ಮಕ್ಕಳ ಮಾತು

ಮನೆಯಲ್ಲಿ ಬೈಯ್ದಾರು ಎಂದು ಆ ನಿರ್ಧಾರ ಕೈಗೊಂಡಿದ್ದರು!

ಮಕ್ಕಳ ಅಂಕ ದ ವಿಚಾರದಲ್ಲಿನ ಪೋಷಕರ ವ್ಯಾಮೋಹ ಪೋಷಕರ ಅತಿಯಾದ ಕಾಳಜಿ ಎಂದು ಕೆಲವರು ಸಮರ್ಥಿಸಿಕೊಂಡರೆ ಇನ್ನೂ ಕೆಲವರು ಹೆತ್ತವರ ಒತ್ತಡಗಳ ನಡುವೆ ಮಕ್ಕಳು ಯಂತ್ರಗಳಾಗುತ್ತಿದ್ದಾರೆ ಎಂಬ ಆರೋಪವೂ ಇದೆ. ಆದರೆ ಇಂದು ಇಂತಹ ಸಣ್ಣ ಸಣ್ಣ ವಿಚಾರಗಳೂ ಕೂಡ ದೊಡ್ಡ ದೊಡ್ಡ ಅನಾಹುತಗಳಿಗೆ ಕಾರಣವಾಗುತ್ತಿರುವುದು ನಮಗೆ ತಿಳಿದೇ ಇದೆ.

www.bantwalnews.com

ಜಾಹೀರಾತು
  • ಮೌನೇಶ ವಿಶ್ವಕರ್ಮ
  • ಅಂಕಣ: ಮಕ್ಕಳ ಮಾತು

ಬಂಟ್ವಾಳ ತಾಲೂಕಿನ ಶಾಲೆಯೊಂದರ 6 ನೇ ತರಗತಿ ವಿದ್ಯಾರ್ಥಿ ಇಂಗ್ಲೀಷ್ ಕಷ್ಟವೆಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ, ಮಂಗಳೂರಿನ ಪ್ರೌಢಶಾಲೆಯೊಂದರ ಐವರು ವಿದ್ಯಾರ್ಥಿನಿಯರು ಕಲಿಕೆ ಕಷ್ಟವೆಂದು ಮನೆಬಿಟ್ಟು ಓಡಿ ಹೋಗುವ ನಿರ್ಧಾರ ಮಾಡುತ್ತಾರೆ, ಶಾಲೆ ಕಷ್ಟವೆಂದು ಪುತ್ತೂರಿನಿಂದ ಓಡಿ ಹೋದ ಒಬ್ಬ ಬಾಲಕ ಬೆಂಗಳೂರಿನ ಹೊಟೇಲ್ ವೊಂದರಲ್ಲಿ ಕೆಲಸಕ್ಕೆ ಸೇರುತ್ತಾನೆ, ಸುಳ್ಯದ ಬಾಲಕನೊಬ್ಬ ಹೆಚ್ಚು ಅಂಕ ಸಿಗಲಿಲ್ಲವೆಂದು ಮಾನಸಿಕ ಅಸ್ವಸ್ಥನಂತಾಗುತ್ತಾನೆ… ಮಕ್ಕಳ ಶೇಯೋಭಿವೃದ್ದಿಯನ್ನು ಬಯಸುವ ನಾವು-ನೀವು ಅರಿತೋ ಅರಿಯದೆಯೋ ಇಂತಹ ಸನ್ನಿವೇಶಗಳ ಸೃಷ್ಟಿಗೆ ಕಾರಣರಾಗುತ್ತಿದ್ದೇವೆ.

