ಜಮ್ಮುವಿನ ಕುಪ್ವಾರದಲ್ಲಿ ಒಕ್ಟೋಬರ್ ತಿಂಗಳಲ್ಲಿ ವಿದ್ಯಾರ್ಥಿಗಳ ವಸತಿ ನಿಲಯವನ್ನು ಆಕ್ರಮಿಸಿದ್ದ ಉಗ್ರರೊಂದಿಗೆ ಕಾಲು,ಎದೆಗೆ ಗುಂಡು ಹೊಕ್ಕರೂ ಹೆಚ್ಚುವರಿ ಸೈನಿಕರು ಬರುವ ತನಕ ಹೋರಾಡಿ ವೈರಿಗಳನ್ನು ಕೊಂದು ಮುಗಿಸಿ 5 ತಿಂಗಳ ನಂತರ ಮನೆಗೆ ಮರಳಿದ ಮುಡಿಪುವಿನ ವೀರಯೋಧ ಸಂತೋಷ್ ಕುಮಾರ್ ಅವರನ್ನು ಡಾ.ಅಣ್ಣಯ್ಯ ಕುಲಾಲ್ ನೇತೃತ್ವದ ದೇಶಭಕ್ತ ಸಂಘಟನೆಗಳ ನಾಯಕರು ಅಭಿನಂದಿಸಿ ಗೌರವಿಸಿದರು.
ಜಮ್ಮುವಿನ ಕುಪ್ವಾರದಲ್ಲಿ ಉಗ್ರರು ಮತ್ತು ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಕಾಲು ಮತ್ತು ಎದೆಗೆ ಗುಂಡು ಬಿದ್ದು ಶರೀರವಿಡೀ ಜರ್ಜರಿತವಾಗಿದ್ದರೂ ಉಗ್ರರೋರ್ವನನ್ನು ಗುಂಡಿಕ್ಕಿ ಕೊಂದು ವೈರಿಗಳನ್ನು ಹಿಮ್ಮೆಟ್ಟಿಸಿದ ದ.ಕ ಜಿಲ್ಲೆಯ ಮುಡಿಪು ಕೋಡಕ್ಕಲ್ಲಿನ ವೀರಯೋಧ ಸಂತೋಷ್ ಕುಮಾರ್ ಅವರ ಯಶೋಗಾಥೆಯ ಬಗ್ಗೆ ವಿಶ್ವವಾಣಿ ಪತ್ರಿಕೆಯು ಶನಿವಾರದ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು. ವರದಿಯನ್ನು ನೋಡಿದ ಕುಲಾಲ್ ಕುಂಬಾರ ಸಮುದಾಯದ ಹಿರಿಯ ಮುಖಂಡರಾದ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು ನೇತೃತ್ವದ ವಿವಿಧ ದೇಶ ಭಕ್ತ ಸಂಘಟನೆಗಳ ನಾಯಕರುಗಳು ಆದಿತ್ಯವಾರದಂದೇ ಯೋಧ ಸಂತೋಷರ ಮುಡಿಪುವಿನ ಮನೆಗೆ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಅಣ್ಣಯ್ಯ ಕುಲಾಲ್ ಅವರು ಸಿನೆಮಾಗಳಲ್ಲಿ ಕಾಣುವ ರೀಲ್ ಹೀರೋಗಳನ್ನು ಎಷ್ಟೋ ಜನರು ಇಂದು ತಮ್ಮ ಆರಾಧ್ಯ ದೇವತೆಗಳಂತೆ ನೋಡುತ್ತಾರೆ.ಆದರೆ ನಿಜ ಜೀವನದಲ್ಲಿ ದೇಶಕ್ಕೆ ಕಂಠಕವೆನಿಸಿರುವ ಉಗ್ರರನ್ನು ದೇಹಕ್ಕೆ ಗುಂಡುಗಳು ಹೊಕ್ಕಿದ್ದರೂ ಸಹ ತನ್ನಲ್ಲಿದ್ದ ಪಿಸ್ತೂಲಿನಲ್ಲೇ ಹೊಡೆದು ಮುಗಿಸಿರುವ ಇಂತಹ ಹೀರೋಗಳು ನಮ್ಮೆಲ್ಲರಿಗೂ ಆರಾಧ್ಯ ದೇವತೆಗಳಾಗಬೇಕು. ಕಷ್ಟಪಟ್ಟು ಬೀಡಿ ಕಾಯಕ ಮಾಡಿ ಇಂತಹ ಮಗನನ್ನು ದೇಶಕ್ಕೆ ಸಮರ್ಪಿಸಿದ ವಿಮಲಾರಂತಹ ಮಹಾತಾಯಿಯ ಬಗ್ಗೆ ಹೇಳಲು ಶಬ್ದಗಳೇ ಇಲ್ಲ. ಸಂತೋಷ್ ಅವರೊಂದಿಗೆ ನಾವೆಲ್ಲರೂ ಜೊತೆಯಾಗಿ ಇರುತ್ತೇವೆಂದು ನುಡಿದರು.
ಸಂತೋಷ್ ಹಾಗೂ ಅವರ ಕುಟುಂಬದವರನ್ನು ದೇಶಭಕ್ತ ಸಂಘನೆಗಳ ನಾಯಕರುಗಳು ಜತೆಗೂಡಿ ಸನ್ಮಾನಿಸಿ ಗೌರವಿಸಿದರು.
ವಿಶ್ವಹಿಂದೂ ಪರಿಷತ್‌ನ ನಾಯಕರಾದ ಗೋಪಾಲ ಕುತ್ತಾರು, ವಿಕಾಸ್ ಮುಡಿಪು, ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲ್ ಮಾತೃ ಸಂಘದ ಸಂಘಟನಾ ಕಾರ್ಯದರ್ಶಿ ನಾರಾಯಣ ಬಂಗೇರ, ಮುಖಂಡರಾದ ಜಯ ಕುಲಾಲ್, ಹರೀಶ್ ಮುಜಿಲ, ನವೀನ್ ಕುಲಾಲ್, ವಿಶ್ವನಾಥ್ ಕುಲಾಲ್ ಬೆಂಗಳೂರು ಜತೆಗಿದ್ದರು.