ಸರಕಾರ ಮಾಡಬೇಕಾದ ಕಾರ್ಯವನ್ನು ಪ್ರಕಾಶ್ ಅಂಚನ್ ಹಾಗೂ ಅವರ ಯುವಕರ ತಂಡ ಮಾಡಿದೆ. ಶಾಲೆ ನಿರ್ಮಾಣದ ಕಾರ್ಯ ಅವರಿಗೆ ಹೊರೆಯಾಗದಂತೆ ಎಲ್ಲರೂ ಕೈ ಜೋಡಿಸಬೇಕಾಗಿದೆ. ಹೊರರಾಜ್ಯಳಿಗೆ ಭೇಟಿ ನೀಡುವ ಮೂಲಕ ಬಂಟ್ವಾಳದ ಕೀರ್ತಿಯನ್ನು ಅವರು ದೇಶಾದ್ಯಂತ ಪಸರಿಸಿದ್ದಾರೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ ಪಂಜಿಕಲ್ಲು ಹಾಗೂ ಹುಟ್ಟೂರ ಅಬಿನಂದನ ಸಮಿತಿ ಆಶ್ರಯದಲ್ಲಿ ಕೇಲ್ದೋಡಿ ಶ್ರೀ ವೈದ್ಯನಾಥ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಶುಕ್ರವಾರ ರಾತ್ರಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್‌ಗೆ ಹುಟ್ಟೂರ ಅಭಿನಂದನೆ ಸಲ್ಲಿಸಿ ಆಶೀರ್ವಚನ ನೀಡಿದರು.
ನಿಂದನೆ ಒಳ್ಳೆಯದು. ನಿಂದಕರಿರುವರೆಗೆ ನಾವು ಉತ್ತಮ ಸಾಧನೆ ಮಾಡಲು ಸಾಧ್ಯವಿದೆ. ಒಳಿತು ಮಾಡುವವರಿಗೆ ಕೆಡುಕು ಮಾಡುವವರು ಸಮಾಜದಲ್ಲಿ ಇದ್ದೇ ಇರುತ್ತಾರೆ. ಇಂತವರ ಬಗ್ಗೆ ತಲೆಕೆಡಿಸಿಕೊಳ್ಳದೆ ನಾಮ್ಮ ಸಾಧನೆಯ ಗುರಿಯನ್ನು ಮುಟ್ಟಬೇಕು ಎಂದು ಅವರು ಹೇಳಿದರು.
ಸಂಸದ ನಳೀನ್ ಕುಮಾರ್ ಕಟೀಲು ಮುಖ್ಯ ಅತಿಥಿಯಾಗಿ ಮಾತನಾಡಿ ದೇಶಾಧ್ಯಂತ ಏಕರೂಪದ ಶಿಕ್ಷಣ ಜಾರಿಗೊಳಿಸಬೇಕೆನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಕನಸು ಆಗಿದೆ. ಅದೇ ಹೋರಾಟದಲ್ಲಿರುವ ಪ್ರಕಾಶ್ ಅಂಚನ್ ಅವರಿಗೆ ನಮ್ಮ ಬೆಂಬಲವೂ ಇದೆ ಎಂದು ಘೋಷಿಸಿದರು.
ಇದು ಹೃದಯದ ಸನ್ಮಾನ. ಇದರಿಂದಾಗಿ ಪ್ರಕಾಶ್ ಅಂಚನ್ ಅವರ ಜವಾಬ್ದಾರಿ ಇನ್ನೂ ಹೆಚ್ಚಿದೆ. ದಡ್ಡಲಕಾಡು ಮಾತ್ರವಲ್ಲದೆ ದ.ಕ.ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳಿಗೆ ನೀವು ಹೋಗಬೇಕು ಎಂದ ಅವರು ಶಾಲೆ ಹತ್ತಾರು ಧರ್ಮದ ದೇವರಿರುವ ದೇಗುಲ ಎಂದರು.
ಪತ್ರಕರ್ತ ಗೋಪಾಲ ಅಂಚನ್ ಅಭಿನಂದನ ಭಾಷಣ ಮಾಡಿ ಪ್ರಕಾಶ್ ಅಂಚನ್ ಓರ್ವ ವ್ಯಕ್ತಿಯಲ್ಲ. ಅವರು ಒಂದು ಶಕ್ತಿ ಎಂದರು. ಶ್ರೇಷ್ಟ ಚಿಂತನೆ, ಶ್ರೇಷ್ಟ ಆಚರಣೆ ಯಾರಲ್ಲಿರುತ್ತದೆಯೋ ಅವರು ಶ್ರೇಷ್ಟ ವ್ಯಕ್ತಿಗಳಾಗುತ್ತಾರೆ. ತನ್ನ ಶ್ರೇಷ್ಟ ಚಿಂತನೆಯಿಂದಾಗಿ ಪ್ರಕಾಶ್ ಅಂಚನ್ ಶ್ರೇಷ್ಟ ವ್ಯಕ್ತಿಯಾಗಿದ್ದಾರೆ ಎಂದರು. ಪ್ರತೀ ವ್ಯಕ್ತಿಯಲ್ಲೂ ದೇವರನ್ನು ಕಾಣುವ ಗುಣ ಅವರಲ್ಲಿದ್ದು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ್ ಅಂಚನ್ ಪ್ರತಿಯೊಬ್ಬ ಬಡವನ ಮಗುವಿಗೂ ಶಿಕ್ಷಣ ಸಿಗುವರೆಗೆ, ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗೆ ಸರಕಾರಿ ನೌಕರಿ ಸಿಗುವವರೆಗೆ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದರು.
ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಪ್ರಮುಖರಾದ ಚಂದಪ್ಪ ಅಂಚನ್, ಲೀಲಾಕ್ಷ ಕರ್ಕೇರಾ, ಸಮಿತಿಯ ಗೌರವಾಧ್ಯಕ್ಷ ಕೋಟಿ ಪೂಜಾರಿ ಕೇಲ್ದೊಡಿ ಗುತ್ತು, ಅಧ್ಯಕ್ಷ ಕರುಣೇಂದ್ರ ಪೂಜಾರಿ, ಪ್ರಧಾನ ಅರ್ಚಕ ಶ್ರೀಪತಿ ಭಟ್ ವೇದಿಕೆಯಲ್ಲಿದ್ದರು.
ಪುರುಷೋತ್ತಮ ಅಂಚನ್ ಸ್ವಾಗತಿಸಿ, ದಿನೇಶ್ ನಿರೂಪಿಸಿ ವಂದಿಸಿದರು.