ಜಾಹೀರಾತು

ಮೇಲೆ ಹೇಳಿದ ಮೊದಲನೇ ಪ್ರಕರಣದಲ್ಲಿ ಐದನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ಆ ವಿದ್ಯಾರ್ಥಿಯನ್ನು, ಪೋಷಕರು ಒತ್ತಾಯ ಪೂರ್ವಕವಾಗಿ ಅಂಗ್ಲಮಾಧ್ಯಮದ ಆರನೇ ತರಗತಿಗೆ ಸೇರಿಸುತ್ತಾರೆ. ಕನ್ನಡ ಮಾಧ್ಯಮದಲ್ಲಿದ್ದ ವೇಳೆ ಕಲಿಕೆಯಲ್ಲಿ ಮುಂದಿದ್ದ ಆ ವಿದ್ಯಾರ್ಥಿಗೆ ಸಿಗುತ್ತಿದ್ದ ಗ್ರೇಡ್ ಆಂಗ್ಲಮಾಧ್ಯಮದಲ್ಲಿ ವ್ಯತ್ಯಾಸ ಬಂತು. ವಿದ್ಯಾರ್ಥಿಗೆ ಇದು ಆತಂಕದ ವಿಚಾರ ಅಲ್ಲವಾದರೂ ಮನೆಮಂದಿಗೆ ಇದು :ಪ್ರತಿಷ್ಠೆ ಯ ಪ್ರಶ್ನೆಯಾಯಿತು. ದಿನದಿಂದ ದಿನಕ್ಕೆ ಆ ವಿದ್ಯಾರ್ಥಿಯ ಮೇಲಿನ ಒತ್ತಡಗಳು ಹೆಚ್ಚಾಯಿತು. ಅದೊಂದು ದಿನ, ಇಂಗ್ಲೀಷ್ ಕಷ್ಟವೆಂದು ಕನ್ನಡದಲ್ಲೇ ಚೀಟಿ ಬರೆದಿಟ್ಟ ಆ ವಿದ್ಯಾರ್ಥಿ ನೇಣಿಗೆ ಶರಣಾಗುತ್ತಾನೆ॒

ಇನ್ನು ಎರಡನೇ ಘಟನೆ ಹತ್ತಿರದ ಮಂಗಳೂರಿನಲ್ಲಿ ನಡೆದದ್ದು. ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದ ಐವರು ವಿದ್ಯಾರ್ಥಿನಿಯರು ಅದೊಂದು ದಿನ ದಿಡೀರ್ ನಾಪತ್ತೆಯಾಗುತ್ತಾರೆ. ಪ್ರತಿದಿನ ನಿಗದಿತ ಸಮಯಕ್ಕೆ ಮನೆ ಸೇರುತ್ತಿದ್ದ ಅವರು, ಸಕಾಲಕ್ಕೆ ಮನೆ ತಲುಪದಿರುವುದು ಮನೆಯವರ ಆತಂಕಕ್ಕೆ ಕಾರಣವಾಗುತ್ತದೆ. ಈ ನಡುವೆ ದೃಶ್ಯಮಾಧ್ಯಮದಲ್ಲಿ ಈ ವಿಚಾರ ಬ್ರೇಕಿಂಗ್ ನ್ಯೂಸ್  ಆಗಿ ಬಿತ್ತರವಾಗುತ್ತಲೇ ನಾಪತ್ತೆ ಪ್ರಕರಣಕ್ಕೆ ರೆಕ್ಕೆಪುಕ್ಕಗಳು ಹುಟ್ಟಿಕೊಳ್ಳುತ್ತದೆ, ಅಪಹರಣ ವಾಗಿದೆ ಎಂದೂ ಸುದ್ದಿಯಾಗುತ್ತದೆ. ಪೊಲೀಸರೂ ಹುಡುಕಾಟ ತೀವ್ರಗೊಳಿಸುತ್ತಾರೆ. ಸಂಜೆ ವೇಳೆಗೆ ಎಲ್ಲರೂ ಒಂದೆಡೆಯಲ್ಲಿ ಪತ್ತೆಯಾಗುತ್ತಾರೆ. ಎಲ್ಲಿಗೋ ಹೊರಟು ನಿಂತಿದ್ದ ಆ ಐವರನ್ನು ಪೊಲೀಸರು ಮರಳಿ ಹೆತ್ತವರ ವಶಕ್ಕೆ ಒಪ್ಪಿಸುತ್ತಾರೆ. ನಾಪತ್ತೆ ಪ್ರಕರಣ ಸುಖಾಂತ್ಯಗೊಳ್ಳುತ್ತದೆ. ಆದರೆ ಅವರು ಓಡಿ ಹೋಗುವ ನಿರ್ಧಾರಕ್ಕೆ ಬರಲು ಕಾರಣವಾದ ವಿಚಾರ ಗಹನವಾಗಿಯೇ ಉಳಿದುಬಿಡುತ್ತದೆ. ಶಾಲೆಯಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂತು, ಮನೆಯಲ್ಲಿ ಬೈಯ್ದಾರು ಎಂದು ಮಕ್ಕಳು ಆ ನಿರ್ಧಾರ ಕೈಗೊಂಡಿರುವುದು ನಂತರ ಬಯಲಾಗುತ್ತದೆ.

