ನಮ್ಮ ಭಾಷೆ

ಸಿರಿತನದಲ್ಲಿ ಮೇಲ್ಮಟ್ಟದಲ್ಲಿದ್ದ ತುಳುನಾಡು, ತುಳು ಭಾಷೆ

ಸಂಗ ಸಾಹಿತ್ಯದ ಕವಿತೆಯೊಂದು ತುಳುನಾಡಿನ ಸಿರಿತನವನ್ನು, ಶೌರ್ಯವನ್ನು ಹೊರಜಗತ್ತಿಗೆ ತೋರಿಸುತ್ತದೆ. ತುಳುನಾಡು ಮತ್ತು ತುಳುವರು ಅಂದು ಸಿರಿವಂತರೇ ಆಗಿದ್ದರು.

  • ಬಿ.ತಮ್ಮಯ್ಯ
  • ಅಂಕಣ: ನಮ್ಮ ಭಾಷೆ
  • www.bantwalnews.com

ತುರುವ ಜನಾಂಗ ನೆಲೆನಿಂತ ಊರು ಈ ತುಳುನಾಡು ಎಂದರು ಇತಿಹಾಸಕಾರರು. ಪರಶುರಾಮ ಸಹ್ಯಾದ್ರಿಯಿಂದ ಕೊಡಲಿ ಎಸೆದು, ಅದು ಬಿದ್ದ ಜಾಗದವರೆಗೆ ಸಮುದ್ರ ಹಿಂದೆ ಸರಿದುದರಿಂದ ಉಂಟಾದ ಊರೇ ಪರಶುರಾಮ ಸೃಷ್ಟಿ. ಇದು ತುಳುನಾಡು ಎಂದು ಪುರಾಣದಲ್ಲಿ ವಿವರಿಸಲಾಗಿದೆ.

ಸಮುದ್ರದಲ್ಲಿ ಸುನಾಮಿ ಉಂಟಾಗಿ ಆಫ್ರಿಕ ಖಂಡದ ಒಂದು ತುಂಡು ಭೂಭಾಗ ತೇಲುತ್ತಾ ಬಂದು, ಸಹ್ಯಾದ್ರಿಗೆ ಅಂಟಿಕೊಂಡು ಉಂಟಾದ ಈ ಭೂಭಾಗ ಎಂದು ಭೌಗೋಳಿಕ ತಜ್ಞರ ಅಭಿಪ್ರಾಯ. ಸಮುದ್ರದ ಸುಳಿ ತಾಗುವ ಈ ಭೂಭಾಗ ತುಳುನಾಡೆಂದು ಕೆಲವರ ಅಭಿಮತ.

ಏನೇ ಆದರೂ ಈ ಭೂಭಾಗ ಬಹಳ ಹಿಂದಿನಿಂದಲೂ ಊರ್ಜಿತದಲ್ಲಿದ್ದುದನ್ನು ಅನೇಕ ಇತಿಹಾಸಗಳು ದೃಢೀಕರಿಸುತ್ತವೆ.

ತುಳುನಾಡು ತುಂಬಾ ಸಮೃದ್ಧವಾದ ನಾಡು ಎಂಬುದಕ್ಕೆ ಸಂಗ ಸಾಹಿತ್ಯದಲ್ಲಿ ಒಂದು ಘಟನೆ ಇದೆ. ನನ್ನನ್ ರಾಜನ ತೋಟದಲ್ಲಿ ಮಾವಿನ ಮರವಿತ್ತು. ಆ ಮರದ ಪಕ್ಕದಲ್ಲಿ ನದಿಯೊಂದು ಹರಿದು ಹೋಗುತ್ತಿತ್ತು. ಆ ಮಾವಿನ ಮರದ ಹಣ್ಣೊಂದು ನದಿಗೆ ಬಿದ್ದು ಕೊಚ್ಚಿ ಹೋಯಿತು. ಅಲ್ಲಿ ಸ್ನಾನ ಮಾಡುತ್ತಿದ್ದ ಹುಡುಗಿ ಅದನ್ನು ತಿಂದಳು. ಅರಸರಿಗೆ ವಿಚಾರ ತಿಳಿಯಿತು. ಆ ಕಾಲದಲ್ಲಿ ಅರಸರ ವಸ್ತು ಉಪಯೋಗಿಸಿದವರಿಗೆ ಮರಣದಂಡನೆ ಶಿಕ್ಷೆ. ಹಾಗೆ ಆ ಹುಡುಗಿಗೆ ಮರಣದಂಡನೆ ನೀಡಲಾಯಿತು. ಆ ಹುಡುಗಿಯ ತಂದೆ ತಿಳಿಯದೆ ಮಾಡಿದ ಅಪರಾಧಕ್ಕೆ ಕ್ಷಮಿಸಿ, ತಪ್ಪಿಗಾಗಿ ತೊಂಭತ್ತೊಂಭತ್ತು ಆಸೆಗಳನ್ನು ಆ ಹುಡುಗಿಯಷ್ಟೇ ಭಾರದ ಚಿನ್ನವನ್ನು ಕೊಡುವುದಾಗಿ ಹೇಳಿದನು. ಆದರೆ ನನ್ನನ್ ರಾಜ ಒಪ್ಪದೆ ಆಕೆಗೆ ಮರಣದಂಡನೆ ನೀಡುತ್ತಾನೆ. ಈ ಕೃತ್ಯವನನು ಕಂಡ ಕೋಶ ಜನಾಂಗ, ನನ್ನನ್ ರಾಜನನ್ನು ದ್ವೇಷಿಸತೊಡಗಿದರು. ಕೋಶರು ಆ ಮಾವಿನ ಮರವನ್ನು ಕಡಿದು ಹಾಕಿದರು.

ಇಲ್ಲಿ ಎರಡು ವಿಚಾರ ಗಮನಿಸಬೇಕು. ಸಾಮಾನ್ಯ ವ್ಯಕ್ತಿ 99 ಆಸೆಗಳನ್ನು ಒಂದು ಹುಡುಗಿಯ ಭಾರದಷ್ಟೇ ಚಿನ್ನ ಕೊಡಬೇಕಾದರೆ, ಆ ವ್ಯಕ್ತಿಯ ಸಂಪತ್ತು ಎಷ್ಟಿರಬೇಕು?

ಎರಡನೇಯದಾಗಿ ರಾಜನ ತಪ್ಪು ನಿರ್ಧಾರದಿಂದ ಜೀವ ಕಳೆದುಕೊಂಡ ಹೆಣ್ಣಿನ ಬಗ್ಗೆ ಸೇಡು ತೀರಿಸಲು ಕೋಶರು ರಾಜನ ಮಾವಿನ ಮರವನ್ನೇ ಕಡಿದು ಹಾಕಿದರೆಂದರೆ ಅವರ ಶೌರ್ಯ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಗಮನಿಸಬೇಕು. ಸಂಗ ಸಾಹಿತ್ಯದ ಈ ಕವಿತೆಯು ತುಳುನಾಡಿನ ಸಿರಿತನವನ್ನು ಶೌರ್ಯವನ್ನು ಹೊರಜಗತ್ತಿಗೆ ತೋರ್ಪಡಿಸುತ್ತದೆ. ಹೀಗೆ ತುಳುನಾಡು ಮತ್ತು ತುಳುವರು ಸಿರಿವಂತರೇ ಆಗಿದ್ದರು.

(ಲೇಖಕರ ದೂರವಾಣಿ ಸಂಖ್ಯೆ: 9481917204)

B Thammayya

ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Recent Posts