ಕವರ್ ಸ್ಟೋರಿ

ಸಂಬಂಧ ಬೆಸೆಯುವ ಸೌಹಾರ್ದ ಸೇತುವೆ

  • ಹರೀಶ ಮಾಂಬಾಡಿ

www.bantwalnews.com

Pic: Shamsheer Budoli

ಕಡೇಶಿವಾಲಯ – ಅಜಿಲಮೊಗರು ಮಧ್ಯೆ ಹರಿಯುವ ನೇತ್ರಾವತಿ ನದಿಗೆ ಸೇತುವೆಯೊಂದನ್ನು ನಿರ್ಮಿಸುವ ಪ್ರಸ್ತಾಪ ಹಳೇಯದ್ದು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಈ ಬೇಡಿಕೆಗೆ ಸ್ಪಂದಿಸಿದ್ದಾರೆ. 31 ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ಸೇತುವೆ ನಿರ್ಮಾಣಗೊಳ್ಳಲಿದೆ. ಈ ಕುರಿತು ಬಂಟ್ವಾಳನ್ಯೂಸ್ ನಲ್ಲಿದೆ ಮಾಹಿತಿ.

ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೇತ್ರಾವತಿ ನದಿಯ ಬಲದಂಡೆಯಲ್ಲಿ ಮಣಿನಾಲ್ಕೂರು ಗ್ರಾಮದಲ್ಲಿ ಅಜಿಲಮೊಗರು ಮಸೀದಿ ಇದೆ. ಎಡದಂಡೆಯಲ್ಲಿ ಕಡೇಶಿವಾಲಯ ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವಿದೆ. ಇದರ ನಡುವೆ ಹರಿಯುವ ನೇತ್ರಾವತಿ ನದಿ ಪಾತ್ರವು ಸಂಪರ್ಕರಹಿತವಾಗಿದೆ. ಅಜಿಲಮೊಗರು ಮಸೀದಿ ಹಾಗೂ ಕಡೇಶಿವಾಲಯ ಲಕ್ಷ್ಮೀನರಸಿಂಹ ಸ್ವಾಮೀ ದೇವಸ್ಥಾನವು ಪುರಾತನ ಕಾಲದಿಂದಲೂ ಪ್ರಸಿದ್ಧಿಯನ್ನು ಹೊಂದಿರುವ ಧಾರ್ಮಿಕ ಕೇಂದ್ರಗಳಾಗಿವೆ. ಈಗಲೂ ಹಲವು ಜಿಲ್ಲೆಗಳಿಂದ ಭಕ್ತರು ಈ ಎರಡೂ ಕ್ಷೇತ್ರಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಸುಮಾರು 700 ಕ್ಕೂ ಅಕ ವರ್ಷಗಳ ಇತಿಹಾಸವಿರುವ ಅಜಿಲಮೊಗರು ಮಾಲಿದಾ ಹರಕೆ ಆಚರಣೆಗೆ ಬೇರೆ ಬೇರೆ ರಾಜ್ಯಗಳಿಂದ ಜನರು ಬರುತ್ತಾರೆ. ಮೊಗರ್ನಾಡು ಮಾಗಣೆಗೆ ಸೇರಿದ ಕಡೇಶಿವಾಲಯ ನರಸಿಂಹ ಕ್ಷೇತ್ರವೆಂದು ಪ್ರಸಿದ್ಧ ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ಸಹಸ್ರಲಿಂಗೇಶ್ವರನೂ ನರಸಿಂಹ ಸ್ವಾಮಿಯೂ ಜೊತೆಯಾರುವರು ಎಂದು ಕ್ಷೇತ್ರಪುರಾಣ ಹೇಳುತ್ತದೆ.

ಇಲ್ಲಿಗೆ ಅಡ್ಡಲಾಗಿ ದ್ವಿಪಥ ಸೇತುವೆಯೊಂದು 31 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. 350 ಮೀಟರ್ ಉದ್ದದ ಈ ಸೇತುವೆಯನ್ನು ಕೆಆರ್ ಡಿಸಿಎಲ್ ನವರು ನಿರ್ಮಿಸುವರು. ಎರಡು ಧಾರ್ಮಿಕ ಕೇಂದ್ರಗಳನ್ನು ಬೆಸೆಯಲು ಸಹಕಾರಿ. ಸರಪಾಡಿ ಭಾಗವನ್ನು ಪುತ್ತೂರು ತಾಲೂಕಿಗೆ ನಿಕಟವಾಗಿಸುವ ಅವಕಾಶ ಈ ಸೇತುವೆಗೆ ಇದೆ. ಹೀಗಾಗಿ ಅಜಿಲಮೊಗರು ಮತ್ತು ಕಡೇಶಿವಾಲಯ ಬೆಸೆಯುವ ಸೇತುವೆಗೆ ದಶಕಗಳಿಂದಲೇ ಬೇಡಿಕೆ ಇತ್ತು. ಈಗ ಅದು ಈಡೇರುವ ಹಂತಕ್ಕೆ ಬಂದಿದೆ.

