ಬಿ.ಸಿ.ರೋಡಿನ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಭಾನುವಾರ ನಡೆದ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಬೊಳುವಾರು ಮಹಮ್ಮದ್ ಕುಂಞ ಅವರ ಸಾಹಿತ್ಯ – ಮುಖಾಮುಖಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ನೀತಿ, ಉತ್ತರ ಪ್ರದೇಶ ಚುನಾವಣೆ ವಿಚಾರಗಳು ಚರ್ಚೆಗೆ ಗ್ರಾಸವಾಯಿತು.
ಆರಂಭದಲ್ಲಿ ಬೊಳುವಾರು ಅವರ ಸ್ವಾತಂತ್ರ್ಯದ ಓಟ ಕೃತಿ ಸಹಿತ ಅವರ ಕಾದಂಬರಿಗಳ ಕುರಿತು ಮಾತನಾಡಿದ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ, ಬೊಳುವಾರು ಅವರ ಈ ಕಾದಂಬರಿಯ ಒಳಗೆ ಕಥೆಗಳು ಬರುತ್ತವೆ. ಸ್ವಾತಂತ್ರ್ಯದ ಓಟದಲ್ಲಿ ನಾವು ಹೇಗೆ ಬದುಕಬೇಕು ಎಂಬ ಗತಿಬಿಂಬ ಇಲ್ಲಿದೆ ಎಂದರು. ಒಡೆಯುವ ಸಂದರ್ಭ ಬಂದಾಗ, ಒಡೆಯುವ ಶಕ್ತಿಗಳನ್ನು ಜೋಡಿಸುವ ಕೆಲಸ ಮಾಡುವ ಮೂಲಕ ಮುತ್ತುಪ್ಪಾಡಿ ಗ್ರಾಮ ಆದರ್ಶ ಗ್ರಾಮವಾಗುತ್ತದೆ ಎಂದು ಡಾ. ಚಂದ್ರಗಿರಿ ಹೇಳಿದರು.
ಬೊಳುವಾರು ಅವರ ಕಥೆಗಳ ಕುರಿತು ಮಾತನಾಡಿದ ಸಂತ ಅಲೋಶಿಯಸ್ ಸಂಧ್ಯಾ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ. ಮಹಾಲಿಂಗ, ತುಳು ಬದುಕಿನ ಕುರಿತು ಬೊಳುವಾರು ತಮ್ಮ ಕಥೆಗಳಲ್ಲಿ ಬರೆದಿದ್ದಾರೆ. ಅವರ ಕಥೆಗಳೆಲ್ಲವೂ ತುಳುನಾಡಿನ ಕಥೆಗಳು. ಬದುಕಿನ ಚಿತ್ರಣದ ದರ್ಶನ ಬೊಳುವಾರು ಕಥೆಗಳಲ್ಲಡಗಿದೆ ಎಂದು ಹೇಳಿದರು.
ಅದಾದ ಬಳಿಕ ಮಾತನಾಡಿದ ಬೊಳುವಾರು, ತಮ್ಮ ಕೃತಿಯ ಕುರಿತು ಮಾತನಾಡುತ್ತಲೇ, ಎರಡು ಮತಗಳ ನಡುವೆ ಅನುಮಾನ ಹುಟ್ಟುವಂತೆ ಕೆಲ ಘಟನೆಗಳು ಕಾರಣವಾಗಿವೆ ಎಂದರು. ತನ್ನ ಕೃತಿಗಳಲ್ಲಿ ಬರುವ ಮುತ್ತುಪ್ಪಾಡಿ ಎಂಬ ಕಾಲ್ಪನಿಕ ಊರಿನಲ್ಲಿ ನಮ್ಮೂರ ತಲ್ಲಣಗಳ ಕುರಿತು ಪ್ರಸ್ತಾಪಿಸಿದ್ದೇನೆ ಎಂದ ಅವರು, ಮುಸ್ಲಿಂ ಬದುಕಿನ ಬಗ್ಗೆ ಬರೆಯುವ ಬರಹಗಾರರು ಇಂದು ಕಡಿಮೆಯಾಗಿದ್ದಾರೆ. ಓದುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು. ಬಳಿಕ ಮಾನವೀಯತೆ, ಸೌಹಾರ್ದತೆಯ ಪಾಠ ಮಾಡಿದ ಬೊಳುವಾರು, ನಾವು ಉತ್ತರ ಪ್ರದೇಶ ಚುನಾವಣೆ ಚಿಂತೆ ಮಾಡುವ ಬದಲು ನೆರೆಮನೆಯ ಜನರನ್ನು ಪರಿಚಯ ಮಾಡಿಕೊಳ್ಳೋಣ, ಇದರಿಂದ ಸೌಹಾರ್ದತೆ ಬೆಳೆಯುತ್ತದೆ ಎಂದರು. ಆದರೆ ಸ್ಪಲ್ಪ ಹೊತ್ತಿನಲ್ಲೇ ಉತ್ತರ ಪ್ರದೇಶ ಚುನಾವಣೆ, ಪ್ರಧಾನಮಂತ್ರಿಯ ನೀತಿ, ರಾಜಕೀಯ ಓಟ್ ಬ್ಯಾಂಕ್ ವಿಚಾರಗಳನ್ನು ಖುದ್ದು ಬೊಳುವಾರು ಅವರೇ ಪ್ರಸ್ತಾಪಿಸಿದರು. ಟಿವಿ ರಿಯಾಲಿಟಿ ಶೋ ಕೂಡ ಬೊಳುವಾರು ಭಾಷಣದಲ್ಲಿ ಕೇಳಿಬಂತು.