ಮೂರನೇ ಘಟನೆ ಪುತ್ತೂರಿನ ಗ್ರಾಮಾಂತರ ಪ್ರದೇಶದಲ್ಲಿ ನಡೆದಿರುವುದು. ಬಡಕುಟುಂಬದ ಆ ಹುಡುಗ ಶಾಲೆಗೆಂದು ಹೋದವನು ಇದ್ದಕ್ಕಿಂದಂತೆಯೇ ನಾಪತ್ತೆಯಾಗುತ್ತಾನೆ,  ಮನೆಮಂದಿ ಹುಡುಕಿ ಹುಡುಕಿ ಕೊನೆಗೆ ಪೊಲೀಸರಿಗೆ ದೂರು ಕೊಡುತ್ತಾರೆ, ಮಗನನ್ನು ಹುಡುಕಿ ಕೊಡಿ ಎಂದು. ಪೊಲೀಸರ ತನಿಖೆ ಮುಂದುವರಿದರೂ ಆ ಹುಡುಗ ಪತ್ತೆಯಾಗುವುದು 8 ತಿಂಗಳ ಬಳಿಕ ರಾಜ್ಯದ ರಾಜಧಾನಿಯಲ್ಲಿ. ಶಾಲೆಗೆಂದು ತೆರಳಿದ ಈತ ನಾಪತ್ತೆಯಾದ ಬಳಿಕ ಮನೆಮಂದಿ ಪಟ್ಟ ನೋವು ಅಷ್ಟಿಷ್ಟಲ್ಲ. ಪೊಲೀಸ್ ತನಿಖೆಯೆಲ್ಲಾ ಮುಗಿದ ಬಳಿಕ ಗೊತ್ತಾಗಿದ್ದು ಈತ ಕಲಿಕೆಯಲ್ಲಿ ಹಿಂದುಳಿದಿದ್ದ, ತಾನು ಪ್ರತಿಭಾವಂತನಲ್ಲ ಎಂದು ಭ್ರಮಿಸಿಕೊಂಡು ಹೊಟೇಲ್ ಕೆಲಸಕ್ಕಾಗಿ ರಾಜಧಾನಿಗೆ ತೆರಳಿದ್ದ ಎಂಬುದು.

ಜಾಹೀರಾತು

ನಾಲ್ಕನೆಯ ಪ್ರಕರಣವೇನೂ ಸಾಮಾನ್ಯವಲ್ಲ. ಮಕ್ಕಳನ್ನು ಬದುಕಿದ್ದೂ ಸತ್ತಂತಾ ಸ್ಥಿತಿಯನ್ನು ತರುವ ದುರಂತ ಉದಾಹರಣೆ. ಸುಳ್ಯ ತಾಲೂಕಿನ ಆ ಹುಡುಗ ಕಲಿಕೆಯಲ್ಲಿ  ತೀರಾ ಹಿಂದುಳಿದಿದ್ದ. ಹಾಗಾಗಿ ಮನೆಯಲ್ಲಿ ಶಾಲೆಯಲ್ಲಿ ಅವನಿಗೆ ಕಲಿಕಾ ವಿಚಾರದಲ್ಲಿ ಹೆಚ್ಚು ಒತ್ತಡವಿತ್ತು. ಹಾಗೆಂದು ಅವನು ತರಗತಿಯಲ್ಲಿ ಚುರುಕಿನ ಹುಡುಗನಾಗಿದ್ದ. ಪರೀಕ್ಷೆಯಲ್ಲಿ ಮಾತ್ರ ಯಾವುದೋ ಆಘಾತವಾದಂತೆ ಕುಳಿತುಕೊಳ್ಳುತ್ತಿದ್ದ. ಹಾಗಾಗಿ ಅವನಿಗೆ ಅತೀ ಕಡಿಮೆ ಅಂಕಗಳು ಸಿಕ್ಕುತ್ತಿದ್ದವು. ಇದರಿಂದ ಅವನ ಮೇಲಿನ ಒತ್ತಡಗಳು ಹೆಚ್ಚಾಗಿ ಒಂದು ದಿನ ಅವನ ಮನಸ್ಸು ಅವನ ನಿಯಂತ್ರಣದಿಂದ ದೂರವಾಯಿತು.  ಬಳಿಕ ವೈದ್ಯರ ಸಲಹೆಯಂತೆ ಹೆತ್ತವರು ನಡೆದುಕೊಂಡು ಅವನ ಬದುಕಿಗೆ ನೆಮ್ಮದಿ ತಂದರು. ಈಗ ಆ ಹುಡುಗ ಎಲ್ಲದರಲ್ಲೂ ಪಾಸ್ ಆಗುತ್ತಿದ್ದಾನೆ.

