಎಂದರು.ಬಿ.ಸಿ.ರೋಡಿನ ಸರ್ಕಲ್ ನಿಂದ ಜಕ್ರಿಬೆಟ್ಟುವರೆಗೆ ಕಾಂಕ್ರೀಟ್ ರಸ್ತೆಗೆ 70 ಕೋಟಿ ರೂಪಾಯಿ, ಪಂಜೆ ಮಂಗೇಶರಾಯ ಭವನ ನಿರ್ಮಾಣಕ್ಕೆ 3 ಕೋಟಿ ರೂಪಾಯಿ, ನಗರೋತ್ಥಾನ ಯೋಜನೆಯಡಿ ಪುರಸಭಾ ವ್ಯಾಪ್ತಿಯ ರಸ್ತೆಗಳ ಡಾಮರೀಕರಣ, ಬಂಟ್ವಾಳ ಪಾಲಿಟೆಕ್ನಿಕ್ ರಸ್ತೆಗೆ 2 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ, ಸಿರಿಚಂದನವನ, ದೈವೀವನಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಬಂಟ್ವಾಳ ಪ್ರವಾಸಿ ಬಂಗ್ಲೆ ಬಳಿ ಅರಣ್ಯ ಇಲಾಖೆ ವತಿಯಿಂದ ಟ್ರೀಪಾರ್ಕ್ ನಿರ್ಮಾಣ, ಸಿಆರ್ ಎಫ್ ರಸ್ತೆಗಳ ಡಾಂಬರೀಕರಣ, ತಾಲೂಕಿನ ಎಲ್ಲ ರಸ್ತೆಗಳ ಅಭಿವೃದ್ಧಿ ಒಂದು ವರ್ಷದೊಳಗೆ ಬಾಕಿ ಕಾರ್ಯ ಪೂರ್ತಿಗೊಳಿಸಲಾಗುವುದು ಎಂದು ರೈ ಹೇಳಿದರು. ಕಂದಾಯ ಇಲಾಖೆಯ ತಳಮಟ್ಟದ ಅಧಿಕಾರಿಗಳು ಜನರೊಂದಿಗೆ ಬೆರೆತು ಕಾರ್ಯ ನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಹಲವಾರು ಯೋಜನೆಗಳನ್ನು ಸರಕಾರ ಹಮ್ಮಿಕೊಂಡಿದ್ದು, ನೆಮ್ಮದಿಯ ಬದುಕು ಸಾಗಿಸಲು ಪೂರಕವಾಗಿದೆ ಎಂದರು. ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಪೂಜಾರಿ, ಚಂದ್ರಪ್ರಕಾಶ್ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ತಾಪಂ ಸದಸ್ಯೆಯರಾದ ಮಂಜುಳಾ, ಮಲ್ಲಿಕಾ, ಕೆಡಿಪಿ ಸದಸ್ಯೆ ಜಯಂತಿ, ಕಡೇಶ್ವಾಲ್ಯ ಗ್ರಾಪಂ ಅಧ್ಯಕ್ಷೆ ಶ್ಯಾಮಲಾ ಎಸ್ ಶೆಟ್ಟಿ, ಲೋಕೋಪಯೋಗಿ ಎಇಇ ಉಮೇಶ್ ಭಟ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಎಇಇ ಗಿರೀಶ್ ಕೆ.ಪಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ವಿವಿಧ ಇಲಾಖೆ ಇಂಜಿನಿಯರುಗಳಾದ ಅರುಣ್, ಉಪತಹಶೀಲ್ದರ್ ಭಾಸ್ಕರ ರಾವ್ , ಪರಮೇಶ್ವರ ನಾಯ್ಕ್, ವಾಸು ಶೆಟ್ಟಿ, ಕಂದಾಯ ನಿರೀಕ್ಷಕರಾದ ರಾಮ ಕೆ , ದಿವಾಕರ್, ನವೀನ್ ಮೊದಲಾದವರು ಉಪಸ್ಥಿತರಿದ್ದರು. ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿದರು. ತಾಪಂ ಇಒ ಸಿಪ್ರಿಯಾನ್ ಮಿರಾಂದಾ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.