ಅದಾದ ಬಳಿಕ ಬೊಳುವಾರು ಅವರೊಂದಿಗೆ ಸಂವಾದ ಆರಂಭವಾಯಿತು. ಆಗ ಬೊಳುವಾರು ಅವರು ಭಾಷಣದಲ್ಲಿ ಪ್ರಸ್ತಾಪಿಸಿದ ಸಾಮಾಜಿಕ, ರಾಜಕೀಯ ವಿಚಾರಗಳದ್ದೇ ಪ್ರಶ್ನೆಗಳು ಬಂದವು. ಸಭಿಕರೊಬ್ಬರು ಏಕರೂಪದ ನಾಗರಿಕ ಸಂಹಿತೆ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಕೇಳಿದರು. ಆದರೆ ಏಕರೂಪ ನಾಗರಿಕ ಸಂಹಿತೆ ಅಂದರೆ ಏನು ಎಂದು ಕೇಳಿದವರನ್ನೇ ಬೊಳುವಾರು ಪ್ರಶ್ನಿಸಿದರು. ಚರ್ಚೆ ದಾರಿ ತಪ್ಪುತ್ತಿದೆ, ಇಲ್ಲಿ ನಿಜವಾಗಿ ನಡೆಯಬೇಕಾದ ಸಾಹಿತ್ಯ ಸಂವಾದ ನಡೆಯುತ್ತಿಲ್ಲ ಎಂದು ಈ ಸಂದರ್ಭ ಎದ್ದು ನಿಂತ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯನ ಆಳ್ವ ಆಕ್ಷೇಪಿಸಿದರು. ಆಗ ಬೊಳುವಾರು ಅವರು ಅವರನ್ನು ಸಮಾಧಾನಪಡಿಸಿದರು. ಕೆಲ ಹೊತ್ತಿನಲ್ಲೇ ಸಂವಾದ ಮುಗಿಯಿತು.
ಸನ್ಮಾನ
ಬೊಳುವಾರು ಅವರನ್ನು ಅಭಿರುಚಿ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಸನ್ಮಾನ ಕಾರ್ಯ ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷ ಕೆ.ಮೋಹನ ರಾವ್ ಈ ಸಂದರ್ಭ ಉಪಸ್ಥಿತರಿದ್ದರು.
ಸಂವಾದ ಕಾರ್ಯಕ್ರಮದಲ್ಲಿ ಡಾ. ವೀಣಾ ತೋಳ್ಪಾಡಿ, ಡಾ.ಅಜಕ್ಕಳ ಗಿರೀಶ ಭಟ್, ಪಿ.ಎ.ರಹೀಂ, ಕೆ.ಎಚ್.ಅಬೂಬಕ್ಕರ್, ಡಿ.ಬಿ.ಅಬ್ದುಲ್ ರಹಿಮಾನ್, ಜಯಾನಂದ ಪೆರಾಜೆ ಮೊದಲಾದವರು ಪಾಲ್ಗೊಂಡರು.
ರಾಧೇಶ ತೋಳ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಚೇತನ್ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಮಹಾಬಲೇಶ್ವರ ಹೆಬ್ಬಾರ ವಂದಿಸಿದರು.