ಛೆ.. ಏನೆಲ್ಲಾ ನಡೆದು ಹೋಯಿತು.. ಶಾಲೆ, ಅಂಕ, ಪ್ರತಿಷ್ಠೆ, ಮಾಧ್ಯಮದ ಹೆಸರಿನಲ್ಲಿ. ಪ್ರತಿದಿನವೂ ಇಂತಹಾ ಘಟನೆಗಳು ನಡೆಯುತ್ತಲೇ ಇರುತ್ತದೆ. ಬೇರೆ ಬೇರೆ ಕಾರಣಗಳಿಂದ ಇದು , ಬಹಿರಂಗವಾಗುವುದಿಲ್ಲ, ಸುದ್ದಿಯಾಗುವುದೇ ಇಲ್ಲ. ಮಕ್ಕಳ ಬದುಕಿಗೆ ಭಾವನೆಗಳಿಗೆ ರಕ್ಷೆ ಯಾಗಬೇಕಾದ ಶಾಲೆಗಳು ಶಿಕ್ಷೆಯಾಗುತ್ತಿದೆಯೇ ಎಂಬ ಪ್ರಶ್ನೆಗಳು ಮೂಡುತ್ತಿದೆ. ಇಲ್ಲ ಹಾಗಾಗುತ್ತಿಲ್ಲ. ಅದೆಷ್ಟೋ ಶಾಲೆಗಳು ಮಕ್ಕಳ ಬದುಕಿಗೆ .ಪ್ರೇರಣೆಯಾಗುತ್ತಿದೆ. ಮನೆಯವರ ಪ್ರೋತ್ಸಾಹದಿಂದ ಮಕ್ಕಳು  ಮಿಂಚುತ್ತಿದ್ದಾರೆ. ಆದರೆ ಅಲ್ಲೋ ಇಲ್ಲೋ ಬೆರಳೆಣಿಕೆಯಷ್ಟು ನಡೆದಿರುವ ಇಂತಹ ದುರಂತದ ಘಟನೆಗಳು ಮಕ್ಕಳ ಮಾನಸಿಕ ಸ್ಥೈರ್ಯವನ್ನೇ ಕುಸಿಯುವಂತೆ ಮಾಡುತ್ತಿದೆ. ದಯವಿಟ್ಟು ಹೀಗಾಗಬಾರದು. ಮಕ್ಕಳ ವಿಕಸನಕ್ಕೆ ಪೂರಕವಾದ ವಾತಾವರಣ ಶಾಲೆ ಹಾಗೂ ಮನೆಗಳಲ್ಲಿ ಬೇಕು.  ಅಂದರೆ ಅಂಕಕ್ಕೆ ಪ್ರಾಧಾನ್ಯತೆ ಕೊಡಬೇಕಾಗಿಲ್ಲ ಎಂದರ್ಥವಲ್ಲ.  ಅಂಕಗಳಿಸುವಿಕೆಯಲ್ಲೂ ಮಕ್ಕಳ ನಡುವೆ ಆರೋಗ್ಯಕರ ಸ್ಪರ್ಧೆಯಿರಬೇಕು. ಕೆಲವೊಮ್ಮೆ ಮಕ್ಕಳಿಗಿಂತ ಮಕ್ಕಳ ಪೋಷಕರಿಗೆ ಅಂಕಗಳ ಬಗ್ಗೆ ಅತಿಯಾದ ಆಸಕ್ತಿ  ಇರುತ್ತದೆ. ಅದರಲ್ಲಿ ಅವರ ಪ್ರತಿಷ್ಠೆಯೂ ಅಡಗಿರುತ್ತದೆ. ಇದು ಮಕ್ಕಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ.

ನಮ್ಮ ಮಕ್ಕಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅವರ ಆಸಕ್ತಿಗೆ ತಕ್ಕಂತೆ ಅವರನ್ನು ಬೆಂಬಲಿಸುವುದು, ಕ್ರಿಯಾಶೀಲರಾಗಿ ಮುನ್ನಡೆಯುವ ನಿಟ್ಟಿನಲ್ಲಿ ಅವರಲ್ಲಿ ಹೊಸ ಚಿಂತನೆಗಳನ್ನು ಹುಟ್ಟುಹಾಕುವುದು, ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿ ಮಕ್ಕಳ ಬದುಕಿನಲ್ಲಿ ಹುರುಪು-ಚೈತನ್ಯ ತುಂಬಿ, ಆ ಮಕ್ಕಳು ಪ್ರಕೃತಿಯನ್ನು-ಪರಿಸರದ ಎಲ್ಲರನ್ನೂ ಪ್ರೀತಿಸುವಂತಾಗಬೇಕು. ಅಗ ಮಾತ್ರ ಮಕ್ಕಳು ಬದುಕಿನಲ್ಲಿ ಗೆಲ್ಲುತ್ತಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Mounesh Vishwakarma

ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Share
Published by
Mounesh Vishwakarma