ನಮ್ಮ ಭಾಷೆ

ಪರಕೀಯರು ನಮ್ಮ ಭೂತಗಳನ್ನು ದುಷ್ಟವಾಗಿಸಿದರು

ದಕ್ಷಿಣ ಭಾರತದ ಜನಾಂಗವನ್ನು ದ್ರಾವಿಡರೆಂದು, ಉತ್ತರ ಭಾರತದ ಜನರನ್ನು ಆರ್ಯರೆಂದು ಕರೆಯುತ್ತಾರೆ. ಆರ್ಯರು ಚಂದ್ರನ ಚಲನೆಯನ್ನು ನಂಬಿದರೆ ದ್ರಾವಿಡರು ಸೂರ್ಯನ ಚಲನೆಯನ್ನು ಅನುಸರಿಸುತ್ತಾರೆ. ಆರ್ಯರು ದೇವರ ಕಲ್ಪನೆಯನ್ನು ಹೊಂದಿದ್ದರೆ, ದ್ರಾವಿಡರು ತಮ್ಮ ಹಿರಿಯರನ್ನು ನಂಬುತ್ತಿದ್ದರು. ಆರ್ಯರಿಗೆ ಸತ್ತವರು ಸ್ವರ್ಗ ಸೇರುತ್ತಾರೆ ಎಂಬ ಕಲ್ಪನೆ ಇದ್ದರೆ, ದ್ರಾವಿಡರಿಗೆ ಸತ್ತವರು ಅಗೋಚರವಾಗಿ ನಮಗೆ ಸಹಾಯ ಮಾಡುತ್ತಾರೆ ಎಂಬ ಕಲ್ಪನೆ ಇದೆ. ಆದುದರಿಂದ ದ್ರಾವಿಡರು ತಮ್ಮ ಹಿರಿಯರನ್ನೇ ಪೂಜಿಸುವ ಕ್ರಮ ಇದೆ. ಇದೇ ಮುಂದೆ ಭೂತಗಳಾಗಿ ದೈವಗಳಾಗಿ ಮನೆಯ, ಊರಿನ, ಬೂಡಿನ, ಗುತ್ತಿನ ರಕ್ಷಕ ದೈವಗಳಾಗಿವೆ

ಜಾಹೀರಾತು

ಸಂಗ ಸಾಹಿತ್ಯದಲ್ಲಿ ಸುಮಾರು ಎರಡನೇ ಶತಮಾನದಲ್ಲಿ ಭೂತ ದೈವಗಳ ವಿಚಾರ ಪ್ರಸ್ತಾವಿಸಲಾಗಿದೆ. ಆ ಕಾಲದಲ್ಲಿ ಭೂತಗಳು ಕರುಣೆ, ದಯಾಮಯಿಯಾಗಿದ್ದರು. ಆದುದರಿಂದಲೇ ಆ ಕಾಲದಲ್ಲಿ ಭೂತಗಳ ಹೆಸರನ್ನು ಜನರು ಇಟ್ಟುಕೊಳ್ಳುವ ಕ್ರಮವಿತ್ತು. ಉದಾಹರಣೆಗೆ ಭೂತ ಪಾಂಡಿಯನ್, ಭೂತನಾರ್, ಸೇತ್ತ ಭೂತನಾರ್ ಎಂದು ಹೆಸರುಗಳು ಇದ್ದವು.

ಗುತ್ತು, ಬಾರ್ಕೆ, ಬಾಳಿಕೆ, ಭಾವ ಬೂಡು, ನಟ್ಟಿಲ್ಲು, ಜನನ, ಮೊದಲಾದ ಘನವೆತ್ತ ಮನೆತನಗಳಿಗೆ ಪ್ರತ್ಯೇಕ ಭೂತಗಳು ಇದ್ದು, ಅವುಗಳ ಆರಾಧನೆ, ನೇಮ, ಕೋಲ, ಅಗೇಲು ಸೇವೆಗಳು ನಡೆಯುತ್ತಿವೆ. ಅವುಗಳ ಹುಟ್ಟು, ಬೆಳವಣಿಗೆ, ಕಾರ್ಣಿಕಗಳ ಬಗ್ಗೆ ಪಾಡ್ದನಗಳಲ್ಲಿ ವಿವರಿಸಲಾಗಿದೆ. ಪ್ರತಿ ತರವಾಡು ಮನೆಗಳಲ್ಲಿ ಈಗಲೂ ಹಿರಿಯಯ ಎಂಬ ದೈವ ಇದ್ದು, ಈ ದೈವ ಆ ತರವಾಡಿನ ಮೂಲಪುರುಷರಾಗಿರುತ್ತಾರೆ.

ತುಳುನಾಡಿನಲ್ಲಿ ಮಂಗಳೂರು ಮತ್ತು ಬಾರಕ್ಕರ ಎರಡು ರಾಜಧಾನಿಗಳಿದ್ದವು. ಕರಾವಳಿ ಭಾಗಕ್ಕೆ ವ್ಯಾಪಾರಕ್ಕಾಗಿ ವಿದೇಶಿಯರು ಬರಲು ಆರಂಭವಾದ ಮೇಲೆ ಇಲ್ಲಿಯ ಸಿರಿವಂತಿಕೆ ನೋಡಿ ಈ ತುಳುನಾಡನ್ನು ವಶಪಡಿಸುವ ಹುನ್ನಾರ ನಡೆಯಿತು. ಹೀಗೆ ಬಂದ ಪೋರ್ಚುಗೀಸರು, ಫ್ರೆಂಚರು, ಇಂಗ್ಲೀಷರು ಭೂತಗಳನ್ನು ಡೆವಿಲ್ ಎಂದೂ ಅನಿಷ್ಠ ಎಂದೂ ಹೇಳಿದರು.  ಇವರ ಪ್ರಭಾವದಿಂದ ದಯಾಮಯವಾಗಿದ್ದ ನಮ್ಮ ಭೂತಗಳು ಕ್ರೂರಿಯಾದವು. ಇನ್ನೊಬ್ಬರ ನಂಬಿಕೆಗಳನ್ನು ಕೊಲ್ಲುತ್ತಾ ಮತಪ್ರಚಾರ ಮಾಡುವ ಸಂದರ್ಭ ತುಳುವರ ನಂಬಿಕೆಗಳನ್ನು ಕೊಲ್ಲಲಾಯಿತು. ಬಾಸೆಲ್ ಮಿಷನ್ ನವರು ತುಳುವನ್ನು ಕನ್ನಡ ಅಕ್ಷರಗಳಲ್ಲಿ ತುಳು ಸುವಿಶೇಷ ಎಂಬ ಪುಸ್ತಕವನ್ನು 1842ರಲ್ಲಿ ಪ್ರಕಟಿಸಿದರು. 1859ರಲ್ಲಿ ತುಳು ಬೈಬಲ್ ಪ್ರಕಟವಾಯಿತು. ಹೀಗೆ ತುಳು ಸಾಹಿತ್ಯ ಕನ್ನಡದಲ್ಲಿ ರಚನೆಯಾಯಿತು. ನಿಮ್ಮ ಎಲ್ಲ ಕಷ್ಟಗಳಿಗೆ ಭೂತಗಳೇ ಕಾರಣ ಎಂದು ಹೇಳಿ ಮತಾಂತರ ಮಾಡಲು ಆರಂಭಿಸಿದಾಗ ಭೂತಗಳು ದುಷ್ಟರು ಎಂಬಂತೆ ನೋಡಲಾರಂಭಿಸಿದರು.

ಲೇಖಕರ ದೂರವಾಣಿ ಸಂಖ್ಯೆ: 9481917204

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.