ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಎಲ್ಲ ರಾಜ್ಯಗಳಲ್ಲಿ ತತ್ ಕ್ಷಣ ಜಾರಿಗೊಳಿಸಬೇಕು ಹಾಗೂ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಯೋಜನೆಯನ್ನೇ ಜಾರಿಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳೊಂದಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಂಟ್ವಾಳ ತಾಲೂಕಿನ ಸದಸ್ಯರು ಬಿ.ಸಿ.ರೋಡಿನ ಕೈಕುಂಜ ಬಿ.ಇ.ಒ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್ ವತಿಯಿಂದ ನಡೆದ ರಾಷ್ಟ್ರಮಟ್ಟದ ಹೋರಾಟದ ಅಂಗವಾಗಿ ಮಂಗಳವಾರ ಬೆಳಗ್ಗೆ ಧರಣಿ ಕುಳಿತ ಶಿಕ್ಷಕರು, ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿಗೆ ಪ್ರಾಥಮಿಕ ಶಿಕ್ಷಣ ಮಂಡಳಿ ಸ್ಥಾಪಿಸಬೇಕು, ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಬೇಕು, ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಕನಿಷ್ಠ ವರ್ಗಕ್ಕೆ ಒಬ್ಬ ಶಿಕ್ಷಕ, ಶಿಕ್ಷಕಿ ನಿಯುಕ್ತಿಗೊಳಿಸಬೇಕು. ಶಿಕ್ಷಕ, ವಿದ್ಯಾರ್ಥಿ ಅನಪಾತ ೧:೩೦ ಶಾಲೆಗೆ ಒಬ್ಬ ಮುಖ್ಯೋಪಾಧ್ಯಾಯರನ್ನು ನಿಯುಕ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಉಮಾನಾಥ ರೈ ಮಾತನಾಡಿದರು. ಶಿಕ್ಷಕರ ಸಂಘದ ರಾಜ್ಯ ಪ್ರತಿನಿಧಿ ರಮೇಶ್ ನಾಯಕ್ ರಾಯಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಜಯರಾಮ್, ಎನ್.ಪಿ.ಎನ್. ಸಂಘದ ಅಧ್ಯಕ್ಷ ಸಂತೋಷ್, ದೈಹಿಕ ಶಿಕ್ಷಕ ಸಂಘದ ಜಿಲ್ಲಾ ಕೋಶಾಧಿಕಾರಿ ಅಖಿಲ್ ಶೆಟ್ಟಿ, ತಾಲೂಕು ಸಂಘದ ಕೋಶಾಧಿಕಾರಿ ನಾರಾಯಣ ಪೂಜಾರಿ, ಪ್ರಮುಖರಾದ ಸೇಸಪ್ಪ ಮಾಸ್ತರ್ ಸಹಿತ ಹಲವು ಶಿಕ್ಷಕರು ಉಪಸ್ಥಿತರಿದ್ದರು.