ಜಾಹೀರಾತು

ಈ ಕುರಿತು ಲೋಕೋಪಯೋಗಿ ಇಲಾಖೆ ಕಾಮಗಾರಿಯ ರೇಖಾ ಅಂದಾಜುಪಟ್ಟಿಯನ್ನು ಕೆಆರ್ ಡಿಸಿಎಲ್ ಗೆ ಸಲ್ಲಿಸಿದೆ. ಇನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಈ ಸೇತುವೆಯನ್ನು ನಿರ್ಮಿಸಬೇಕು. ಸುಮಾರು 350 ಮೀ ಅಗಲದ ಸೇತುವೆ ಇದಾಗಲಿದೆ. ನದಿಗೆ ಅಡ್ಡಲಾಗಿ ದ್ವಿಪಥ ಸೇತುವೆಯನ್ನು ನಿರ್ಮಿಸಲಾಗುತ್ತದೆ. ಸರಿಸುಮಾರು ಬಿ.ಸಿ.ರೋಡ್-ಪಾಣೆಮಂಗಳೂರು ಸೇತುವೆಯಂತೆ ಕಾಣಿಸಬಹುದು. ನದಿಯ ತಳಭಾಗದಿಂದ ಸುಮಾರು 10 ಮೀಟರ್ ಎತ್ತರಕ್ಕೆ ನಿರ್ಮಿಸಿದರೆ ಸೇತುವೆ ಗಟ್ಟಿಯಾಗಿ ಹಲವಾರು ವರ್ಷಗಳವರೆಗೆ ಎರಡೂ ಪ್ರದೇಶವವನ್ನು ಬೆಸೆದುಕೊಂಡಿರುತ್ತದೆ.

ಜಾಹೀರಾತು

ಸೇತುವೆಯ ಲಾಭ

  1. ಈ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿದರೆ ರೈತರಿಗೆ ಮತ್ತು ಸ್ಥಳೀಯರಿಗೆ ಕೃಷಿ ಉತ್ಪನ್ನಗಳನ್ನು ಉಪ್ಪಿನಂಗಡಿ, ಪುತ್ತೂರು ಕಡೆಗಳಿಗೆ ಕೊಂಡೊಯ್ಯಲು ಸುಲಭವಾಗುತ್ತದೆ. ಮಣಿನಾಲ್ಕೂರು, ದೇವಸ್ಯಮುಡೂರು, ಸರಪಾಡಿ, ಕಡೇಶಿವಾಲಯದ ರೈತರಿಗೆ ಕನಿಷ್ಠ 10 ರಿಂದ 15 ಕಿಲೋಮೀಟರ್ ನಷ್ಟು ಅಂತರ ಕಡಿಮೆಯಾಗುತ್ತದೆ.
  2. ಸೇತುವೆಯಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 75 ಮತ್ತು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 324 ಸಂಪರ್ಕ ಸಾಧ್ಯ.
  3. ಅಜಿಲಮೊಗರು ಭಾಗದ ಜನರಿಗೆ ದೊಡ್ಡ ಆಸ್ಪತ್ರೆಗಳಿಗೆ ತೆರಳಬೇಕೆಂದಿದ್ದರೆ ಬಿ.ಸಿ.ರೋಡ್ ಕಡೆಗೆ ಬರಬೇಕು. ಸೇತುವೆ ನಿರ್ಮಾಣವಾದರೆ ಪುತ್ತೂರಿಗೂ ಹೋಗುವ ಅವಕಾಶ ಇದೆ. ಇದಲ್ಲದೆ ಸಮೀಪದ ಪ್ರದೇಶಗಳಿಗೆ ತೆರಳುವವರು ಸುತ್ತು ಬಳಸಿ ಸಾಗಬೇಕಿತ್ತು. ಸೇತುವೆ ನಿರ್ಮಾಣವಾದ ಬಳಿಕ ಹತ್ತಿರದ ರಸ್ತೆಗಳೂ ಅಭಿವೃದ್ಧಿ ಹೊಂದುವುದರಿಂದ ಯಾವುದೇ ಆತಂಕವಿಲ್ಲದೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಅರ್ಧ ಗಂಟೆಯೊಳಗೆ ತಲುಪಬಹುದು.
  4. ಧಾರ್ಮಿಕ ಹಾಗೂ ಪ್ರವಾಸೋದ್ಯಮ ನಿಟ್ಟಿನಲ್ಲೂ ಈ ಭಾಗದ ಸೇತುವೆಯನ್ನು ನಿರ್ಮಿಸುವುದು ಅತೀ ಅವಶ್ಯ. ಸರಪಾಡಿ, ಮಣಿನಾಲ್ಕೂರು ಗ್ರಾಮವೂ ಅಭಿವೃದ್ಧಿಕಕ್ಷೆಯಲ್ಲಿ ಸೇರಿಕೊಂಡಂತಾಗುತ್ತದೆ. ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ನೋಡುವುದಾದರೆ ಈ ಎರಡೂ ಧಾರ್ಮಿಕ ಕೇಂದ್ರಗಳ ಪರಿಸರ, ನದಿ ತೀರ ಆಹ್ಲಾದಮಯ ವಾತಾವರಣವನ್ನು ಕಲ್ಪಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಸುತ್ತಾಡುವವರಿಗೆ ಹಾಗೂ ಧಾರ್ಮಿಕ ಕ್ಷೇತ್ರಗಳ ಸಂದರ್ಶಕರಿಗೆ ಈ ಸೇತುವೆ ನಿರ್ಮಾಣ ಮತ್ತಷ್ಟು ಸೌಕರ್ಯ ಒದಗಿಸಿದಂತಾಗುತ್ತದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.